
ಸಾಲದ ಸುಳಿಗೆ ಸಿಲುಕಿದ್ದ ಭೂಷಣ್ ಪವರ್ ಅಂಡ್ ಸ್ಟೀಲ್ (ಬಿಪಿಎಸ್‌ಎಲ್ ) ಸಂಸ್ಥೆಗಾಗಿ ಜಎಸ್‌ಡಬ್ಲ್ಯೂ ಸ್ಟೀಲ್ ಪ್ರಸ್ತಾಪಿಸಿದ್ದ ₹19,700 ಕೋಟಿ ಪರಿಹಾರೋಪಾಯ ಯೋಜನೆ ರದ್ದುಗೊಳಿಸಿ ಸಂಸ್ಥೆ ದಿವಾಳಿಯಾಗಿದೆ ಎಂದು ಆದೇಶಿಸಿ ಮೇ 2ರಂದು ತಾನು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಹಿಂಪಡೆದಿದೆ.
ಮೇ 2ರ ಸುಪ್ರೀಂ ತೀರ್ಪು ನಿರ್ಣಾಯಕ ಸಂಗತಿಗಳು ಮತ್ತು ದಾಖಲೆಗಳಲ್ಲಿ ಅಧಿಕೃತವಾಗಿ ಕಂಡುಬರುವ ಕಾನೂನಾತ್ಮಕ ಅಂಶಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ ಎಂದು ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಅವರಿದ್ದ ಪೀಠ ಹೇಳಿದೆ.
ಮೇಲ್ನೋಟಕ್ಕೆ, ವಿವಿಧ ತೀರ್ಪುಗಳಲ್ಲಿ ಈ ಹಿಂದೆ ನಿರ್ಣಯಿಸಿರುವಂತೆ ಕಾನೂನಾತ್ಮಕ ಅಂಶಗಳನ್ನು ಆಕ್ಷೇಪಿಸಲಾದ ತೀರ್ಪು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಇದಲ್ಲದೆ, ವಿವಿಧ ವಾಸ್ತವಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ, ಮಂಡಿಸದೆ ಇದ್ದ ವಾದಗಳನ್ನು ಸಹ ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ. ಇದು ವಿವಾದಾಸ್ಪದವಾಗಿದೆ. ತೀರ್ಪನ್ನು ಹಿಂಪಡೆಯಬೇಕಾದ ಪ್ರಕರಣ ಇದಾಗಿದ್ದು ಹೊಸದಾಗಿ ವಿಚಾರಣೆ ನಡೆಸಬೇಕಿದೆ ಎಂದು ನ್ಯಾಯಾಲಯ ವಿವರಿಸಿದೆ. ವಿವರವಾದ ವಿಚಾರಣೆಗಾಗಿ ಪ್ರಕರಣವನ್ನು ಅದು ಆಗಸ್ಟ್ 7ಕ್ಕೆ ನಿಗದಿಪಡಿಸಿತು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಅನ್ನು ಪ್ರತಿನಿಧಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು ಮೇ 2 ರ ತೀರ್ಪಿನ ಪರಿಣಾಮಗಳನ್ನು ಎತ್ತಿ ತೋರಿಸುವ ವಿವರವಾದ ವಾದ ಮಂಡಿಸಿದರು.
ತುಷಾರ್ ಮೆಹ್ತಾ ಅವರು ಮೇ 2ರ ತೀರ್ಪಿನ ಪರಿಣಾಮಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಕೇವಲ ಅನುಮಾನಗಳ ಆಧಾರದಲ್ಲಿ ತೀರ್ಪು ಶೋಧನೆಗಳನ್ನು ದಾಖಲಿಸಿದೆ. ಜೆಎಸ್‌ಡಬ್ಲ್ಯೂ ಸ್ಟೀಲ್ 2021ರಿಂದ ಬಿಪಿಎಸ್‌ಎಲ್ ಅನ್ನು ಮುನ್ನಡೆಸುತ್ತಿದ್ದು, 25,000 ಮಂದಿ ಪ್ರಸ್ತುತ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನೊಂದು ಆರೋಗ್ಯಕರ ಸಂಸ್ಥೆಯಾಗಿ ಜೆಎಸ್‌ಡಬ್ಲ್ಯೂ ರೂಪಿಸಿದೆ ಎನ್ನುವ ಅಂಶವನ್ನು ಮೆಹ್ತಾ ಪೀಠದ ಗಮನಕ್ಕೆ ತಂದರು.
ಮೆಹ್ತಾ ವಾದಕ್ಕೆ ಸ್ಪಂದಿಸಿದ ಸಿಜೆಐ ತಾವು ಹಾಗೂ ಪೀಠದಲ್ಲಿನ ತಮ್ಮ ಸಹೋದರ ನ್ಯಾಯಮೂರ್ತಿ (ನ್ಯಾ. ಸತೀಶ್ ಚಂದ್ರ ಶರ್ಮ) ಪ್ರಕರಣವನ್ನು ಮರು ಪರಿಗಣಿಸಬೇಕಾದ ಬಗ್ಗೆ ಸಹಮತ ಹೊಂದಿದ್ದೇವೆ. ಅಲ್ಲದೆ, ಪ್ರಕರಣದ ವಿಸ್ತೃತ ಪರಿಣಾಮಗಳನ್ನು ಗಮನಿಸಬೇಕಿದೆ - 25,000 ಮಂದಿಯನ್ನು ಬೀದಿಗೆ ನೂಕಲಾಗದು," ಎಂದರು.
ಹಿನ್ನೆಲೆ: ಭೂಷಣ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಜೆಎಸ್‌ಡಬ್ಲ್ಯೂ ಸ್ಟೀಲ್ ಸಲ್ಲಿಸಿದ್ದ ಪರಿಹಾರೋಪಾಯ ಯೋಜನೆಯನ್ನು ಸುಪ್ರೀಂ ಕೋರ್ಟ್ ಮೇ 2ರಂದು ರದ್ದುಗೊಳಿಸಿ, ಇದು ಕಾನೂನುಬಾಹಿರವಾಗಿದ್ದು, ದಿವಾಳಿ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿತ್ತು. ಅಲ್ಲದೆ, ಸಂಸ್ಥೆಯನ್ನು ಋಣವಿಮೋಚನಾ ಪರಿಸಮಾಪ್ತಿಗೊಳಿಸಲು (ಲಿಕ್ವಿಡೇಷನ್ - ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಮುಚ್ಚಿ ಅದರ ಆಸ್ತಿಪಾಸ್ತಿಗಳನ್ನು ಮಾರುವ ಮೂಲಕ ಸಾಲದಾತರ ಋಣವಿಮೋಚನೆಗೆ ಪ್ರಯತ್ನಿಸುವುದು) ಸೂಚಿಸಿತ್ತು.
ಜೆಎಸ್‌ಡಬ್ಲ್ಯೂ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯಲ್ಲಿ ಮೇ 2ರ ತೀರ್ಪು ಸಾಲಗಾರರ ವಾಣಿಜ್ಯ ವಿವೇಚನೆಯನ್ನು ಮತ್ತು ʼದಿವಾಳಿ ಹಾಗೂ ದಿವಾಳಿತನ ಸಂಹಿತೆʼಯ ಉದ್ದೇಶಗಳನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪು ವಾಸ್ತವಾಂಶಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಆ ಮೂಲಕ ಈ ಹಿಂದೆ ನೀಡಿದ್ದ ತೀರ್ಪುಗಳಿಗೆ ವಿರುದ್ಧವಾದ ತೀರ್ಪನ್ನು ನೀಡಿದೆ ಎಂದು ಅರ್ಜಿ ಆರೋಪಿಸಿತ್ತು.