ಚುನಾವಣೆಗೂ ಮುನ್ನ ಬಿಹಾರದಲ್ಲಿ ಮಹಿಳೆಯರಿಗೆ ₹10,000 ನಗದು: ಜನ್ ಸುರಾಜ್‌ ಪಕ್ಷದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಚುನಾವಣೆಯಲ್ಲಿ ಸೋತ ಬಳಿಕ ಪರಿಹಾರ ಪಡೆಯಲು ನ್ಯಾಯಾಲಯವನ್ನು ಬಳಸಿಕೊಂಡದ್ದಕ್ಕಾಗಿ ಚುನಾವಣಾ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಅವರ ಪಕ್ಷವನ್ನು ಪೀಠ ತರಾಟೆಗೆ ತೆಗೆದುಕೊಂಡಿತು.
Prashant Kishor, Jan Suraaj Party, Supreme Court
Prashant Kishor, Jan Suraaj Party, Supreme Court
Published on

2025ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಸರ್ಕಾರದ ಕಲ್ಯಾಣ ಯೋಜನೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿ ಚುನಾವಣಾ ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಸ್ಥಾಪಿಸಿರುವ ಜನ್‌ ಸುರಾಜ್‌ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ [ಜನ್‌ ಸುರಾಜ್‌ ಪಕ್ಷ ಮತ್ತು ಭಾರತೀಯ ಚುನಾವಣಾ ಆಯೋಗ ನಡುವಣ ಪ್ರಕರಣ].

ಚುನಾವಣೆಯಲ್ಲಿ ಸೋತ ಬಳಿಕ ಪರಿಹಾರ ಪಡೆಯಲು ನ್ಯಾಯಾಲಯವನ್ನು ಬಳಸಿಕೊಂಡದ್ದಕ್ಕಾಗಿ ಪಕ್ಷವನ್ನು ಸಿಜೆಐ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

Also Read
ಬಿಹಾರದಲ್ಲಿ ಮಹಿಳೆಯರಿಗೆ ₹10,000 ನಗದು: ಸುಪ್ರೀಂ ಕೋರ್ಟ್‌ನಲ್ಲಿ ಜನ್‌ ಸುರಾಜ್ ಪಕ್ಷದ ತಕರಾರು

2025ರ ಚುನಾವಣೆ ವೇಳೆ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 242 ಕ್ಷೇತ್ರಗಳಲ್ಲಿ ಕಿಶೋರ್‌ ಅವರ ಪಕ್ಷ ಸ್ಪರ್ಧಿಸಿತ್ತಾದರೂ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಗಿತ್ತು.

“ನೀವು ಎಷ್ಟು ಮತ ಗಳಿಸಿದ್ದೀರಿ? ಜನರು ತಿರಸ್ಕರಿಸಿದ ನಂತರ ನ್ಯಾಯಾಲಯದ ಮೂಲಕ ಪರಿಹಾರ ಪಡೆಯಲು ಹೊರಟಿದ್ದೀರಾ? ಆ ಯೋಜನೆಯನ್ನು ಆಗಲೇ ಪ್ರಶ್ನಿಸಬೇಕಿತ್ತು. ಅದು ನಮ್ಮ ಮುಂದೆ ಬರಬೇಕಾದ ಮನವಿ ಅಲ್ಲ. ನೀವು ಸಂಪೂರ್ಣ ಚುನಾವಣೆಯನ್ನೇ ಅಮಾನ್ಯಗೊಳಿಸಬೇಕು ಎಂದು ಕೇಳುತ್ತಿದ್ದೀರಿ,” ಎಂದು ಪೀಠ ಕಟುಶಬ್ದಗಳಲ್ಲಿ ನುಡಿಯಿತು. ಪ್ರಕರಣ ನಿರ್ಧರಿಸಲು ಹೈಕೋರ್ಟ್‌ ಸೂಕ್ತ ನ್ಯಾಯಾಲಯ ಎಂತಲೂ ಅದು ಇದೇ ವೇಳೆ ತಿಳಿಸಿತು.

ಪ್ರಕರಣ ಒಂದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಸಂಬಂಧಿತ ಹೈಕೋರ್ಟ್‌ಗೆ ಹೋಗಿ. ಕೆಲವು ಪ್ರಕರಣಗಳಲ್ಲಿ ಉಚಿತ ಕೊಡುಗೆಗಳ ಗಂಭೀರ ಸಮಸ್ಯೆ ಇದೆ. ಅದನ್ನು ಗಂಭೀರವಾಗಿ ಪರಿಶೀಲಿಸುತ್ತೇವೆ ಎಂದು ಪೀಠ ನುಡಿಯಿತು.

ಜನ್ ಸುರಾಜ್ ಪಕ್ಷದ ಪರ ವಾದಿಸಿದ ಹಿರಿಯ ವಕೀಲ ಸಿ ಯು ಸಿಂಗ್, ಚುನಾವಣೆಗೆ ತಕ್ಷಣ ಮುನ್ನ ಈ ಯೋಜನೆಯನ್ನು ಘೋಷಿಸಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ಮತದಾರರಿಗೆ ಹಣ ಪಾವತಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, “ನೇರ ಹಣ ವರ್ಗಾವಣೆ ಯೋಜನೆ ಬೇರೆ. ಇದು ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ ಯೋಜನೆ,” ಎಂದು ಹೇಳಿದರು.

Also Read
ಮಕ್ಕಳ ಭಿಕ್ಷಾಟನೆ: ತಡೆ ಹಾಗೂ ಪುನರ್ವಸತಿಗೆ ಸಮಗ್ರ ಕ್ರಿಯಾ ಯೋಜನೆ, ನೋಡಲ್ ಅಧಿಕಾರಿ ನೇಮಿಸಲು ಹೈಕೋರ್ಟ್‌ ನಿರ್ದೇಶನ

ಕೋರ್ಟ್ ಉಚಿತ ಕೊಡುಗೆಗಳ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದರೂ, ಅರ್ಜಿದಾರರ ಸತ್ಯ ಸಂಧತೆಯನ್ನು ಕೂಡ ಪರಿಶೀಲಿಸಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿತು.

“ಉಚಿತ ಕೊಡುಗೆಗಳ ವಿಷಯವನ್ನು ನಾವು ಪರಿಶೀಲಿಸುತ್ತೇವೆ. ಆದರೆ ಚುನಾವಣೆಯಲ್ಲಿ ಸೋತ ಪಕ್ಷದ ಮನವಿಯ ಆಧರಿಸಿಯಷ್ಟೇ ಅದನ್ನು ಪರಿಗಣಿಸಲಾಗದು. ನೀವು ಅಧಿಕಾರಕ್ಕೆ ಬಂದರೂ ಅದೇ ಕೆಲಸ ಮಾಡುತ್ತೀರಿ,” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಅಂತಿಮವಾಗಿ, ಜನ್ ಸುರಾಜ್ ಪಕ್ಷ ಅರ್ಜಿ ಹಿಂಪಡೆಯಿತು.

Kannada Bar & Bench
kannada.barandbench.com