ತೆರಿಗೆ ವಸೂಲಿ: ಐಟಿಎಟಿಗೆ ತೆರಳುವಂತೆ ಕಾಂಗ್ರೆಸ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಆಕ್ಷೇಪ

ಕಾಂಗ್ರೆಸ್‌ನಿಂದ ಸುಮಾರು ₹105 ಕೋಟಿ ಬಾಕಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಮಾರ್ಚ್‌ನಲ್ಲಿ ನಿರಾಕರಿಸಿತ್ತು.
Supreme Court, Congress party
Supreme Court, Congress party
Published on

ಸುಮಾರು ₹105 ಕೋಟಿ ಬಾಕಿ ತೆರಿಗೆ ವಸೂಲಿಗಾಗಿ ಆದಾಯ ತೆರಿಗೆ (ಐಟಿ) ಇಲಾಖೆ ನೀಡಿರುವ ನೋಟಿಸ್‌ಗೆ ತಡೆಯಾಜ್ಞೆ ಪಡೆಯಲು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ (ಐಟಿಎಟಿ) ತೆರಳುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿದ್ದ ದೆಹಲಿ ಹೈಕೋರ್ಟ್‌ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ [ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  ಮತ್ತು ಆದಾಯ ತೆರಿಗೆ ಉಪ ಆಯುಕ್ತರು, ಕೇಂದ್ರ-ವೃತ್ತ 19 ಮತ್ತಿತರರ ನಡುವಣ ಪ್ರಕರಣ].

ಐಟಿಎಟಿ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಮಾರ್ಚ್ 13ರಂದು ದೆಹಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಕಾಂಗ್ರೆಸ್‌ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ  ವಿಚಾರಣೆ ನಡೆಸುತ್ತಿದೆ.

Also Read
₹105 ಕೋಟಿ ತೆರಿಗೆ ವಸೂಲಿ: ಐಟಿಎಟಿ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಈ ನಡುವೆ, ₹ 65.94 ಕೋಟಿ ಮೊತ್ತದ ವಸೂಲಾತಿ ವಿಚಾರ ಸೇರಿದಂತೆ ಈ ಮಧ್ಯೆ ಸಂಭವಿಸಿದ ಬೆಳವಣಿಗೆಗಳನ್ನು ಪರಿಗಣಿಸಿ ಐಟಿಎಟಿ ಮುಂದೆ ತಡೆ ಕೋರಿ ಹೊಸ ಅರ್ಜಿ ಸಲ್ಲಿಸಲು ಕಾಂಗ್ರೆಸ್‌ಗೆ ಹೈಕೋರ್ಟ್ ಅನುಮತಿ ನೀಡಿದೆ.

ಇಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ "ಐಟಿಎಟಿ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಮೇಲ್ಮನವಿ ಸಲ್ಲಿಸಿರುವಾಗ ಮತ್ತೆ ಐಟಿಎಟಿಗೆ ತೆರಳುವಂತೆ ಹೈಕೋರ್ಟ್‌ ಹೇಳಿದ್ದೇಕೆ? ಅದು ಹೇಗೆ ತನ್ನ ಅಧಿಕಾರ ವ್ಯಾಪ್ತಿ ಚಲಾಯಿಸಲು ವಿಫಲವಾಯಿತು?" ಎಂದು ಪ್ರಶ್ನಿಸಿತು.

ಈ ವೇಳೆ, ಈಗಾಗಲೇ ಕಾಂಗ್ರೆಸ್‌ ಪಕ್ಷದಿಂದ ತೆರಿಗೆ ವಸೂಲಾತಿ ಮಾಡಿರುವುದರಿಂದ ವಿಚಾರ ಕೇವಲ ತಾತ್ವಿಕ ಜಿಜ್ಞಾಸೆಯಾಗಿ ಮಾತ್ರವೇ ಉಳಿದಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್‌ ಮತ್ತು ಐಟಿ ಇಲಾಖೆಯ ವಕೀಲ ಜೊಹೆಬ್ ಹೊಸೈನ್ ಅವರು ವಾದಿಸಿದರು.

ಹೊಸದಾಗಿ ಐಟಿಎಟಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತಾದರೂ ಕಾಂಗ್ರೆಸ್‌ ಈ ಮೊದಲು ಅದಕ್ಕೆ ಓಗೊಡಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

Also Read
ತೆರಿಗೆ ಬಾಕಿ ವಸೂಲಾತಿಗೆ ತಡೆ: ಕಾಂಗ್ರೆಸ್ ಮನವಿ ವಜಾಗೊಳಿಸಿದ ಐಟಿಎಟಿ

ಆದರೆ, ಹೈಕೋರ್ಟ್ ಮಧ್ಯಂತರ ತಡೆ ನೀಡಬೇಕಿತ್ತು ಎಂದು ಕಾಂಗ್ರೆಸ್ ಪರ ಹಿರಿಯ ವಕೀಲ ವಿವೇಕ್ ಟಂಖಾ ಮತ್ತು ವಕೀಲ ಪ್ರಸನ್ನ ಎಸ್ ವಾದಿಸಿದರು.

ನಂತರ ನ್ಯಾಯಾಲಯ ಕಾಂಗ್ರೆಸ್ ಮನವಿಗೆ  ಸಂಬಂಧಿಸಿದಂತೆ ನೋಟಿಸ್ ನೀಡಿತು. ಆದರೂ, ಪಕ್ಷದ ಮನವಿಯ ವಿಚಾರಣೆಯನ್ನು ಐಟಿಎಟಿ ಮುಂದುವರಿಸಬಹುದು ಎಂದು ಅದು ಸ್ಪಷ್ಟಪಡಿಸಿತು.

Kannada Bar & Bench
kannada.barandbench.com