ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ವಿವಾದ: ತ್ರಿಸದಸ್ಯ ಪೀಠಕ್ಕೆ ವಿಚಾರಣೆ ವರ್ಗಾವಣೆ

ಮುಂದಿನ ಆದೇಶದವರೆಗೆ ₹3,011 ಕೋಟಿ ಟಿಡಿಆರ್‌ ಪತ್ರಗಳನ್ನು ಮೈಸೂರು ರಾಜಮನೆತನದವರು ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.
Supreme Court of India
Supreme Court of India
Published on

ರಾಜ್ಯ ಸರ್ಕಾರ ಹಾಗೂ ಮೈಸೂರಿನ ರಾಜಮನೆತನದ ನಡುವೆ ವಿವಾದಕ್ಕೆ ಕಾರಣವಾಗಿರುವ ಬೆಂಗಳೂರು ಅರಮನೆ ಮೈದಾನದ ಕೆಲ ಭಾಗದ ಟಿಡಿಆರ್‌ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ವರ್ಗಾಯಿಸಿದೆ. ಪ್ರಕರಣದ ಅಂತಿಮ ವಿಚಾರಣೆಯು ಆಗಸ್ಟ್‌ನಲ್ಲಿ ಆರಂಭವಾಗಲಿದೆ.

ಬೆಂಗಳೂರಿನಲ್ಲಿನ ಬಳ್ಳಾರಿ ರಸ್ತೆಯ ವಿಸ್ತರಣೆ ಸಂಬಂಧ ರಾಜ್ಯ ಸರ್ಕಾರವು ಮೈಸೂರಿನ ರಾಜಮನೆತನಕ್ಕೆ ಸೇರಿದ ಅರಮನೆ ಮೈದಾನದ 15.39 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಅವರಿಗೆ ₹3,011 ಕೋಟಿ ಟಿಡಿಆರ್‌ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಪಾವತಿಸಲು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಈ ಹಿಂದೆ ನಿರ್ದೇಶಿಸಿದ್ದ ಪ್ರಕರಣ ಇದಾಗಿದೆ. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ದೀಪಂಕರ್‌ ದತ್ತಾ ಮತ್ತು ಎನ್‌ ಕೋಟೀಶ್ವರ ಸಿಂಗ್‌ ಅವರ ತ್ರಿಸದಸ್ಯ ಪೀಠವು ಈಗಾಗಲೇ ಪಡೆದುಕೊಂಡಿರುವ ಟಿಡಿಆರ್‌ ಅನ್ನು ಬಳಕೆ ಮಾಡದಂತೆ ಪ್ರತಿವಾದಿಯಾಗಿರುವ ಮೈಸೂರು ರಾಜಮನೆತನದ ಪಕ್ಷಕಾರರಿಗೆ ಇದೇ ವೇಳೆ ನಿರ್ದೇಶಿಸಿದೆ.

ರಾಜಮನೆತನದ 15.39 ಎಕರೆಗೆ ಪರಿಹಾರವಾಗಿ ಟಿಡಿಆರ್‌ ಪಾವತಿಸಲು ನಿರ್ದೇಶಿಸಿದ್ದ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲಿನ ಆದೇಶ ಮಾಡಿದೆ.

Also Read
ಮೈಸೂರು ರಾಜಮನೆತನಕ್ಕೆ ₹3,011 ಕೋಟಿ ಟಿಡಿಆರ್‌ ಪಾವತಿ: ನಾಳೆ ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಲಿರುವ ಸಿಜೆಐ ಪೀಠ

ರಾಜ್ಯ ಸರ್ಕಾರ ಸಲ್ಲಿಸಿರುವ ತೀರ್ಪು ಮರುಪರಿಶೀಲನಾ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟು ನಿರ್ದೇಶನ ಮಾಡಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. “ಮರುಪರಿಶೀಲನಾ ಅರ್ಜಿ ತಿರಸ್ಕೃತಗೊಂಡರೆ, ಅಂತಿಮ ಆದೇಶವಾದ ಒಂದು ತಿಂಗಳವರೆಗೆ ಮಧ್ಯಂತರ ಆದೇಶ ಮುಂದುವರಿಯಲಿದೆ ಅಥವಾ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆ ಅದು ಮುಂದುವರಿಯಲಿದೆ” ಎಂದು ಹೇಳಿದೆ.

ವೈರುಧ್ಯಗಳನ್ನು ತಪ್ಪಿಸುವ ದೃಷ್ಟಿಯಿಂದ ನ್ಯಾಯಾಲಯವು ವಿಭಾಗೀಯ ಪೀಠದ ತೀರ್ಪನ್ನು ಅಮಾನತ್ತಿನಲ್ಲಿಟ್ಟಿದೆ.

Kannada Bar & Bench
kannada.barandbench.com