ಟ್ರೂಕಾಲರ್ ಆ್ಯಪ್ ವಿರುದ್ಧದ ಮನವಿ ಪುರಸ್ಕರಿಸಲು ಸುಪ್ರೀಂ ನಕಾರ; ಆ್ಯಪ್‌ಗಳ ನಿಷೇಧ ತನ್ನ ಕೆಲಸವಲ್ಲ ಎಂದ ನ್ಯಾಯಾಲಯ

ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಯೋಗ್ಯವಾದ ಪ್ರಕರಣ ಇದಲ್ಲ ಎಂದು ಪೀಠ ಹೇಳಿದ ಬಳಿಕ ಅರ್ಜಿದಾರರು ಮನವಿಯನ್ನು ಹಿಂಪಡೆದರು.
Supreme Court and truecaller app
Supreme Court and truecaller app

ಟ್ರೂಕಾಲರ್ ಮೊಬೈಲ್ ಅಪ್ಲಿಕೇಶನ್ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ [ಅಂಕಿತ್ ಸೇಥಿ ಇತರರು ಮತ್ತು ಟ್ರೂ ಸಾಫ್ಟ್‌ವೇರ್‌ ಸ್ಕ್ಯಾಂಡಿನೇವಿಯಾ ಎಬಿ ಮತ್ತಿತರರ ನಡುವಣ ಪ್ರಕರಣ].

ತಮ್ಮ ಅನುಮತಿಯಿಲ್ಲದೆ ಆ್ಯಪ್ ವೈಯಕ್ತಿಕ ಮಾಹಿತಿಯನ್ನು ಬಳಕೆ ಮಾಡುತ್ತಿದೆ ಎಂದು ಅಂಕಿತ್ ಸೇಥಿ ಎಂಬುವವರು ದೂರಿದ್ದರು.

ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಮತ್ತು ನ್ಯಾ ಎಸ್‌ ರವೀಂದ್ರ ಭಟ್‌ ಅವರಿದ್ದ ಪೀಠ ಅಂತಹ ಆ್ಯಪ್ ಸ್ಥಗಿತಗೊಳಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದಿತು.

“ಅಂತಹ ಅಪ್ಲಿಕೇಷನ್‌ಗಳನ್ನು ಸ್ಥಗಿತಗೊಳಿಸುವುದು ನ್ಯಾಯಾಲಯದ ಕೆಲಸವೇ? ಆ ರೀತಿಯ ಆ್ಯಪ್‌ಗಳ ವಿರುದ್ಧ ಎಷ್ಟು ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯ?” ಎಂದು ನ್ಯಾ. ಭಟ್‌ ಅಸಮಾಧಾನ ವ್ಯಕ್ತಪಡಿಸಿದರು.

Also Read
ವಿಕಲಚೇತನರ ಬಳಕೆಗೂ ಅನುವಾಗುವಂತೆ ಆ್ಯಪ್ ರೂಪಿಸಲು ಖಾಸಗಿ ಕಂಪೆನಿಗೆ ನ್ಯಾಯಾಲಯದ ನಿರ್ದೇಶನ

ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದಾಗ ಕರೆ ಮಾಡುವವರ ವಿವರವನ್ನು ಟ್ರೂಕಾಲರ್‌ ಅಪ್ಲಿಕೇಶನ್ ಪ್ರದರ್ಶಿಸುತ್ತದೆ. ಇದು ಕರೆ ಸ್ವೀಕರಿಸುವವರಿಗೆ, ಕರೆ ಮಾಡಿದವರು ಯಾರೆಂದು ತಿಳಿಯಲು ಸಹಾಯ ಮಾಡುತ್ತದೆ.

"ನಾನು ಟ್ರೂಕಾಲರ್‌ ಬಳಸುತ್ತಿದ್ದು ನೀವು ಅದನ್ನು ಬಳಸುವುದಿಲ್ಲ ಎಂದು ಭಾವಿಸೋಣ, ಹಾಗಿದ್ದರೂ ನಿಮ್ಮ ವೈಯಕ್ತಿಕ ಮಾಹಿತಿ ನನಗೆ ತಿಳಿಯುತ್ತದೆ" ಎಂದು ಸೇಥಿ ವಾದಿಸಿದರು. ಆಗ ಸಿಜೆಐ ಲಲಿತ್‌ ಹಾಗಾಗಿ ಇದು ಸಂವಿಧಾನದ 32ನೇ ವಿಧಿಯಡಿಯ ಪಿಐಎಲ್‌ ಆಗಿದೆ ಎಂದರು.

ಅಂತಹ ಎಲ್ಲಾ ಅತಿಕ್ರಮಣಕಾರಿ ಆ್ಯಪ್‌ಗಳನ್ನು ಸ್ಥಗಿತಗೊಳಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಲು ಯೋಗ್ಯವಾದ ಪ್ರಕರಣ ಇದಲ್ಲ ಎಂದು ನ್ಯಾಯಾಲಯ ಹೇಳಿದ ಬಳಿಕ ಅರ್ಜಿದಾರರು ಮನವಿಯನ್ನು ಹಿಂಪಡೆದರು.

Related Stories

No stories found.
Kannada Bar & Bench
kannada.barandbench.com