ಜೀವಾವಧಿ ಶಿಕ್ಷೆ ಅಮಾನತು ಹಾಗೂ ಜಾಮೀನು ಕೋರಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಆದರೆ, ಭಟ್ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ತ್ವರಿತವಾಗಿ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
Sanjiv Bhatt and Supreme Court
Sanjiv Bhatt and Supreme Court
Published on

ಮೂರುವರೆ ದಶಕದ ಹಿಂದೆ ನಡೆದ ಕಸ್ಟಡಿ ಸಾವಿನ ಪ್ರಕರಣದಲ್ಲಿ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸುವಂತೆ ಮತ್ತು ಜಾಮೀನು ನೀಡುವಂತೆ ಕೋರಿ ಸೇವೆಯಿಂದ ವಜಾಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ [ಸಂಜೀವ್ ಕುಮಾರ್ ರಾಜೇಂದ್ರಭಾಯಿ ಭಟ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].

ಶಿಕ್ಷೆ ಅಮಾನತುಗೊಳಿಸಿ ಭಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.

ಆದರೂ, ಭಟ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ನುಡಿಯಿತು.

"ನಾವು ಸಂಜೀವ್ ಭಟ್ ಅವರಿಗೆ ಜಾಮೀನು ನೀಡಲು ಒಲವು ತೋರುತ್ತಿಲ್ಲ. ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದು ಮೇಲ್ಮನವಿಯ ವಿಚಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮೇಲ್ಮನವಿಯ ವಿಚಾರಣೆ ತ್ವರಿತಗೊಳಿಸಬೇಕು" ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು.

Also Read
ಕಸ್ಟಡಿ ಸಾವು ಪ್ರಕರಣ: ಸಂಜೀವ್ ಭಟ್ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಗುಜರಾತ್ ಹೈಕೋರ್ಟ್

ಭಟ್ ಅವರು 1990ರಲ್ಲಿ ಜಾಮ್‌ನಗರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ನಡೆದ ಕಸ್ಟಡಿ ಸಾವಿನ ಪ್ರಕರಣ ಇದಾಗಿದೆ.

ಜಿಲ್ಲೆಯಲ್ಲಿ ಕೋಮು ಗಲಭೆ ನಡೆದ ಹಿನ್ನೆಲೆಯಲ್ಲಿ ಸುಮಾರು 133 ಜನರನ್ನು ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆ) ಕಾಯಿದೆ (ಟಾಡಾ) ಅಡಿಯಲ್ಲಿ ಭಟ್ ಬಂಧಿಸಿದ್ದರು.

ರಾಮ ಮಂದಿರಕ್ಕಾಗಿ ಅಯೋಧ್ಯೆಗೆ ರಥಯಾತ್ರೆ ಆರಂಭಿಸಿದ್ದ ಆಗಿನ ಬಿಜೆಪಿ ಮುಖ್ಯಸ್ಥ ಲಾಲ್ ಕೃಷ್ಣ ಅಡ್ವಾಣಿ ಅವರ ಬಂಧನ ಖಂಡಿಸಿ, ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆ ವರ್ಷದ ಅಕ್ಟೋಬರ್ 30ರಂದು ಭಾರತ್ ಬಂದ್‌ಗೆ ಕರೆ ನೀಡಿದ ನಂತರ ಕೋಮು ಗಲಭೆಗಳು ಭುಗಿಲೆದ್ದಿದ್ದವು.

Also Read
ಕಸ್ಟಡಿ ಕಿರುಕುಳ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆಗೊಳಿಸಿದ ಗುಜರಾತ್ ನ್ಯಾಯಾಲಯ

ಬಂಧಿತ ವ್ಯಕ್ತಿಗಳಲ್ಲಿ, ಒಂಬತ್ತು ದಿನಗಳ ಕಾಲ‌ ಜೈಲಿನಲ್ಲಿದ್ದ ಪ್ರಭುದಾಸ್ ವೈಷ್ಣಾನಿ ಎಂಬಾತ ಬಂಧನದಿಂದ ಬಿಡುಗಡೆಯಾದ ಬೆನ್ನಿಗೇ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದ.

ಭಟ್ ಮತ್ತು ಅವರ ಸಹೋದ್ಯೋಗಿಗಳು ವೈಷ್ಣಾನಿಗೆ ಕಸ್ಟಡಿಯಲ್ಲಿದ್ದ ವೇಳೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿತ್ತು. ಆನಂತರ ಭಟ್ ಹಾಗೂ ಅವರ ಏಳು ಸಹೋದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಜಾಮ್‌ನಗರ್‌ ನ್ಯಾಯಾಲಯವು ಭಟ್ ಹಾಗೂ ಮತ್ತೊಬ್ಬ ಪೊಲೀಸ್‌ ಸಿಬ್ಬಂದಿಯನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು 2024ರ ಜನವರಿಯಲ್ಲಿ ಗುಜರಾತ್‌ ಹೈಕೋರ್ಟ್ ವಜಾಗೊಳಿಸಿತ್ತು.

ಹೈಕೋರ್ಟ್‌ನ ಈ ಆದೇಶದ ವಿರುದ್ಧ ಭಟ್‌ ಸುಪ್ರೀಂ ಕೋರ್ಟ್‌ನಲ್ಲಿ ಭಟ್‌ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್‌ ಗುಜರಾತ್‌ ಸರ್ಕಾರಕ್ಕೆ 2024ರ ಆಗಸ್ಟ್‌ನಲ್ಲಿ ನೋಟಿಸ್‌ ಜಾರಿಗೊಳಿಸಿತ್ತು.

ಮೇಲಿನ ಪ್ರಕರಣ ಮಾತ್ರವಲ್ಲದೆ 1996ರ ಮಾದಕವಸ್ತು ಪ್ರಕರಣ ಮತ್ತು 1997 ರ ಕಸ್ಟಡಿ ಚಿತ್ರಹಿಂಸೆ ಪ್ರಕರಣಗಳಲ್ಲಿಯೂ ಭಟ್ ಆರೋಪಿಯಾಗಿದ್ದಾರೆ.

1996ರ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಅವರು ಸಲ್ಲಿಸಿದ್ದ ಮೇಲ್ಮನವಿ ಗುಜರಾತ್ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಡಿಸೆಂಬರ್ 2024ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಖುಲಾಸೆಗೊಳಿಸಿತ್ತು.

Kannada Bar & Bench
kannada.barandbench.com