ಕಳೆದ ವರ್ಷ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಘೋಷಿಸಿದ್ದ ಕೋವಿಡ್ ಲಾಕ್‌ಡೌನ್ ನಿರ್ಧಾರವನ್ನು ಟೀಕಿಸಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ಲೇಷಣಾತ್ಮಕ ವಿಡಿಯೊ ಪ್ರಸಾರ ಮಾಡಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ ಅವರ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ದಾಖಲಿಸಿದ್ದ ದೇಶದ್ರೋಹ ಪ್ರಕರಣವನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
“ದುವಾ ವಿರುದ್ಧದ ಕಾನೂನು ಪ್ರಕ್ರಿಯೆ ಮತ್ತು ಎಫ್‌ಐಆರ್ ಅನ್ನು ನಾವು ವಜಾಗೊಳಿಸಿದ್ದೇವೆ. ಕೇದಾರನಾಥ್ ಸಿಂಗ್ (ರಾಷ್ಟ್ರದ್ರೋಹ) ತೀರ್ಪಿನ ಪ್ರಕಾರ ಪ್ರತಿಯೊಬ್ಬ ಪತ್ರಕರ್ತ ರಕ್ಷಣೆಗೆ ಅರ್ಹನಾಗಿರುತ್ತಾನೆ” ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ವಿನೀತ್ ಶರಣ್ ಅವರಿದ್ದ ವಿಭಾಗೀಯ ಪೀಠ ತೀರ್ಪಿನಲ್ಲಿ ಹೇಳಿದೆ.
ಇದೇ ವೇಳೆ, ತಜ್ಞರ ಸಮಿತಿ ಒಪ್ಪಿಗೆ ನೀಡದ ಹೊರತು 10 ವರ್ಷಗಳ ಅನುಭವ ಹೊಂದಿರುವ ಯಾವುದೇ ಮಾಧ್ಯಮ ಸಿಬ್ಬಂದಿಯ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಬಾರದು ಎಂದು ನಿರ್ದೇಶಿಸುವಂತೆ ಕೋರಿದ್ದ ದುವಾ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
“ಶಾಸಕಾಂಗದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದರಿಂದಾಗಿ ತಜ್ಞರ ಸಮಿತಿ ರಚಿಸುವ ಮನವಿಯನ್ನು ನಾವು ತಿರಸ್ಕರಿಸಿದ್ದೇವೆ. ಆದರೂ, ವಿನೋದ್ ದುವಾ ವಿರುದ್ಧದ ಎಫ್‌ಐಆರ್ ವಜಾಗೊಳಿಸುವ ಆದೇಶ ಉಳಿಯಲಿದೆ” ಎಂದು ಪೀಠ ಹೇಳಿದೆ.
ವಿನೋದ್ ದುವಾ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷದ ಜೂನ್‌ನಲ್ಲಿ ಮಧ್ಯಂತರ ಆದೇಶ ಹೊರಡಿಸಿತ್ತಾದರೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ನಾಯಕ ದಾಖಲಿಸಿದ್ದ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತ್ತು.
ʼವಿನೋದ್ ದುವಾ ಶೋʼ ಯೂಟ್ಯೂಬ್ ಕಾರ್ಯಕ್ರಮದಲ್ಲಿ ದುವಾ ಅವರು ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ವಿಡಿಯೋದಲ್ಲಿ ಕೋಮುಗಲಭೆ ಸೃಷ್ಟಿಸಿ, ಶಾಂತಿ ಕದಡುವ ಅಂಶಗಳಿವೆ ಎಂದು ದೂರಲಾಗಿತ್ತು. ಇದರ ಆಧಾರದಲ್ಲಿ ಬಿಜೆಪಿ ನಾಯಕ ಅಜಯ್ ಶ್ಯಾಮ್ ನೀಡಿದ್ದ ದೂರು ಆಧರಿಸಿ ದುವಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ದುವಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ124ಎ (ರಾಷ್ಟ್ರದ್ರೋಹ), 268 (ಸಾರ್ವಜನಿಕರಿಗೆ ತೊಂದರೆ), 501 (ಮಾನಹಾನಿ ಅಂಶಗಳ ಪ್ರಕಟ) ಮತ್ತು 505ರ (ಸಾರ್ವಜನಿಕರಿಗೆ ಹಾನಿ ಮಾಡುವ ಉದ್ದೇಶ) ಅಡಿ ಹಾಗೂ ಸುಳ್ಳು ಸುದ್ದಿ ಹರಡಿದ ಕುರಿತು ವಿಪತ್ತು ನಿರ್ವಹಣಾ ಕಾಯಿದೆ ಅಡಿಯೂ ದೂರು ದಾಖಲಿಸಲಾಗಿತ್ತು.
ದೇಶಾದ್ಯಂತ ಘೋಷಿಸಲಾದ ಲಾಕ್‌ಡೌನ್ ಮತ್ತು ಅದನ್ನು ಜಾರಿಗೊಳಿಸಿದ್ದ ರೀತಿಯ ಕುರಿತು ಆಕ್ಷೇಪಾರ್ಹ ವಿಡಿಯೊದಲ್ಲಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಗಂಭೀರವಾಗಿ ಟೀಕಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ದುವಾ ವಿವರಿಸಿದ್ದರು.
ಸರ್ಕಾರಿ ಸಂಸ್ಥೆಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಎಸ್ ವಿ ರಾಜು, ದೂರುದಾರರ ಪರ ಮಹೇಶ್ ಜೇಠ್ಮಲಾನಿ, ಅರ್ಜಿದಾರರ ಪರ ವಿಕಾಸ್ ಸಿಂಗ್ ವಾದಿಸಿದ್ದರು.
ಇದೇ ವಿಡಿಯೊಗೆ ಸಂಬಂಧಿಸಿದಂತೆ ಜೂನ್ 4ರಂದು ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿತ್ತು.