ಶಾಲೆ ಪುನರಾರಂಭ ಸರ್ಕಾರಗಳಿಗೆ ಬಿಟ್ಟ ವಿಚಾರ: ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

"ಮೂರನೇ ಅಲೆ ಸಾಧ್ಯತೆ ಕಡೆಗಣಿಸಿ ಅವರನ್ನು (ಮಕ್ಕಳನ್ನು) ಶಾಲೆಗೆ ಕಳುಹಿಸಿ ಎಂದು ನ್ಯಾಯಾಂಗದ ಆದೇಶದ ಮೂಲಕ ಹೇಳಲು ನಮಗೆ ಸಾಧ್ಯವಿಲ್ಲ," ಎಂದು ಪೀಠ ಹೇಳಿತು.
Supreme Court
Supreme Court

ಕೋವಿಡ್‌ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ದೇಶದ ಎಲ್ಲಾ ಶಾಲೆಗಳನ್ನು ಪುನರಾರಂಭಿಸುವಂತೆ ಕೋರಿ ದೆಹಲಿ ಮೂಲದ 12 ನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ಇದು ಕಾರ್ಯಾಂಗದ ವ್ಯಾಪ್ತಿಗೆ ಬರುವ ವಿಚಾರವಾಗಿದ್ದು ನ್ಯಾಯಾಲಯಗಳು ಪ್ರವೇಶಿಸುವ ವಲಯವಲ್ಲ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು. "ನ್ಯಾಯಾಲಯಗಳು ಸಾಮಾನ್ಯ ನಿರ್ದೇಶನ ನೀಡಬೇಕಾದ ಸಮಸ್ಯೆ ಇದು ಎಂದು ನಾನು ಭಾವಿಸುವುದಿಲ್ಲ. ಆಡಳಿತದ ಸಂಕೀರ್ಣತೆಯು ನ್ಯಾಯಾಲಯ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲದ ಒಂದು ಸಮಸ್ಯೆಯಾಗಿದೆ. ಮೂರನೇ ಅಲೆ ಸಾಧ್ಯತೆ ಕಡೆಗಣಿಸಿ ಅವರನ್ನು (ಮಕ್ಕಳನ್ನು) ಶಾಲೆಗೆ ಕಳುಹಿಸಿ ಎಂದು ನ್ಯಾಯಾಂಗದ ಆದೇಶದ ಮೂಲಕ ಹೇಳಲು ನಮಗೆ ಸಾಧ್ಯವಿಲ್ಲ, ಮಕ್ಕಳು ಮರಳಿ ಶಾಲೆಗೆ ಹೋಗುವ ಅಗತ್ಯತೆ ಬಗ್ಗೆ ಸರ್ಕಾರಗಳು ಉತ್ತರದಾಯಿತ್ವ ಹೊಂದಿದ್ದು, ಈ ಬಗ್ಗೆ ಅರಿವು ಹೊಂದಿವೆ" ಎಂದು ನ್ಯಾಯಾಲಯ ವಿವರಿಸಿತು.

Also Read
ಕೋವಿಡ್‌ ವ್ಯಾಪಕವಾಗಿ ಹಬ್ಬಲು ಶಾಲೆ ಪುನಾರಂಭ ಕಾರಣವಾಗಬಾರದು: ರಾಜ್ಯಕ್ಕೆ ಹೈಕೋರ್ಟ್‌ ಎಚ್ಚರಿಕೆ

ಕೇಂದ್ರ ಸರ್ಕಾರ, ದೆಹಲಿ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿರ್ಲಕ್ಷ್ಯದಿಂದಾಗಿ ಭೌತಿಕ ತರಗತಿಗಳು ಇಲ್ಲಿಯವರೆಗೆ ಪುನರಾರಂಭವಾಗಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಮಾನಸಿಕ ಹಾಗೂ ದೈಹಿಕ ಪರಿಣಾಮ ಬೀರಿದೆ ಎಂದು ಅಮರ್ ಪ್ರೇಮ್ ಪ್ರಕಾಶ್ ಎಂಬ ಹನ್ನೆರಡನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಲಾಗಿತ್ತು.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮನವಿ ತಪ್ಪಾಗಿ ಮುಂದಿರಿಸಲಾಗಿದೆ ಎಂದಿದ್ದರು. "ಇದು ಪ್ರಚಾರದ ಗಿಮಿಕ್ ಎಂದು ನಾನು ಹೇಳುತ್ತಿಲ್ಲ ಆದರೆ ಅದಕ್ಕಾಗಿಯೇ ಮಕ್ಕಳು ಇದರಲ್ಲಿ ಭಾಗಿಯಾಗಬಾರದು. ಸಾಂವಿಧಾನಿಕ ಪರಿಹಾರಗಳನ್ನು ಹುಡುಕುವ ಬದಲಿಗೆ ಅಧ್ಯಯನದಲ್ಲಿ ತೊಡಗಿಕೊಳ್ಳಲು ನೀವು ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು" ಎಂದು ಅವರು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಹೇಳಿದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರವಿ ಪ್ರಕಾಶ್ ಮೆಹ್ರೋತ್ರಾ, ಶಾಲೆಗಳು ಮುಚ್ಚಿರುವುದರಿಂದ ಮಾನಸಿಕ ತೊಂದರೆ ಎದುರಾಗಿರುವ ಸಂದರ್ಭದಲ್ಲಿ ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಶಾಲೆಗಳು ತೆರೆಯದೇ ಇರುವುದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಆದರೂ ನ್ಯಾಯಾಲಯ ಇದು ವಿವಿಧ ಸ್ಥಳೀಯ ಅಂಶಗಳ ಆಧಾರದ ಮೇಲೆ ಪರಿಗಣಿಸಬೇಕಾದ ಸಮಸ್ಯೆ ಎಂದು ಹೇಳಿತು. ಇದನ್ನು ಪ್ರಜಾಸತ್ತಾತ್ಮಕ ವಿಧಾನದಲ್ಲಿ ನಾವು ಬಿಡೋಣ. ಎಲ್ಲಿ (ಕೋವಿಡ್‌ ಪ್ರಕರಣಗಳ) ಹೆಚ್ಚಳವಾಗಿದೆ ಎಲ್ಲೆಲ್ಲಿ ಏರಿಕೆ ಆಗುತ್ತಿದೆ ಎಂಬುದನ್ನು ನಿರ್ಧರಿಸಲು ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಬಿಡೋಣ ಎಂದು ನ್ಯಾಯಾಲಯ ಹೇಳಿತು.

ಈ ಸಮಸ್ಯೆಗಳು ಗಂಭೀರ ಸಂಕೀರ್ಣತೆಯಿಂದ ಕೂಡಿವೆ. ನ್ಯಾಯಾಂಗದ ಆದೇಶಗಳ ಮೂಲಕ ನಾವು ಇದರೊಳಗೆ ಪ್ರವೇಶ ಪಡೆಯಬೇಕು ಎಂದು ನಾವು ಭಾವಿಸುವುದಿಲ್ಲ ಎಂಬುದಾಗಿ ಅದು ಹೇಳಿತು. ಬಳಿಕ ಅರ್ಜಿದಾರರು ಮನವಿ ಹಿಂಪಡೆಯಲು ಮುಂದಾದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
AP_Prakash__minor__vs_UOI.pdf
Preview

Related Stories

No stories found.
Kannada Bar & Bench
kannada.barandbench.com