
ಪೋಕರ್ ಕ್ಲಬ್ ಸೋಗಿನಲ್ಲಿ ಜೂಜು ಅಡ್ಡೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಡಿಎಂ ಗೇಮಿಂಗ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಕರ್ನಾಟಕ ಸರ್ಕಾರ ಮತ್ತು ಡಿಎಂ ಗೇಮಿಂಗ್ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಕರ್ನಾಟಕ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿದ್ದನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಎತ್ತಿಹಿಡಿದಿದೆ. ಆದರೆ, ಪೋಕರ್ ಅದೃಷ್ಟದ ಆಟವೋ ಅಥವಾ ಕೌಶಲ್ಯದ ಆಟವೋ ಎಂಬ ಕುರಿತು ನ್ಯಾಯಾಲಯ ತೀರ್ಪು ನೀಡಲಿಲ್ಲ.
ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರ ಇಲ್ಲ. ಆದರೆ ಪೋಕರ್ ಅವಕಾಶದಾಟವೇ ಅಲ್ಲವೇ ಎಂಬ ಕಾನೂನು ಪ್ರಶ್ನೆಯನ್ನು ಮುಕ್ತವಾಗಿ ಇಡಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಡಿಎಂ ಗೇಮಿಂಗ್ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿರುವ ಗೋಲ್ಡನ್ ಏಸ್ ಪೋಕರ್ ರೂಮ್, ಪೋಕರ್ ಸೋಗಿನಲ್ಲಿ ಜೂಜಾಟ ನಡೆಸುತ್ತಿದೆ ಎಂದು ಆರೋಪಿಸಿ ಜೂನ್ 5, 2024 ರಂದು ದೂರು ದಾಖಲಾಗಿತ್ತು.
ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 79, 80 ಮತ್ತು 103ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಡಿ ಎಂ ಗೇಮಿಂಗ್ ಮೇಲೆ ದಾಳಿ ನಡೆಸಿ ₹5.46 ಲಕ್ಷ, ಪೋಕರ್ ಚಿಪ್ಸ್ ಮತ್ತು ಕಾರ್ಡ್‌ಗಳನ್ನು ವಶಪಡಿಸಿಕೊಂಡಿತ್ತು.
ನಿರ್ದೇಶಕ ಮುಖೇಶ್ ವಿ ಚಾವ್ಲಾ ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಪರಿಣಾಮ ಡಿಎಂ ಗೇಮಿಂಗ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಫ್‌ಐಆರ್ ರದ್ದುಗೊಳಿಸಿ, ಪೋಕರ್ ಒಂದು ಕೌಶಲ್ಯದ ಆಟವಾಗಿದ್ದು ಕಾನೂನುಸಮ್ಮತವಾದ ಆಟದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿತ್ತು.
ರಾಜ್ಯ ಸರ್ಕಾರ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತು. ಪೋಕರ್ ಕೂಡ ಇಸ್ಪೀಟ್ ಆಟದಂತೆಯೇ ಅದೃಷ್ಟವನ್ನು ನೆಚ್ಚಿಕೊಂಡ ಆಟವಾಗಿದ್ದು ಭಾರತೀಯ ಕಾನೂನಿನ ಪ್ರಕಾರ ಜೂಜಿಗೆ ಸಮ ಎಂದಿತು.
ಯುವಕರು ಮತ್ತು ವಿದ್ಯಾರ್ಥಿಗಳನ್ನು ಡಿ ಎಂ ಗೇಮಿಂಗ್ ಪ್ರಚೋದಿಸುತ್ತಿದ್ದು ಅನುಮತಿ ನೀಡಿದ ಅವಧಿ ಮೀರಿ ಜೂಜು ಕೇಂದ್ರದಲ್ಲಿ ಚಟುವಟಿಕೆಗಳು ನಡೆದಿವೆ. ಅತಿಯಾಗಿ ಜೂಜಾಡುವಂತೆ ಪ್ರೇರೇಪಿಸುವ ಮೂಲಕ ಅಕ್ರಮ ಲಾಭ ಗಳಿಸಲು ವ್ಯವಹಾರ ಮಾದರಿ ರಚಿಸಲಾಗಿದೆ ಎಂದು ಕೂಡ ಕರ್ನಾಟಕ ಸರ್ಕಾರ ಆರೋಪಿಸಿತ್ತು. ಆದರೆ ಈ ವಾದಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ.
ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತೀತ್ ಚಡ್ಡಾ ಮತ್ತು ವಕೀಲ ಡಿಎಲ್ ಚಿದಾನಂದ ವಾದ ಮಂಡಿಸಿದರು. ಪ್ರತಿವಾದಿಗಳನ್ನು ವಕೀಲರಾದ ಅಜ್ರಾ ರೆಹಮಾನ್, ರೋಹಿತ್ ಶರ್ಮಾ, ವನ್ಯಾ ಗುಪ್ತಾ ಮತ್ತು ಜಾಕಿರ್ ರೆಹಮಾನ್ ಪ್ರತಿನಿಧಿಸಿದ್ದರು.
[ಆದೇಶದ ಪ್ರತಿ]