ನೇಮಕಾತಿ, ಅವಧಿ ಸಹಿತ ನ್ಯಾಯಮಂಡಳಿ ಸುಧಾರಣಾ ಕಾಯಿದೆಯ ವಿವಿಧ ನಿಬಂಧನೆ ರದ್ದುಗೊಳಿಸಿದ ಸುಪ್ರೀಂ: ಕೇಂದ್ರಕ್ಕೆ ಛೀಮಾರಿ

ತಾನು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲಂಘಿಸಿ ಕಾನೂನು ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ.
Tribunals Reforms Act, 2021
Tribunals Reforms Act, 2021
Published on

ನ್ಯಾಯಮಂಡಳಿ ಸದಸ್ಯರ ನೇಮಕಾತಿ ಮತ್ತು ಅಧಿಕಾರಾವಧಿಗೆ ಸಂಬಂಧಿಸಿದಂತೆ 2021ರಲ್ಲಿ ಜಾರಿಗೆ ತರಲಾಗಿದ್ದ ನ್ಯಾಯಮಂಡಳಿ ಸುಧಾರಣಾ ಕಾಯಿದೆಯ ವಿವಿಧ ನಿಬಂಧನೆಗಳನ್ನು ಗುರುವಾರ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ತಾನು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲಂಘಿಸಿ ಕಾನೂನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ರದ್ದುಗೊಳಿಸಿದ್ದ ವಿಷಯಗಳನ್ನೇ ಸಣ್ಣ ಪುಟ್ಟ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Also Read
ನ್ಯಾಯಮಂಡಳಿ ಸುಧಾರಣಾ ಕಾಯಿದೆ: ತಮ್ಮ ಪೀಠದ ವಿಚಾರಣೆ ತಪ್ಪಿಸಲು ಮುಂದೂಡಿಕೆ ಕೋರಿದ ಕೇಂದ್ರಕ್ಕೆ ಸಿಜೆಐ ಗವಾಯಿ ತರಾಟೆ

ಕಾಯಿದೆಯ ನಿಬಂಧನೆಗಳನ್ನು ಉಳಿಸಿಕೊಳ್ಳಲಾಗದು. ಸಂವಿಧಾನದ ಅಂತಃಸತ್ವವಾಗಿರುವ ಅಧಿಕಾರ ಪ್ರತ್ಯೇಕತೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಸಾಂವಿಧಾನಿಕ ತತ್ವಗಳನ್ನು ಈ ನಿಬಂಧನೆಗಳು ಉಲ್ಲಂಘಿಸುತ್ತವೆ. ನ್ಯಾಯಮಂಡಳಿ ಸದಸ್ಯರ ನೇಮಕಾತಿ, ಅಧಿಕಾರಾವಧಿ ಮತ್ತು ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಮಾನದಂಡಗಳನ್ನು ಹಲವು ಬಾರಿ ಸ್ಪಷ್ಟಪಡಿಸಿರುವ ತೀರ್ಪುಗಳನ್ನು ಕಾಯಿದೆ ನೇರವಾಗಿ ವಿರೋಧಿಸುತ್ತದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿಂದೆ ಅನೇಕಬಾರಿ ಸರಣಿ ತೀರ್ಪುಗಳ ಮೂಲಕ ಅನೇಕ ವಿಷಯವಾಗಿ ಈ ನ್ಯಾಯಾಲಯವು ನೀಡಿರುವ ನಿರ್ದೇಶನಗಳನ್ನು ಪದೇ ಪದೇ ಒಪ್ಪಿಕೊಳ್ಳಲು ತಿರಸ್ಕರಿಸುವ ಭಾರತ ಒಕ್ಕೂಟ ಸರ್ಕಾರದ ನಡೆಗೆ ನಾವು ನಮ್ಮ ಅಸಮ್ಮತಿಯನ್ನು ಸೂಚಿಸಬೇಕಿದೆ ಎಂದು ಪೀಠ ಹೇಳಿತು.

ನ್ಯಾಯಾಲಯ ಬೆರಳು ಮಾಡಿದ್ದ ದೋಷಗಳನ್ನು ಸರಿಪಡಿಸುವ ಬದಲು ಕಾಯಿದೆಗೆ ಸಂಬಂಧಿಸಿದಂತೆ ಈ ಹಿಂದೆಯೇ ರದ್ದುಗೊಂಡಿದ್ದ ಸೆಕ್ಷನ್‌ಗಳನ್ನು ಕೊಂಚ ಬದಲಾವಣೆ ಮಾಡಿ ಮತ್ತೆ ಜಾರಿಗೊಳಿಸಲಾಗಿದೆ. ಖಡಾಖಂಡಿತವಾಗಿ ಹೇಳುವುದಾದರೆ ಇದು ಶಾಸಕಾಂಗ ನಡೆಸಿದ ಅತಿಕ್ರಮಣ. ಸಾಂವಿಧಾನಿಕ ದೌರ್ಬಲ್ಯಗಳನ್ನು ತೊಡೆದುಹಾಕದೆ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ರದ್ದುಗೊಳಿಸುವ ಯತ್ನ ಇದಾಗಿದೆ. ನಮ್ಮ ಸಾಂವಿಧಾನಿಕ ವ್ಯವಸ್ಥೆಯಡಿ ಇದು ಸ್ವೀಕಾರಾರ್ಹವಲ್ಲ ಆದ್ದರಿಂದ ಆಕ್ಷೇಪಾರ್ಹ ನಿಬಂಧನೆಗಳನ್ನು ಅಸಾಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಲಾಗುತ್ತಿದೆ ಎಂದು ಅದು ಹೇಳಿದೆ.

ಈ ಹಿಂದೆ ಅನೇಕಬಾರಿ ಸರಣಿ ತೀರ್ಪುಗಳ ಮೂಲಕ ಅನೇಕ ವಿಷಯವಾಗಿ ಈ ನ್ಯಾಯಾಲಯವು ನೀಡಿರುವ ನಿರ್ದೇಶನಗಳನ್ನು ಪದೇ ಪದೇ ಒಪ್ಪಿಕೊಳ್ಳಲು ತಿರಸ್ಕರಿಸುವ ಭಾರತ ಒಕ್ಕೂಟ ಸರ್ಕಾರದ ನಡೆಗೆ ನಾವು ನಮ್ಮ ಅಸಮ್ಮತಿಯನ್ನು ಸೂಚಿಸಬೇಕಿದೆ.

ಸುಪ್ರೀಂ ಕೋರ್ಟ್

ಹೀಗೆ ಮಾಡಿರುವುದು ಡಾ. ಅಂಬೇಡ್ಕರ್‌ ಅವರು ಸಂವಿಧಾನ ಸಭೆಯಲ್ಲಿ ಎತ್ತಿ ತೋರಿಸಿದ್ದ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಅಸಮಂಜಸ ಆಡಳಿತ ಎಂದಿರುವ ಪೀಠ ಇಂದು ನೀಡಿದ ತೀರ್ಪನ್ನು ಜಾರಿಗೆ ತರುವವರಗೆ ಹಿಂದೆ ತಾನು ನೀಡಿದ್ದ ತೀರ್ಪುಗಳನ್ವಯವೇ ನೇಮಕಾತಿ ನಡೆಯಬೇಕು ಎಂದು ಪೀಠ ನಿರ್ದೇಶಿಸಿದೆ.

ಇದಲ್ಲದೆ, ದೇಶಾದ್ಯಂತ ನ್ಯಾಯಮಂಡಳಿಗಳ ನೇಮಕಾತಿ, ಆಡಳಿತ ಮತ್ತು ಕಾರ್ಯನಿರ್ವಹಣೆಯಲ್ಲಿ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾಲ್ಕು ತಿಂಗಳೊಳಗೆ ರಾಷ್ಟ್ರೀಯ ನ್ಯಾಯಮಂಡಳಿ ಆಯೋಗವನ್ನು ರಚಿಸಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ತಾನು ನಿಗದಿಪಡಿಸಿರುವ ತತ್ವಗಳಿಗೆ ಆಯೋಗ ಬದ್ಧವಾಗಿರಬೇಕು ಎಂದು ಅದು ಎಚ್ಚರಿಕೆ ನೀಡಿತು.

ನ್ಯಾಯಮಂಡಳಿಗಳಿಗೆ ನೇಮಕಾತಿ, ಸದಸ್ಯರ ಅವಧಿ, ವೇತನ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ತರಲು ನ್ಯಾಯಮಂಡಳಿ ಸುಧಾರಣಾ ಕಾಯಿದೆ- 2021 ಯತ್ನಿಸುತ್ತಿತ್ತು. ಆದರೆ ಕಾಯಿದೆಯಿಂದ ನ್ಯಾಯಾಂಗ ಸ್ವಾತಂತ್ರ್ಯ ಹರಣವಾಗುತ್ತದೆ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ಗೆ ವಿವಿಧ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

Also Read
ನ್ಯಾಯಮಂಡಳಿ ಸುಧಾರಣಾ ಕಾಯಿದೆ ಕುರಿತ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ: ಜುಲೈನಲ್ಲಿ ಅಂತಿಮ ವಿಲೇವಾರಿ

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರವಿಂದ್ ದಾತಾರ್ ಮತ್ತು ಸಿ ಎಸ್ ವೈದ್ಯನಾಥನ್ ವಾದ ಮಂಡಿಸಿದರು.

ಹಿರಿಯ ವಕೀಲರಾದ ಪಿಎಸ್ ಪಟ್ವಾಲಿಯಾ , ಪೋರಸ್ ಎಫ್ ಕಾಕಾ , ಬಲ್ಬೀರ್ ಸಿಂಗ್ , ಸಚಿತ್ ಜಾಲಿ , ಸಿದ್ಧಾರ್ಥ್ ಲೂತ್ರಾ , ಬಿಎಂ ಚಟರ್ಜಿ , ಸಂಜಯ್ ಜೈನ್ , ಗೋಪಾಲ್ ಶಂಕರನಾರಾಯಣನ್, ಪುನೀತ್ ಮಿತ್ತಲ್, ಗಗನ್ ಗುಪ್ತಾ ಮತ್ತು ಬಿಎಂ ಚಟರ್ಜಿ ಹಾಗೂ ವಕೀಲ ನಿನಾದ್ ಲೌಡ್ ಅವರು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದವರ ಪರ ವಾದ ಮಂಡಿಸಿದರು.

ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್  ಐಶ್ವರ್ಯ ಭಾಟಿ ಕೇಂದ್ರದ ಪರವಾಗಿ ವಾದ ಮಂಡಿಸಿದರು.

Kannada Bar & Bench
kannada.barandbench.com