ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಪೂಜೆ ನಡೆಸಲು ಹಿಂದೂ ಪುರೋಹಿತರಿಗೆ ಅನುಮತಿ ನೀಡಿ ಜನವರಿ 31ರಂದು ವಾರಾಣಸಿ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಪೂಜೆ ಮತ್ತು ಮುಸ್ಲಿಂ ಪ್ರಾರ್ಥನೆಗಳಿಗೆ ಅನುವು ಮಾಡಿಕೊಡಲು ಜ್ಞಾನವಾಪಿ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಿಂದೂ ಮತ್ತು ಮುಸ್ಲಿಂ ಪಕ್ಷಕಾರರಿಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಆದೇಶಿಸಿದೆ.
ಹಿಂದೂ ಅರ್ಚಕರು ದಕ್ಷಿಣದಿಂದ ಪ್ರವೇಶಿಸಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಬೇಕು ಮತ್ತು ಮುಸ್ಲಿಮರು ಉತ್ತರದಿಂದ ಪ್ರವೇಶಿಸಿ ಉತ್ತರ ಭಾಗದಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅಂತಿಮವಾಗಿ ಪ್ರಕರಣ ಇತ್ಯರ್ಥವಾಗುವವರೆಗೂ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ಆದೇಶ ತಿಳಿಸಿದೆ.
ಈ ಹಂತದಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಆದೇಶದ ನಂತರ ಮುಸ್ಲಿಂ ಸಮುದಾಯ ಯಾವುದೇ ಅಡೆತಡೆ ಇಲ್ಲದೆ ನಮಾಜ್ ಸಲ್ಲಿಸುತ್ತಿದ್ದು ನೆಲಮಾಳಿಗೆಯಲ್ಲಿ ಹಿಂದೂ ಪುರೋಹಿತರು ಪೂಜೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಆದೇಶಿಸಲಾಗುತ್ತಿದೆ. ಇದರಿಂದ ಎರಡೂ ಸಮುದಾಯಗಳು ಪೂಜೆ- ಪ್ರಾರ್ಥನೆ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯದ ಪೂರ್ವಾನುಮತಿ ಮತ್ತು ಅನುಮತಿ ಪಡೆಯದೆ ಎರಡೂ ಕಡೆಯ ಪಕ್ಷಕಾರರು ಯಥಾಸ್ಥಿತಿಗೆ ಭಂಗ ತರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
ಮುಸ್ಲಿಂ ಪಕ್ಷಗಳು ಸಲ್ಲಿಸಿದ ಮೇಲ್ಮನವಿಯ ಬಗ್ಗೆ ನ್ಯಾಯಾಲಯವು ಹಿಂದೂ ಪಕ್ಷಗಳಿಗೆ ನೋಟಿಸ್ ನೀಡಿದ್ದು, ಪ್ರಕರಣವನ್ನು ಜುಲೈನಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಸಿವಿಲ್ ನ್ಯಾಯಾಲಯ ಜನವರಿ 31ರಂದು ನೀಡಿದ್ದ ಆದೇಶದ ಪ್ರಕಾರವಷ್ಟೇ ಹಿಂದೂ ಪಕ್ಷಕಾರರು ಪೂಜೆ ಮುಂದುವರೆಸಬೇಕು ಎಂದು ಅದು ಆದೇಶಿಸಿದೆ.
ನೆಲಮಾಳಿಗೆಯಲ್ಲಿ ಪೂಜೆ ನಡೆಸುವುದಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯ, ಪೂಜೆ ನಡೆಯುವ ನೆಲಮಾಳಿಗೆಗೆ ತೆರಳುವ ಜಾಗ ಮತ್ತು ಮುಸ್ಲಿಮರು ಪ್ರಾರ್ಥಿಸುವ ಪ್ರದೇಶ ಭಿನ್ನವಾಗಿದೆ ಎಂದು ಅವಲೋಕಿಸಿತು.
ಮುಸ್ಲಿಮರು ಯಾವುದೇ ಅಡೆತಡೆಯಿಲ್ಲದೆ ಪ್ರಾರ್ಥನೆ ಸಲ್ಲಿಸುತ್ತಿದ್ದು ಪೂಜೆ ಸಲ್ಲಿಕೆ ನೆಲಮಾಳಿಗೆಯ ಪ್ರದೇಶಕ್ಕೆ ಸೀಮಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಹಿಂದೂ ಪುರೋಹಿತರಿಗೆ ವಾರಾಣಸಿ ಸಿವಿಲ್ ನ್ಯಾಯಾಲಯ ಕಳೆದ ಜನವರಿಯಲ್ಲಿ ಅನುಮತಿ ನೀಡಿತ್ತು. ಈ ಆದೇಶವನ್ನು ನಂತರ ಅಲಾಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮುಸ್ಲಿಂ ಪಕ್ಷಕಾರರ ಪರವಾಗಿ ಹಿರಿಯ ವಕೀಲ ಹುಜೇಫಾ ಅಹ್ಮದಿ, ಹಿಂದೂ ಪಕ್ಷಕಾರರ ಪರವಾಗಿ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು.