ಗಾಯಕ ಟಿ ಎಂ ಕೃಷ್ಣ ಅವರಿಗೆ ಸುಬ್ಬುಲಕ್ಷ್ಮಿ ಪ್ರಶಸ್ತಿ ವಿವಾದ: ಸೋಮವಾರ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್

ಭಾನುವಾರ, ಪ್ರಶಸ್ತಿ ಪ್ರದಾನ ಸಮಾರಂಭ ಇದ್ದು ಸೋಮವಾರ ತೀರ್ಪು ನೀಡಿದರೆ ನಿರುಪಯುಕ್ತವಾಗುತ್ತದೆ ಎಂದು ವೆಂಕಟರಾಮನ್ ಹೇಳಿದರು. ಆಗ ನ್ಯಾಯಾಲಯ ಯಾವಾಗ ಬೇಕಾದರೂ ಪ್ರಶಸ್ತಿ ಹಿಂಪಡೆಯಲು ಸಾಧ್ಯವಿದೆ ಎಂದು ನೆನಪಿಸಿತು.
TM Krishna and Supreme Court
TM Krishna and Supreme CourtTM Krishna (FB)
Published on

ಕರ್ನಾಟಕ ಸಂಗೀತ ಪ್ರಕಾರದ ಮಹತ್ವದ ಗಾಯಕ ಮತ್ತು ಹೋರಾಟಗಾರ ಟಿ ಎಂ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಎಂಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಈಚೆಗೆ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಾಳೆ ಕೈಗೆತ್ತಿಕೊಳ್ಳಲಿದೆ.

ಭಾನುವಾರ (ಇಂದು) ಪ್ರಶಸ್ತಿ ಸಮಾರಂಭ ನಡೆಯಲಿರುವುದರಿಂದ ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂಬ ಮನವಿಯನ್ನು ಶುಕ್ರವಾರ ಪುರಸ್ಕರಿಸದ ಸಿಜೆಐ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್‌ ಕುಮಾರ್‌ ಅವರಿದ್ದ ಪೀಠ ಸೋಮವಾರವೇ ಪ್ರಕರಣ ಆಲಿಸುವುದಾಗಿ ತಿಳಿಸಿತ್ತು.

Also Read
ಎಂ ಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಗಾಯಕ ಟಿಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡದಂತೆ ಮದ್ರಾಸ್ ಹೈಕೋರ್ಟ್ ತಡೆ

ಕುತೂಹಲಕಾರಿಯಾಗಿ, ಸುಪ್ರೀಂ ಕೋರ್ಟ್‌ ಈ ನಿರ್ಧಾರ ಪ್ರಕಟಿಸುವುದಕ್ಕೂ ಕೆಲ ನಿಮಿಷಗಳ ಹಿಂದಷ್ಟೇ ನ್ಯಾಯಮೂರ್ತಿಗಳಾದ ಎಸ್‌ ಎಸ್ ಸುಂದರ್ ಮತ್ತು ಪಿ ಧನಬಾಲ್ ಅವರಿದ್ದ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ಅನುಮತಿಸಿತ್ತು. ಆ ಮೂಲಕ ಕೃಷ್ಣ ಅವರಿಗೆ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಪ್ರಶಸ್ತಿ ನೀಡದಂತೆ ಈ ಹಿಂದೆ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು ನೀಡಿದ್ದ ತಡೆಯಾಜ್ಞೆಯನ್ನು ಅದು ರದ್ದುಗೊಳಿಸಿತ್ತು.

ಕೂಡಲೇ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ ಶ್ರೀನಿವಾಸನ್ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎನ್ ವೆಂಕಟರಾಮನ್ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. "ಎರಡು ನಿಮಿಷಗಳ ಹಿಂದಷ್ಟೇ ತೀರ್ಪು ನೀಡಲಾಗಿದೆ. ಇದು ಅಸಾಧಾರಣವಾಗಿದೆ. ಅವರು (ಟಿಎಂ ಕೃಷ್ಣ) ಆಕೆಯನ್ನು (ಸುಬ್ಬುಲಕ್ಷ್ಮಿಯ) ಸೆಕ್ಸಿಸ್ಟ್ ಎಂದು ಕರೆದಿದ್ದಾರೆ. ಪ್ರಶಸ್ತಿ  ನೀಡಬಾರದು" ಎಂದು  ವೆಂಕಟರಾಮನ್ ಹೇಳಿದರು.

ಸೋಮವಾರ ಪ್ರಕರಣ ಆಲಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದಾಗ ಭಾನುವಾರ, ಪ್ರಶಸ್ತಿ ಪ್ರದಾನ ಸಮಾರಂಭ ಇದ್ದು ಸೋಮವಾರ ತೀರ್ಪು ನೀಡಿದರೆ ನಿರುಪಯುಕ್ತವಾಗುತ್ತದೆ ಎಂದರು. ಆಗ ನ್ಯಾಯಾಲಯ ಯಾವಾಗ ಬೇಕಾದರೂ ಪ್ರಶಸ್ತಿ ಹಿಂಪಡೆಯಲು ಸಾಧ್ಯವಿದೆ ಎಂದು ನೆನಪಿಸಿತು.

Also Read
ಗಣಿಗಾರಿಕೆ, ಮದ್ರಾಸ್ ಹೈಕೋರ್ಟ್ ಹಾಗೂ ಟಿ ಎಂ ಕೃಷ್ಣರ ʼಭೂಮಿಗೀತʼ…

ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಪ್ರಶಸ್ತಿ ನೀಡದಂತೆ ತಡೆಯಾಜ್ಞೆ ವಿಧಿಸಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು ಮ್ಯೂಸಿಕ್ ಅಕಾಡೆಮಿ  ಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದಕ್ಕೆ ಅಥವಾ ನೀಡದೇ ಇರುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿಲ್ಲ ಆದರೆ, ಪ್ರಶಸ್ತಿಗೆ ಸುಬ್ಬುಲಕ್ಷ್ಮಿ ಅವರ ಹೆಸರಿಡಬಾರದು ಎಂದು ಸ್ಪಷ್ಟಪಡಿಸಿದ್ದರು.

ಸುಬ್ಬುಲಕ್ಷ್ಮಿಅವರ ಉಯಿಲಿನಲ್ಲಿರುವ ಆಶಯಗಳಿಗೆ ವಿರುದ್ಧವಾಗಿ ಪ್ರಶಸ್ತಿ ನೀಡುವುದು ತಮಗೂ ತಮ್ಮ ಕುಟುಂಬಕ್ಕೂ ಇಷ್ಟವಿಲ್ಲ ಎಂದಿದ್ದ ಸುಬ್ಬಲಕ್ಷ್ಮಿ ಅವರ ಮೊಮ್ಮಗ  ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ನೀಡುವುದನ್ನು ನಿರ್ಬಂಧಿಸುವುದಷ್ಟೇ ಅಲ್ಲದೆ ಇಡಿಯಾಗಿ ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲೇ ಪ್ರಶಸ್ತಿ ನೀಡದಂತೆ ಆದೇಶಿಸಬೇಕೆಂದು ಕೋರಿದ್ದರು.

Kannada Bar & Bench
kannada.barandbench.com