

ಮಸೀದಿಗಳಿಗೆ ಬಾಬರ್ ಅಥವಾ ಬಾಬರಿ ಎಂಬ ನಾಮಕರಣ ಮಾಡದಂತೆ ನಿಷೇಧ ವಿಧಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ದೇವಕೀನಂದನ್ ಅಲಿಯಾಸ್ ದೇವಕಿ ನಂದನ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಅಸಮ್ಮತಿ ಸೂಚಿಸಿತು. ಬಳಿಕ ಮನವಿ ಹಿಂಪಡೆಯಲಾಯಿತು.
ದೇಶದಾದ್ಯಂತ ಬಾಬರ್ ಅಥವಾ ಬಾಬರಿ ಮಸೀದಿ ಅಥವಾ ಅವುಗಳ ಇತರೆ ರೂಪಾಂತರ ಹೆಸರಿನಲ್ಲಿ ಯಾವುದೇ ಮಸೀದಿ ಅಥವಾ ಧಾರ್ಮಿಕ ಕಟ್ಟಡದ ನಿರ್ಮಾಣ, ಸ್ಥಾಪನೆ ಅಥವಾ ನಾಮಕರಣ ಮಾಡುವುದನ್ನು ನಿಷೇಧಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.
"ನಮ್ಮ ದೇಶಕ್ಕೆ ಆಕ್ರಮಣಕಾರರಾಗಿ ಬಂದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಕಟ್ಟಡ ಅಥವಾ ರಚನೆಯನ್ನು ನಿರ್ಮಿಸಬಾರದು" ಎಂದು ಅರ್ಜಿದಾರರು ವಾದಿಸಿದ್ದರು.