ಅಮೆರಿಕ ಕಡಿಮೆ ದರದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವಾಗ ನಮ್ಮವರೇಕೆ ಹೆಚ್ಚು ಪಾವತಿಸಬೇಕು? ಸುಪ್ರೀಂ ಪ್ರಶ್ನೆ

“ಉತ್ಪಾದಕರು ಕೇಂದ್ರ ಸರ್ಕಾರಕ್ಕೆ 150 ರೂಪಾಯಿ ವಿಧಿಸುತ್ತಿದ್ದು, ರಾಜ್ಯಗಳಿಗೆ ಮಾತ್ರ 300 ಅಥವಾ 400 ರೂಪಾಯಿ ದರ ವಿಧಿಸುತ್ತಿದ್ದಾರೆ… ನಮ್ಮ ದೇಶ ಇಷ್ಟು ದರ ಏಕೆ ಪಾವತಿಸಬೇಕು?” ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ.
Supreme Court and Covid vaccine
Supreme Court and Covid vaccine

ಕೇಂದ್ರ ಸರ್ಕಾರದ ಕೋವಿಡ್‌ ಲಸಿಕಾ ದರ ಮತ್ತು ಕ್ರೋಢೀಕರಣ ನೀತಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅಸಮ್ಮತಿಸಿ ಸೂಚಿಸಿದ್ದು, ರಾಜ್ಯಗಳು ಖರೀದಿಸುವ ಲಸಿಕೆಗೆ ದುಬಾರಿ ದರ ವಿಧಿಸಲಾಗುತ್ತಿದೆ ಎಂದಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಎಲ್‌ ನಾಗೇಶ್ವರ ರಾವ್‌ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠವು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ನಿರ್ದಿಷ್ಟ ಆದೇಶಗಳನ್ನು ಹೊರಡಿಸದಿದ್ದರೂ ಪ್ರಕರಣವನ್ನು ಧಾರ್ಮಿಕವಾಗಿ ಪರಿಶೀಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

“ಅಮೆರಿಕದ ನಾಗರಿಕರಿಗೆ ಆಸ್ಟ್ರಾಜೆನಿಕಾ ಕಡಿಮೆ ದರಕ್ಕೆ ಲಸಿಕೆ ಪೂರೈಸುತ್ತಿರುವಾಗ ನಾವೇಕೆ ಹೆಚ್ಚು ದರ ಪಾವತಿಸಬೇಕು? ಲಸಿಕೆ ಉತ್ಪಾದಕರು ನಿಮಗೆ (ಕೇಂದ್ರ ಸರ್ಕಾರ) 150 ರೂಪಾಯಿ ವಿಧಿಸುತ್ತಿದ್ದು, ರಾಜ್ಯಗಳಿಗೆ ಮಾತ್ರ 300 ಅಥವಾ 400 ರೂಪಾಯಿ ದರ ವಿಧಿಸುತ್ತಿದ್ದಾರೆ… ನಮ್ಮ ದೇಶ ಇಷ್ಟು ದರ ಏಕೆ ಪಾವತಿಸಬೇಕು. ದರ ಏರಿಕೆಯಿಂದ 30 ರಿಂದ 40,000 ಕೋಟಿ ರೂಪಾಯಿ ಹೆಚ್ಚಿನ ಹೊರೆಯಾಗುತ್ತದೆ” ಎಂದು ನ್ಯಾಯಮೂರ್ತಿ ರವೀಂದ್ರ ಭಟ್‌ ಹೇಳಿದರು.

ಔಷಧ ದರ ನಿಯಂತ್ರಣ ಆದೇಶದ 19 ಮತ್ತು 20ನೇ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರವು ಔಷಧ ದರವನ್ನು ನಿಯಂತ್ರಿಸಬಹುದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ದೇಶದಲ್ಲಿ ಕೋವಿಡ್‌ ಸಂಬಂಧಿತ ವಿಷಯಗಳ ನಿರ್ವಹಣೆ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ. ದೇಶದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಹಕಾರ ಒಕ್ಕೂಟ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ನ್ಯಾ. ಭಟ್‌ ಹೇಳಿದರು.

ಮುಂದುವರೆದು, “ನಿಮ್ಮಲ್ಲಿ ಹತ್ತು ಸಾರ್ವಜನಿಕ ಉದ್ದಿಮೆಗಳಿದ್ದು, ನೀವು ಅಲ್ಲಿ ಲಸಿಕೆಯನ್ನು ಉತ್ಪಾದನೆ ಮಾಡಬಹುದು ಎಂದು ನಿಮ್ಮ (ಕೇಂದ್ರ ಸರ್ಕಾರ) ಅಫಿಡವಿಟ್‌ನಲ್ಲಿ ಹೇಳುತ್ತಿದ್ದೀರಿ. ಹಾಗಾದರೆ, ಪೇಟೆಂಟ್‌ ನಿಯಂತ್ರಕರಿಂದ ಪರವಾನಗಿ ಪಡೆದು ಉತ್ಪಾದಿಸಬಹುದು” ಎಂದರು. “ನಾವು ನಿಮಗೆ ನಿರ್ದೇಶನ ನೀಡುತ್ತಿಲ್ಲ. ಆದರೆ, ನೀವು ಅದರತ್ತ ಗಮನಹರಿಸಬೇಕು” ಎಂದು ಒತ್ತಿ ಹೇಳಿದರು.

ರಾಜ್ಯಗಳು ಲಸಿಕೆ ಖರೀದಿಸುವುದರ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಪೀಠವು ರಾಷ್ಟ್ರೀಯ ರೋಗ ಪ್ರತಿರೋಧಕ ನೀತಿಯನ್ನು ಏಕೆ ಅಳವಡಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಶ್ನಿಸಿದೆ.

Also Read
'ಕೋವಿಶೀಲ್ಡ್' ಹೆಸರು ಬಳಸದಂತೆ ಸಿರಮ್ ಸಂಸ್ಥೆಗೆ ತಡೆ ನೀಡಿದರೆ ಲಸಿಕಾ ಕಾರ್ಯಕ್ರಮಕ್ಕೆ ಅಡ್ಡಿ: ಬಾಂಬೆ ಹೈಕೋರ್ಟ್

“ಲಸಿಕೆ ಪಡೆಯುವುದರಲ್ಲಿ ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆಯೇ? ಶೇ. 50ರಷ್ಟು ಲಸಿಕೆಯನ್ನು ರಾಜ್ಯಗಳು ಖರೀದಿಸುತ್ತವೆ ಎಂದು ಕೇಂದ್ರ ಹೇಳುತ್ತಿದೆ. ಲಸಿಕಾ ಉತ್ಪಾದಕರು ಈ ಸಮತೆಯನ್ನು ಹೇಗೆ ಖಾತರಿಪಡಿಸುತ್ತಾರೆ? ರಾಷ್ಟ್ರೀಯ ರೋಗ ಪ್ರತಿರೋಧಕ ಕಾರ್ಯಕ್ರಮ ನೀತಿಯನ್ನು ಅನುಸರಿಸಬಾರದೇಕೆ… ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಖರೀದಿ ಮಾಡಿ, ವಿಕೇಂದ್ರೀಕೃತ ವ್ಯವಸ್ಥೆ ಮೂಲಕ ವಿತರಣೆ ಮಾಡಿ” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಸಲಹೆ ನೀಡಿದರು.

ಪೇಟೆಂಟ್‌ ಕಾಯಿದೆಯ ಸೆಕ್ಷನ್‌ 92 ಅನ್ನು ಚಲಾಯಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆಯೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಪೀಠವು ಆ ಮೂಲಕ ಔಷಧ ಉತ್ಪಾದಿಸುವ ಸಂಬಂಧ ಎಲ್ಲರಿಗೂ ಕಡ್ಡಾಯ ಪರವಾನಗಿ ನೀಡಿ ರಾಯಧನವನ್ನು ಪ್ರತ್ಯೇಕವಾಗಿ ನೀಡಬಹುದು ಎಂದಿತು.

“ಒಮ್ಮೆ ಸಾಂಕ್ರಾಮಿಕತೆಯು ಮುಗಿದ ಮೇಲೆ ಪರವಾನಗಿಯ ರದ್ದಾಗಲಿದೆ ಎನ್ನುವ ಷರತ್ತಿನ ಮೂಲಕ ಲಸಿಕೆ ಉತ್ಪಾದನೆಗೆ ಕಡ್ಡಾಯ ಪರವಾನಗಿಯನ್ನು ನೀಡಬಹುದು. ಸಾರ್ವಜನಿಕ ಆರೋಗ್ಯ ಹಕ್ಕನ್ನು ಸಂರಕ್ಷಿಸಲು ಇಂಥ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಟ್ರಿಪ್ಸ್‌ನ ದೋಹಾ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ” ಎಂದು ನ್ಯಾ. ಚಂದ್ರಚೂಡ್‌ ಅವರು ವಿಚಾರಣೆ ವೇಳೆ ಹೇಳಿದರು.

Related Stories

No stories found.
Kannada Bar & Bench
kannada.barandbench.com