
ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರ ಗುರುತು ಸಾಬೀತಿಗಾಗಿ ಆಧಾರ್, ಪಡಿತರ ಚೀಟಿ ಮತ್ತು ಚುನಾವಣಾ ಫೋಟೋ ಗುರುತಿನ ಚೀಟಿಗಳನ್ನೂ (ಇಪಿಐಸಿ- ಎಪಿಕ್ ಕಾರ್ಡ್) ದಾಖಲೆಗಳಾಗಿ ಸ್ವೀಕರಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲಹೆ ನೀಡಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಗುರುತನ್ನು ಸಾಬೀತುಪಡಿಸುವ ಸಾಧನವಾಗಿ ಆಧಾರ್ ಕಾರ್ಡನ್ನು ಯಾಕೆ ನಿರಾಕರಿಸಲಾಗುತ್ತಿದೆ ಎಂದು ಪದೇ ಪದೇ ಪ್ರಶ್ನಿಸಿತು.
ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ತಡೆ ನೀಡುವ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸದ ನ್ಯಾಯಾಲಯ ಗುರುತಿನ ಪುರಾವೆಗಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಲ್ಲಿ ಆಧಾರ್, ಪಡಿತರ ಚೀಟಿ ಮತ್ತು ಎಪಿಕ್ ಕಾರ್ಡ್ ಸೇರಿಸದಿರಲು ನಿರ್ಧರಿಸಿದರೆ ವಿವರಣೆ ನೀಡುವಂತೆ ಇಸಿಐಗೆ ಸೂಚಿಸಿತು.
ಮತದಾರರ ಪರಿಶೀಲನೆಗಾಗಿ ದಾಖಲೆಗಳ ಪಟ್ಟಿಯಲ್ಲಿ 11 ದಾಖಲೆಗಳು ಸೇರಿದ್ದು ಅದು ಸಮಗ್ರವಾಗಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಹೀಗಾಗಿ ಆಧಾರ್ ಕಾರ್ಡ್, ಎಪಿಕ್ ಕಾರ್ಡ್ ಮತ್ತು ಪಡಿತರ ಚೀಟಿ ಸೇರಿಸಿದರೆ ನ್ಯಾಯಯುತವಾಗಿರುತ್ತದೆ. ದಾಖಲೆಗಳನ್ನು ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ದಾಖಲೆಗಳನ್ನು ಸ್ವೀಕರಿಸದಿದ್ದರೆ ಅದಕ್ಕೆ ಕಾರಣಗಳನ್ನು ನೀಡಬೇಕು. ಅದು ಅರ್ಜಿದಾರರಿಗೆ ತೃಪ್ತವಾಗುವಂತಿರಬೇಕು. ಈ ಮಧ್ಯೆ ಅರ್ಜಿದಾರರು ಮಧ್ಯಂತರ ತಡೆಗೆ ಒತ್ತಾಯಿಸುತ್ತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲು ಭಾರತೀಯ ಚುನಾವಣಾ ಆಯೋಗ ಕೈಗೊಂಡ ನಿರ್ಧಾರ ಪ್ರಶ್ನಿಸಿ ವಿವಿಧ ವಿರೋಧ ಪಕ್ಷಗಳ ನಾಯಕರು ಮತ್ತು ಕೆಲ ಸರ್ಕಾರೇತರ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.
ಬರುವ ನವೆಂಬರ್‌ನಲ್ಲಿ ಬಿಹಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಕಾಲಮಿತಿ ಬಹಳ ಕಡಿಮೆ ಇದೆ ಎಂಬುದನ್ನು ನ್ಯಾಯಾಲಯ ಇಂದು ಗಮನಿಸಿತು. ಅಂತೆಯೇ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಅದು ಇಸಿಐಗೆ ನೋಟಿಸ್ ಜಾರಿ ಮಾಡಿತು.
ಪ್ರಕರಣದ ವಿಚಾರಣೆಯ ಅಗತ್ಯವಿದೆ ಎಂದ ನ್ಯಾಯಾಲಯವು ಅರ್ಜಿಯನ್ನು ಜುಲೈ 28ರಂದು ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿತು. ಇಸಿಐ ತನ್ನ ಪ್ರತ್ಯುತ್ತರವನ್ನು ಜುಲೈ 21ರ ಒಳಗೆ ಸಲ್ಲಿಸಲು ಹಾಗೂ ಅದಕ್ಕೆ ಆಕ್ಷೇಪಣೆಗಳನ್ನು ಜುಲೈ 21ರೊಳಗೆ ಸಲ್ಲಿಸಲು ಸೂಚಿಸಿತು.
ಪ್ರಕ್ರಿಯೆಯನ್ನು ನಡೆಸಲು ಇಸಿಐ ನ ಅಧಿಕಾರಗಳು. ಮತದಾರರ ಪಟ್ಟಿ ಪರಿಷ್ಕರಿಸಲು ಇಸಿಐಗೆ ಇರುವ ಅಧಿಕಾರ, ಅಧಿಕಾರ ಚಲಾಯಿಸುವ ಕಾರ್ಯವಿಧಾನ ಹಾಗೂ ಪ್ರಕ್ರಿಯೆಗೆ ಅತಿ ಕಡಿಮೆ ಕಾಲಾವಧಿ ಇರುವುದರ ಸುತ್ತ ನ್ಯಾಯಾಲಯದ ವಿಚಾರಣೆ ಕೇಂದ್ರೀಕೃತವಾಗಿರಲಿದೆ.
ವಿಚಾರಣೆಯ ಸಮಯದಲ್ಲಿ, ಗುರುತಿನ ಪುರಾವೆಯಾಗಿ ಅನುಮತಿಸಲಾದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸೇರಿಸಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.