
ವಂಚಕ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿರುವ ತನ್ನ ವಿರುದ್ಧದ ₹215 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].
ವಿಚಾರಣಾ ನ್ಯಾಯಾಲಯದೆದುರು ವಾದ ಮಂಡಿಸುವಂತೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ಜಾಕ್ವೆಲಿನ್ ಅವರಿಗೆ ಸಲಹೆ ನೀಡಿತು.
ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಜಾಕ್ವೆಲಿನ್ ಮನವಿ ಸಲ್ಲಿಸಿದ್ದರು.
ಜಾಕ್ವೆಲಿನ್ ಅವರು ಸುಕೇಶನ ಅಪರಾಧ ಹಿನ್ನೆಲೆ ತಿಳಿದೂ ಆತನಿಂದ ₹7 ಕೋಟಿ ಮೌಲ್ಯದ ಐಷಾರಾಮಿ ಉಡುಗೊರೆ ಪಡೆದಿದ್ದಾರೆ ಎಂದು ಇ ಡಿ ಆರೋಪಿಸಿತ್ತು. ತನಗೂ ಸುಕೇಶ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಜಾಕ್ವೆಲಿನ್ ಮೊದಲು ನಿರಾಕರಿಸಿದ್ದರು. ಆದರೆ ಸಾಕ್ಷ್ಯಗಳನ್ನು ಒದಗಿಸಿದಾಗ ಅವರು ಒಪ್ಪಿದ್ದು ಸುಖೇಶ್ ಬಂಧನದ ಬಳಿಕ ತನ್ನ ಫೋನ್ ದತ್ತಾಂಶವನ್ನು ಜಾಕ್ವೆಲಿನ್ ಅಳಿಸಿ ಹಾಕಿದ್ದರು ಎಂದು ಅದು ವಾದಿಸಿತ್ತು.
ತನ್ನ ತಪ್ಪನ್ನು ನಿರಂತರವಾಗಿ ನಿರಾಕರಿಸುತ್ತ ಬಂದಿದ್ದ ಜಾಕ್ವೆಲಿನ್, ಈ ಹಿಂದೆ ದೆಹಲಿ ಹೈಕೋರ್ಟ್‌ನಿಂದ ಜಾಮೀನು ಕೋರಿದ್ದರು, ಆದರೆ ಜುಲೈ 3 ರಂದು ನ್ಯಾಯಾಲಯ ಆಕೆಯ ಅರ್ಜಿ ವಜಾಗೊಳಿಸಿತು. ಹೀಗಾಗಿ ಆಕೆ ಮೇಲ್ಮನವಿ ಸಲ್ಲಸಿದ್ದರು.
ಜಾಕ್ವೆಲಿನ್ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ , ತಮ್ಮ ಕಕ್ಷಿದಾರರಿಗೂ ಸುಲಿಗೆ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದರು. ಮೂಲ ಅಪರಾಧಕ್ಕೂಜಾಕ್ವೆಲಿನ್ ಅವರಿಗೂ ಯಾವುದೇ ನಂಟು ಇಲ್ಲ. ಸುಕೇಶ್ ಚಂದ್ರಶೇಖರ್ ಸರ್ಕಾರಿ ಅಧಿಕಾರಿ ಎಂದು ವಂಚಿಸಿ ಮಹಿಳೆಯೊಬ್ಬರಿಂದ ಹಣ ಸುಲಿಗೆಮಾಡಿದ್ದ. ನಂತರ ನಟಿಗೆ ಮರುಳಾಗಿ ಉಡುಗೊರೆ ಕಳುಹಿಸಿದ್ದ ಎಂದು ಅವರು ವಿವರಿಸಿದರು.
₹200 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಜಾಕ್ವೆಲಿನ್ ಸಹಾಯ ಮಾಡಿದ ಯಾವುದೇ ಆರೋಪ ಇಲ್ಲ. ಅಲ್ಲದೆ ಆಕೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಮೋಕಾ) ಕಾಯಿದೆಯಡಿ ಆರೋಪಿಯಲ್ಲ. ಆಕೆಯನ್ನು ಸಾಕ್ಷಿಯಾಗಿ ಪರಿಗಣಿಸಬೇಕಿತ್ತು. ಆಕೆ ಜೈಲಿಗೆ ಹೋಗಿಲ್ಲ, ಹಣ ಕೇಳಿಲ್ಲ. ಮೋಕಾದಡಿ ಆರೋಪ ಇಲ್ಲದಿದ್ದಾಗ ಪಿಎಂಎಲ್‌ಎ ಅಡಿಯೂ ಆರೋಪ ಮಾಡಲಾಗದು ಎಂದರು.
ವಾದ ಆಲಿಸಿದ ನ್ಯಾಯಾಲಯ ₹200 ಕೋಟಿಯ ಒಂದು ಭಾಗ ಜಾಕ್ವೆಲಿನ್‌ಗೆ ಉಡುಗೊರೆಯ ರೂಪದಲ್ಲಿ ಬಂದಿದೆ. ಇಬ್ಬರು ಆಪ್ತ ಸ್ನೇಹಿತರಿದ್ದಾರೆ ಎಂದುಕೊಳ್ಳಿ - ಒಬ್ಬರು ಇನ್ನೊಬ್ಬರಿಗೆ ಏನನ್ನಾದರೂ ಉಡುಗೊರೆ ಕೊಟ್ಟು ನಂತರ ಅವರು ಮೂಲ ಅಪರಾಧ (ಅಕ್ರಮ ಹಣ ಸೃಜನೆಗೆ ಕಾರಣವಾಗುವ ಪ್ರಕರಣ) ಮಾಡಿದ್ದರೆ, ಅದು ಆ ಆಪ್ತ ಸ್ನೇಹಿತನ ಪಾಲಿಗೆ ಕಷ್ಟದಾಯಕವಾಗುತ್ತದೆ ಎಂದಿತು.
ಅಕ್ರಮ ಹಣ ವರ್ಗಾವಣೆ ಕಾಯಿದೆ ಕುರಿತು ವಿಜಯ್ ಮದನ್‌ಲಾಲ್ ಚೌಧರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈಗಲೂ ಜಾರಿಯಲ್ಲಿದ್ದು ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಲಾಗಿದ್ದರೂ ತೀರ್ಪಿನ ಕುರಿತು ಆದೇಶ ಬರುವವರೆಗೆ ಅದು ಅನ್ವಯವಾಗಿಯೇ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಅಂತೆಯೇ ತಾನು ಅಪೇಕ್ಷೆ ಪಡದಿದ್ದರೂ ವಂಚಕ ಸುಕೇಶ್ ಚಂದ್ರಶೇಖರ್ ತನಗೆ ಉಡುಗೊರೆ ನೀಡಿದ್ದ ಎಂಬ ಜಾಕ್ವೆಲಿನ್ ವಾದದ ಕುರಿತು ಪರಿಶೀಲಿಸುವ ಸ್ವಾತಂತ್ರ್ಯ ವಿಚಾರಣಾ ನ್ಯಾಯಾಲಯಕ್ಕೆ ಇದೆ ಎಂದು ಪೀಠ ತಿಳಿಸಿತು.