Supreme Court of India
Supreme Court of India

ಹದಿಮೂರು ವರ್ಷಗಳಿಂದ ಜೀವಚ್ಛವವಾಗಿರುವ ವ್ಯಕ್ತಿಗೆ ದಯಾಮರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

"ಇವು ಬಹಳ ಸೂಕ್ಷ್ಮ ವಿಷಯಗಳು. ಪ್ರತಿದಿನ ಪ್ರಕರಣಗಳಲ್ಲಿ ತೀರ್ಪು ನೀಡುತ್ತೇವೆ. ಆದರೆ ಯಾರದೋ ಜೀವದ ಬಗ್ಗೆ ನಿರ್ಧರಿಸಲು ನಾವು ಯಾರು? ನಾವು ಹುಲುಮಾನವರು " ಎಂದು ನ್ಯಾಯಾಲಯ ನುಡಿಯಿತು.
Published on

ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು 2013ರಿಂದ ಜೀವಂತ ಶವದ ಶಾಶ್ವತವಾಗಿ ನಿಷ್ಕ್ರಿಯ ಸ್ಥಿತಿಯಲ್ಲಿರುವ 31 ವರ್ಷದ ಹರೀಶ್ ರಾಣಾ ಅವರಿಗೆ ಒದಗಿಸಲಾದ ಜೀವರಕ್ಷಕ ವ್ಯವಸ್ಥೆ ತೆಗೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ [ಹರೀಶ್ ರಾಣಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರಕರಣ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.

Also Read
ತಮ್ಮ ಅವಧಿಯಲ್ಲಿನ ಪ್ರಮುಖ ತೀರ್ಪು, ವಿವಾದಗಳ ಬಗ್ಗೆ ನಿಕಟಪೂರ್ವ ಸಿಜೆಐ ಗವಾಯಿ ಅವರು ಹೇಳಿದ್ದೇನು?

"ಇವು ಬಹಳ ಸೂಕ್ಷ್ಮ ವಿಷಯಗಳು. ಪ್ರತಿದಿನ ಪ್ರಕರಣಗಳಲ್ಲಿ ತೀರ್ಪು ನೀಡುತ್ತೇವೆ. ಆದರೆ ಯಾರದೋ ಜೀವದ ಬಗ್ಗೆ ನಿರ್ಧರಿಸಲು ನಾವು ಯಾರು? ನಾವು ಹುಲುಮಾನವರು " ಎಂದು ನ್ಯಾಯಾಲಯ ನುಡಿಯಿತು.

ಬಿಟೆಕ್‌ ಅಧ್ಯಯನ ಮಾಡುತ್ತಿದ್ದ ಹರೀಶ್ ರಾಣಾ (ಈಗ ಸುಮಾರು 31 ವರ್ಷ) 2013ರಲ್ಲಿ ಚಂಡೀಗಢದ ಪೇಯಿಂಗ್‌ ಗೆಸ್ಟ್‌ ಹಾಸ್ಟೆಲಿನ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಶಾಶ್ವತ ಜೀವಚ್ಛವವಾಗಿದ್ದಾರೆ. ಅರಿವಿಲ್ಲದ ಎಚ್ಚರಿಕೆಯ ಸ್ಥಿತಿಯಲ್ಲಿರುವ ಅವರು (ವೆಜಿಟೇಟಿವ್‌ ಸ್ಟೇಟ್‌ - ಅರಿವಿಲ್ಲದ, ಆದರೆ ನಿದ್ದೆ, ಎಚ್ಚರದ ಸ್ಥಿತಿ ತೋರುವ, ಉಸಿರಾಟ, ಜೀರ್ಣಾಂಗ ವ್ಯವಸ್ಥೆ ಕಾರ್ಯ ನಿರ್ವಹಿಸುವ ಸ್ಥಿತಿ) ಜೀವ ರಕ್ಷಕ ವ್ಯವಸ್ಥೆಯಿಂದಷ್ಟೇ ಅವರು ದಿನ ಕಳೆಯುತ್ತಿದ್ದಾರೆ.

ಕಾಮನ್‌ ಕಾಸ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಮಾರ್ಗಸೂಚಿಯಂತೆ ಹರೀಶ್‌ ಅವರಿಗೆ ಒದಗಿಸಲಾದ ಜೀವ ರಕ್ಷಕ ವ್ಯವಸ್ಥೆಯನ್ನು ಹಿಂಪಡೆದು ಅವರಿಗೆ ದಯಾಮರಣ ಒದಗಿಸಬೇಕು ಎಂದು ಕೋರಿ ಅವರ ಪೋಷಕರು ಈ ಮೊದಲು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಅವರಿಗೆ ಯಾಂತ್ರಿಕ ಜೀವರಕ್ಷಕ ವ್ಯವಸ್ಥೆ ಅಳವಡಿಸಿಲ್ಲ ಮತ್ತು ಬಾಹ್ಯ ಸಹಾಯವಿಲ್ಲದೆ ಅವರು ಬದುಕಬಹುದು ಎಂದು ತೀರ್ಪು ನೀಡಿದ ಅದು ಅವರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿಲ್ಲದ ಕಾರಣ ನಿಷ್ಕ್ರಿಯ ದಯಾಮರಣದ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ ಎಂದಿತು.

2024ರಲ್ಲಿ ಪೋಷಕರು ಆ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆರಂಭದಲ್ಲಿ ನ್ಯಾಯಾಲಯ ಪರಿಹಾರ ನೀಡದಿದ್ದರೂ, ಅಗತ್ಯವಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತು. ಹರೀಶ್‌ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲದ ಹಿನ್ನೆಲೆಯಲ್ಲಿ, ತಂದೆ ಮತ್ತೆ ಜೀವ ರಕ್ಷಕ ಚಿಕಿತ್ಸೆ ಹಿಂಪಡೆಯಲು ಕೋರಿ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.

Also Read
ಹೈಕೋರ್ಟ್‌ಗಳ ತೀರ್ಪು ವಿಳಂಬ ಖಂಡಿಸಿದ ಸುಪ್ರೀಂ: ಮಾಸಿಕ ವರದಿ ಸಿದ್ಧಪಡಿಸುವಂತೆ ಆದೇಶ

ಹರೀಶ್‌ ರಾಣಾ ಶೇ 100ರಷ್ಟು ಅಂಗವಿಕಲರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಬದಲಿಸಲು ಸಾಧ್ಯವಿಲ್ಲ. ಸಂವಿಧಾನದ 21ನೇ ವಿಧಿಯಡಿ ಗೌರವದಿಂದ ಮರಣಿಸುವ ಹಕ್ಕು ಕೂಡ ಇದೆ ಎಂದು ಕುಟುಂಬದ ಪರವಾಗಿ ವಕೀಲೆ ರಶ್ಮಿ ನಂದಕುಮಾರ್‌ ವಾದ ಮಂಡಿಸಿದರು. ಜಿಯಾನ್ ಕೌರ್, ಅರುಣಾ ಶಾನ್‌ಬಾಗ್ ಮತ್ತು ಕಾಮನ್ ಕಾಸ್ ಪ್ರಕರಣಗಳಲ್ಲಿ ನೀಡಲಾದ ತೀರ್ಪುಗಳನ್ನು ಅವರು ಉಲ್ಲೇಖಿಸಿದರು.

ಆದರೆ ಕಾಮನ್‌ ಕಾಸ್‌ ಪ್ರಕರಣದಲ್ಲಿ ನೀಡಲಾದ ತೀರ್ಪು ಇನ್ನೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ ಎಂದು ತಿಳಿಸಿದ ಹೆಚ್ಚುವರಿ ಸಾಲಿಸಿಟರ್‌ ಜರನರ್‌ ಐಶ್ವರ್ಯ ಭಾಟಿ ಅವರು ದುರದೃಷ್ಟವಶಾತ್, ಹರೀಶ್ ರಾಣಾ ಸಂಪೂರ್ಣ ನಿಷ್ಕ್ರಿಯಾವಸ್ಥೆಯಲ್ಲಿರುವುದನ್ನೂ ಪ್ರಸ್ತಾಪಿಸಿದರು. ಸುದೀರ್ಘವಾಗಿ ವಾದ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.

Kannada Bar & Bench
kannada.barandbench.com