ಪೆಟ್ರೋಲ್‌ಗೆ ಶೇ. 20ರಷ್ಟು ಎಥೆನಾಲ್ ಮಿಶ್ರಣ ಪ್ರಶ್ನಿಸಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಇ20 ಇಂಧನದ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದಿತು.
Petrol Pump
Petrol PumpImage for representative purpose
Published on

ಗ್ರಾಹಕರಿಗೆ ಎಥೆನಾಲ್ ಮುಕ್ತ ಇಂಧನ ಬಳಸುವ ಆಯ್ಜೆ ನೀಡದೆ ಶೇ.20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇ20) ಬಿಡುಗಡೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರವು ಇ20 ಇಂಧನದ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ವಾದಿಸಿತು. ಅಂತಿಮವಾಗಿ ಸಿಜೆಐ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್‌ ಚಂದ್ರನ್‌ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

Also Read
ಶೇ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪಿಐಎಲ್

ಸರ್ಕಾರವು ಈ ವಿಚಾರದಲ್ಲಿ ಅರ್ಜಿದಾರರ ಅರ್ಹತೆಯನ್ನೂ ಪ್ರಶ್ನಿಸಿತು. ವಕೀಲ ಅಕ್ಷಯ್ ಮಲ್ಹೋತ್ರಾ ಅವರು ಎಥೆನಾಲ್‌ ಮಿಶ್ರಣ ಇಂಧನದ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಏಪ್ರಿಲ್ 2023ಕ್ಕಿಂತ ಮೊದಲು ಭಾರತದಲ್ಲಿ ತಯಾರಾದ ವಾಹನಗಳು ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಹೊಂದಿಕೆಯಾಗುವುದಿಲ್ಲ ಮತ್ತು 2 ವರ್ಷ ಹಳೆಯದಾದ ವಾಹನಗಳು, ಬಿಎಸ್‌- VI ಮಾನದಂಡಗಳಿಗೆ ಅನುಗುಣವಾಗಿದ್ದರೂ ಸಹ ಶೇಕಡಾ ಇಪ್ಪತ್ತರಷ್ಟು ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಆಟೋಮೊಬೈಲ್ ತಯಾರಕರು ಮತ್ತು ಸಂಶೋಧನಾ ಸಂಸ್ಥೆಗಳ ವರದಿ ಪ್ರಕಾರ, ಎಥೆನಾಲ್ ಮಿಶ್ರಣದಿಂದ ಎಂಜಿನ್ ಸವೆತ ಉಂಟಾಗುತ್ತದೆ, ಇಂಧನ ದಕ್ಷತೆ ಕಡಿಮೆ ಆಗುತ್ತದೆ ಹಾಗೂ ವಾಹನಗಳು ಅಕಾಲಿಕವಾಗಿ ಹಾಳಾಗುತ್ತವೆ ಎಂದು ಅರ್ಜಿ ಆಕ್ಷೇಪಿಸಿತ್ತು.

ಅಮೆರಿಕದಲ್ಲಿ ಶೇಕಡಾ 10ರಷ್ಟು ಎಥನಾಲ್‌ ಮಿಶ್ರಿತ ಪೆಟ್ರೋಲ್‌ ಬಳಸಲು ಹೇಳಿದ್ದರೂ ಎಥೆನಾಲ್-ಮುಕ್ತ ಪೆಟ್ರೋಲ್ ಸಹ ಲಭ್ಯವಿದೆ. ಐರೋಪ್ಯ ಒಕ್ಕೂಟದಲ್ಲಿ ಶೇಕಡಾ 5 ಮತ್ತು ಶೇಕಡಾ 10ರಷ್ಟು ಎಥೆನಾಲ್‌ ಮಿಶ್ರಣಗೊಂಡಿದೆ ಎಂಬ ಲೇಬಲ್‌ನೊಂದಿಗೆ ಪೂರೈಸಲಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದರು.

ಗ್ರಾಹಕರಿಗೆ ಎಥೆನಾಲ್ ಮುಕ್ತ ಇಂಧನ ಬಳಸುವ ಆಯ್ಜೆಯನ್ನೂ ನೀಡಬೇಕು ಎಂದು ಅರ್ಜಿದಾರರ ಪರವಾಗಿ ಇಂದು ಹಾಜರಾದ ಹಿರಿಯ ವಕೀಲ ಶಾದಾನ್ ಫರಾಸತ್  ವಾದಿಸಿದರು.

Also Read
ನಿರಾಣಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಹಣ ಬಾಕಿ: ₹240 ಕೋಟಿ ಪಾವತಿಸುವ ಬಗ್ಗೆ ಮುಚ್ಚಳಿಕೆ ನೀಡಿ ಎಂದ ಹೈಕೋರ್ಟ್‌

"ನಮಗೆ ಬೇಕಾದ ಆಯ್ಕೆ ನೀಡಬೇಕು. ನಾವು ಇ20 ಇಂಧನವನ್ನು ವಿರೋಧಿಸುವುದಿಲ್ಲ ಆದರೆ ಪೂರೈಕೆದಾರರು ಎಥೆನಾಲ್‌ ಮಿಶ್ರಣ ಮಾಡಿದ್ದೇವೆ ಎಂಬುದನ್ನಾದರೂ ತಿಳಿಸಲಿ. ಕೆಲವು ವಾಹನಗಳು ಅದಕ್ಕೆ ಅನುಗುಣವಾಗಿಲ್ಲ. ಏಪ್ರಿಲ್ 2023 ರ ನಂತರ ಬಂದ ವಾಹನಗಳು ಮಾತ್ರ ಇ20 ಬಳಕೆಯನ್ನು ಸಹಿಸಿಕೊಳ್ಳಬಲ್ಲವು" ಎಂದು ಅವರು ವಾದಿಸಿದರು. ಇಂಧನಕ್ಕೆ ಸಂಬಂಧಿಸಿದಂತೆ ಇ20 ಒಂದು ತಾರ್ಕಿಕ ಪ್ರಗತಿ ಎಂದು ಅವರು ಒಪ್ಪಿಕೊಂಡರೂ, ಇಂದಿನ ಹೆಚ್ಚಿನ ವಾಹನಗಳು ಅದಕ್ಕೆ ಹೊಂದಿಕೆಯಾಗುವುದಿಲ್ಲ ಎಂದರು.

ಆದರೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ “ಅರ್ಜಿದಾರರರು ಇಂಗ್ಲೆಂಡ್‌ನವರು. ಹೊರಗಿನಿಂದ ಬಂದವರು ಯಾವ ಪೆಟ್ರೋಲ್‌ ಬಳಸಬೇಕು ಎಂದು ನಿರ್ದೇಶನ ನೀಡುತ್ತಿದ್ದಾರೆ. ಎಥನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಲಾಭವಾಗುತ್ತದೆ. ಇವರು ಬೇಡ ಎಂದು ಹೇಳುತ್ತಿದ್ದಾರೆ. ಇನ್ನು ಅವರು ಬೇಕು ಎಂದು ಆಗ್ರಹಿಸುತ್ತಾರೆ” ಎಂಬುದಾಗಿ ಆಕ್ಷೇಪಿಸಿದರು.

Kannada Bar & Bench
kannada.barandbench.com