

ಗುಜರಾತ್‌ನ ಮುಂದ್ರಾದಲ್ಲಿ ಅದಾನಿ ಪೋರ್ಟ್ಸ್‌ಗೆ ಹಂಚಿಕೆ ಮಾಡಲಾಗಿದ್ದ 108 ಹೆಕ್ಟೇರ್ ಗೋಮಾಳವನ್ನು ಹಿಂಪಡೆಯುವಂತೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಈಚೆಗೆ ರದ್ದುಪಡಿಸಿದೆ [ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಹಾಗೂ ಗುಜರಾತ್ ಸರ್ಕಾರ ನಡುವಣ ಪ್ರಕರಣ].
ಪರಿಣಾಮಕ್ಕೊಳಗಾದ ಭೂಮಿ ಹಂಚಿಕೆದಾರರಿಗೆ ವಾದಿಸಲು ಅವಕಾಶ ನೀಡದೇ ಮರುಸ್ವಾಧೀನ ಕುರಿತಂತೆ ಹೈಕೋರ್ಟ್ ಆದೇಶ ನೀಡಿರುವುದರಿಂದ ಆದೇಶ ಪ್ರಕ್ರಿಯೆ ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅತುಲ್ ಚಂದೂರ್ಕರ್ ಅವರಿದ್ದ ಪೀಠ ತಿಳಿಸಿದೆ.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಹೈಕೋರ್ಟ್ ಆದೇಶವನ್ನು ರದ್ದುಪಡಿಸುವ ಇಚ್ಛೆ ಹೊಂದಿದ್ದೇವೆ ಎಂದ ನ್ಯಾಯಾಲಯ ಹೈಕೋರ್ಟ್ ನಿರ್ದೇಶನಗಳು 2024 ಜುಲೈ 4ರಂದು ರಾಜ್ಯ ಸರ್ಕಾರ ಗ್ರಾಮದ ಗೋಮಾಳ ಕುರಿತು ಹೊರಡಿಸಿದ ಮರುಸ್ವಾಧೀನ ಆದೇಶದ ಆಧಾರದಲ್ಲಿ ನೇರವಾಗಿ ಉದ್ಭವಿಸಿದೆ ಎಂಬುದಾಗಿ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸದಾಗಿ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಅದಾನಿ ಪೋರ್ಟ್ಸ್ ಆಕ್ಷೇಪಣೆಗಳನ್ನೇದಾರೂ ಸಲ್ಲಿಸಿದ್ದಲ್ಲಿ ಅದನ್ನು ಎರಡು ವಾರಗಳ ಒಳಗೆ ಪರಿಗಣಿಸಬೇಕು ಹಾಗೂ ಸಂಬಂಧಪಟ್ಟ ಎಲ್ಲ ಕಕ್ಷಿದಾರರು ತಮ್ಮ ವಾದ ಮಂಡಿಸಲು ಯುಕ್ತ ಅವಕಾಶ ನೀಡಬೇಕು ಎಂದು ಅದು ಹೇಳಿದೆ. ಅಲ್ಲದೆ 2024 ಜುಲೈ 10ರಂದು ನೀಡಿದ್ದ ಮಧ್ಯಂತರ ಆದೇಶದಂತೆ ಯಥಾಸ್ಥಿತಿ ಮುಂದುವರಿಯಬೇಕು ಎಂದೂ ಅದು ಆದೇಶಿಸಿದೆ. ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ ಬಳಿಕ, ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಗುಜರಾತ್ ಹೈಕೋರ್ಟ್ ಸ್ವತಂತ್ರವಾಗಿ ವಿಚಾರಣೆ ನಡೆಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ವಿವಾದ ತಲೆದೋರಿದ್ದು 2005ರಲ್ಲಿ, ನವಿನಾಳ್ ಗ್ರಾಮದ ಗೋಮಾಳವೆಂದು ವರ್ಗೀಕರಿಸಲಾಗಿದ್ದ 231 ಹೆಕ್ಟೇರ್ ಭೂಮಿಯನ್ನು ಮುಂದ್ರಾ ಪೋರ್ಟ್ ಕಂಪೆನಿಗೆ ಹಂಚಿಕೆ ಮಾಡಲಾಗಿತ್ತು. ನಂತರ ಈ ಸಂಸ್ಥೆ ಅದಾನಿ ಪೋರ್ಟ್ ಇದನ್ನು ಪಡೆದುಕೊಂಡಿತ್ತು ಜೊತೆಗೆ ಅದು ವಿಶೇಷ ಆರ್ಥಿಕ ವಲಯವಾಗಿ ರೂಪುಗೊಂಡಿತ್ತು.
2010–11ರಲ್ಲಿ ಭೂಮಿಗೆ ಬೇಲಿ ಹಾಕುವ ಕೆಲಸ ಆರಂಭವಾದಾಗ, ಪಶುಸಂಗೋಪನೆಗೆ ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ಪಿಐಎಲ್ ಸಲ್ಲಿಸಿದ್ದರು. 2014ರಲ್ಲಿ ಪರ್ಯಾಯ ಮೇಯುವ ಭೂಮಿ ಒದಗಿಸಲಾಗುತ್ತದೆ ಎಂಬ ಸರ್ಕಾರದ ಭರವಸೆ ಆಧರಿಸಿ ಪಿಐಎಲ್ ವಿಲೇವಾರಿ ಮಾಡಲಾಗಿತ್ತು. ಆದರೆ ಬದಲಿ ಭೂಮಿ ನೀಡದ ಹಿನ್ನೆಲೆಯಲ್ಲಿ 2015ರಲ್ಲಿ ಪ್ರಕರಣಕ್ಕೆ ಮರುಜೀವ ನೀಡಲಾಗಿತ್ತು.
2024 ಏಪ್ರಿಲ್‌ನಲ್ಲಿ ಹೈಕೋರ್ಟ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಂತೆ ನಿರ್ದೇಶಿಸಿದ ಬಳಿಕ, ರಾಜ್ಯ ಸರ್ಕಾರ 108 ಹೆಕ್ಟೇರ್ ಭೂಮಿಯನ್ನು ಮರುಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿ 2024 ಜುಲೈ 4ರಂದು ಆದೇಶ ಹೊರಡಿಸಿತು. ಇದನ್ನು ಪ್ರಶ್ನಿಸಿ ಅದಾನಿ ಪೋರ್ಟ್ಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಆದೇಶ ರದ್ದುಪಡಿಸಿರುವ ಸರ್ವೋಚ್ಚ ನ್ಯಾಯಾಲಯ ಪ್ರಕರಣವನ್ನು ಹೊಸದಾಗಿ ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.