ಭಾರತೀಯ ಕುಸ್ತಿ ಸಂಸ್ಥೆ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ

ಈ ತಿಂಗಳ ಆರಂಭದಲ್ಲಿ ಡಬ್ಲ್ಯುಎಫ್ಐ ಚುನಾವಣೆಗೆ ತಡೆಯಾಜ್ಞೆ ವಿಧಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಆಂಧ್ರಪ್ರದೇಶ ಹವ್ಯಾಸಿ ಕುಸ್ತಿ ಸಂಸ್ಥೆಗೆ ಪೀಠ ಸೂಚಿಸಿದೆ
Supreme Court
Supreme Court
Published on

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಚುನಾವಣೆ ನಡೆಸದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ್ದ ಆದೇಶ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ಆಂಧ್ರ ಪ್ರದೇಶ ಹವ್ಯಾಸಿ ಕುಸ್ತಿ ಸಂಸ್ಥೆಮತ್ತು ಹರಿಯಾಣ ಕುಸ್ತಿ ಸಂಸ್ಥೆಇನ್ನಿತರರ ನಡುವಣ ಪ್ರಕರಣ].

ಡಬ್ಲ್ಯುಎಫ್‌ಐ ಚುನಾವಣೆಗೆ ತಡೆ ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಆಂಧ್ರಪ್ರದೇಶ ಹವ್ಯಾಸಿ ಕುಸ್ತಿ ಸಂಸ್ಥೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ  ಪೀಠ ತಿಳಿಸಿದೆ. ಹೈಕೋರ್ಟ್‌ನಲ್ಲಿ ಈಗಾಗಲೇ ವಿಚಾರಣೆ ನಡೆಯುತ್ತಿರುವ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸುವಂತೆ ಅದು ಸಲಹೆ ನೀಡಿದೆ.

ಆಗಸ್ಟ್ 12 ರಂದು ನಡೆಯಬೇಕಿದ್ದ ಡಬ್ಲ್ಯುಎಫ್‌ಐ ಚುನಾವಣೆಗೆ ತಡೆ ನೀಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯ ತಿಳಿಸಿದೆ. ಚುನಾವಣೆಯ್ಲಿ ಭಾಗವಹಿಸಲು ಹರಿಯಾಣ ಕುಸ್ತಿ ಸಂಸ್ಥೆ ಅನರ್ಹ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

Also Read
ಭಾರತೀಯ ಕುಸ್ತಿ ಒಕ್ಕೂಟದ ಕಾರ್ಯಕಾರಿ ಸಮಿತಿ ಚುನಾವಣೆಗೆ ಗುವಾಹಟಿ ಹೈಕೋರ್ಟ್ ತಡೆ: ಭಾನುವಾರದ ಕಲಾಪದ ವೇಳೆ ಆದೇಶ

ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಗೆ ಆಕ್ಷೇಪ ವ್ಯಕ್ತಪಡಿಸಿ ಆಂಧ್ರಪ್ರದೇಶ ಹವ್ಯಾಸಿ ಕುಸ್ತಿ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಭಾರತೀಯ ಕುಸ್ತಿ ಸಂಸ್ಥೆಗೆ ನೀಡಿದ್ದ ಮಾನ್ಯತೆಯನ್ನು (ಚುನಾವಣೆ ನಡೆದಿಲ್ಲ ಎಂಬ ಕಾರಣಕ್ಕೆ) ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯೂಡಬ್ಲ್ಯೂ) ಹಿಂಪಡೆದಿದೆ. ಇದು ರಾಷ್ಟ್ರೀಯ ಅಪಮಾನ ಎಂದು ಮೇಲ್ಮನವಿದಾರರ ವಕೀಲರು ನ್ಯಾಯಾಲಯಕ್ಕೆ ವಿಚಾರಣೆ ವೇಳೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಬೇಕಿದ್ದು ಈ ಹಿಂದೆ ಹೈಕೋರ್ಟ್‌ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿತ್ತು ಎಂದು ಅವರು ವಾದಿಸಿದರು.

Kannada Bar & Bench
kannada.barandbench.com