ತಮ್ಮ ಅವಧಿಯಲ್ಲಿನ ಪ್ರಮುಖ ತೀರ್ಪು, ವಿವಾದಗಳ ಬಗ್ಗೆ ನಿಕಟಪೂರ್ವ ಸಿಜೆಐ ಗವಾಯಿ ಅವರು ಹೇಳಿದ್ದೇನು?

ನ್ಯಾ.ಗವಾಯಿ ಅವರು 'ಬಾರ್‌ ಅಂಡ್‌ ಬೆಂಚ್‌ʼನ ಸಂದರ್ಶನದ ವೇಳೆ ಸ್ವದೇಶಿ ನ್ಯಾಯಶಾಸ್ತ್ರ, ಶೂ ತೂರಲಾದ ವಿಚಾರ, ರಾಜ್ಯಪಾಲರ ಕಾಲಮಿತಿ ಪ್ರಕರಣದ ತೀರ್ಪು, ನೇಮಕಾತಿ ಕುರಿತ ವಿವಾದದ ಸಹಿತ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಅವಧಿಯಲ್ಲಿನ ಪ್ರಮುಖ ತೀರ್ಪು, ವಿವಾದಗಳ ಬಗ್ಗೆ ನಿಕಟಪೂರ್ವ ಸಿಜೆಐ ಗವಾಯಿ ಅವರು ಹೇಳಿದ್ದೇನು?
Published on

ದಲಿತ ಸಮುದಾಯಕ್ಕೆ ಸೇರಿದ ಸುಪ್ರೀಂ ಕೋರ್ಟ್‌ನ ಎರಡನೇ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಆರು ವರ್ಷಗಳಿಗೂ ಹೆಚ್ಚು ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ಭಾನುವಾರ ನಿವೃತ್ತರಾದರು.

ʼಬಾರ್‌ ಅಂಡ್‌‌ ಬೆಂಚ್‌ʼನ ಪಲ್ಲವಿ ಸಲೂಜಾ ಅವರೊಂದಿಗಿನ ಸಂದರ್ಶನದ ವೇಳೆ ನಿವೃತ್ತ ಸಿಜೆಐ ಗವಾಯಿ ಅವರು ಸ್ವದೇಶಿ ನ್ಯಾಯಶಾಸ್ತ್ರ, ದೀಪಾವಳಿ ಪಟಾಕಿ ಕುರಿತ ತೀರ್ಪು, ಕೊಲಿಜಿಯಂ ಶಿಫಾರಸ್ಸುಗಳು ಹಾಗೂ ತಮ್ಮ ಸೋದರ ಸಂಬಂಧಿಯೊಬ್ಬರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದಂತಹ ವಿವಾದಗಳ ಸುತ್ತ ಮಾತನಾಡಿದ್ದಾರೆ.

Also Read
ನ್ಯಾ. ಪಂಚೋಲಿ ಪದೋನ್ನತಿ ವಿವಾದ: ನ್ಯಾ. ನಾಗರತ್ನ ಅವರ ಭಿನ್ನಾಭಿಪ್ರಾಯ ಬಹಿರಂಗಗೊಳಿಸಬೇಕಿತ್ತು ಎಂದ ನ್ಯಾ. ಓಕಾ

ಸ್ವದೇಶಿ ನ್ಯಾಯಶಾಸ್ತ್ರದ ಪರವಾಗಿ ಸಂದರ್ಶನದಲ್ಲಿ ಮತ್ತೊಮ್ಮೆ ಗಟ್ಟಿ ಧ್ವನಿಯಲ್ಲಿ ಮಾತನಾಡಿರುವ ನ್ಯಾ. ಗವಾಯಿ ಅವರು ನಮ್ಮ ದೇಶದಲ್ಲಿ ಸಂವಿಧಾನವು ಜಾರಿಯಾಗಿ 76 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಸಂವಿಧಾನವನ್ನು ಅನೇಕ ಬಾರಿ ವ್ಯಾಖ್ಯಾನ, ಮರುವ್ಯಾಖ್ಯಾನಗಳಿಗೆ ಒಳಪಡಿಸಲಾಗಿದೆ. ಹಾಗಾಗಿ, ನನ್ನ ಅನಿಸಿಕೆಯಲ್ಲಿ ಇಂದು ನಾವು ಸಂವಿಧಾನವನ್ನು ವ್ಯಾಖ್ಯಾನಿಸಲು ವಿದೇಶಿ ತೀರ್ಪುಗಳೆಡೆಗೆ ಮುಖ ಮಾಡಬೇಕಾದ ಅಗತ್ಯವಿಲ್ಲ. ಕಾನೂನು ಸುಸ್ಪಷ್ಟಗೊಂಡಿದೆ. ನಾವು ವಿದೇಶಿ ತೀರ್ಪುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದಿಲ್ಲ. ಆದರೆ ಅವುಗಳ ಅಗತ್ಯ ಇಲ್ಲದಿರುವಾಗ ಮತ್ತು ಹಿಂದಿನ ತೀರ್ಪುಗಳೇ ಸಂವಿಧಾನದ ವಿಧಿಗಳ ಸ್ಪಷ್ಟ ವ್ಯಾಖ್ಯಾನ ನೀಡುವಾಗ ನಾವು ಬೇರೆ ದೇಶಗಳ ತೀರ್ಪಗಳನ್ನು ಅತಿಯಾಗಿ ಅವಲಂಬಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ವಾಯು ಮಾಲಿನ್ಯ ಹದಗೆಟ್ಟಿರುವ ವೇಳೆ ದೀಪಾವಳಿಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಬಳಕೆ ಮಾಡಲು ಅವಕಾಶ ನೀಡಿದ ನಿಮ್ಮ ಆದೇಶದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಆದೇಶ ಹೊರಡಿಸುವ ವೇಳೆ ಸಾರ್ವಜನಿಕ ಅಭಿಪ್ರಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಎಷ್ಟು ಮಹತ್ವ ದೊರೆಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಜನರು ಏನು ಭಾವಿಸುತ್ತಾರೋ ಎನ್ನುವ ಆಧಾರದಲ್ಲಿ ತೀರ್ಪು ನೀಡಬಾರದು. ಆದರೆ ವಾಸ್ತವಾಂಶಗಳನ್ನು ಪರಿಗಣಿಸಬೇಕು. ಜನರ ಭಾವನೆಗಳಿಗೂ ಮಹತ್ವ ನೀಡಬೇಕು. ತೀರ್ಪಿನಲ್ಲಿ ಹೊಸತೇನೂ ಇಲ್ಲ,   2018–19ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಎರಡು ವಿವರವಾದ ಆದೇಶಗಳನ್ನು ಪಾಲಿಸುವಂತೆ ಹೇಳಿದ್ದೇವೆ ಅಷ್ಟೇ ಎಂದು ವಿವರಿಸಿದ್ದಾರೆ.

ಮುಂದುವರೆದು, ನಾವು ನಿಜಕ್ಕೂ ಅಂತಹ ಆದೇಶಗಳನ್ನು (ನಿರ್ಬಂಧ) ಜಾರಿಗೊಳಿಸಲು ಅಗತ್ಯವಾದ ವ್ಯವಸ್ಥೆಯನ್ನು ಹೊಂದಿದ್ದೇವೆಯೇ? ಏಕೆಂದರೆ ಹಿಂದಿನ ವರ್ಷ ನಾನೂ ಸಹ (ನಿಷೇಧ ಜಾರಿಯಲ್ಲಿದ್ದಾಗ) ದೆಹಲಿಯಲ್ಲಿದ್ದೆ. ಪಟಾಕಿಗಳು ಸಿಡಿಯುತ್ತಿದ್ದವು. ಲೂಟ್ಯೆನ್‌ ಪ್ರದೇಶದಲ್ಲಿಯೂ ಸಹ ನೀವು ಪಟಾಕಿಯ ಸದ್ದು ಕೇಳುತ್ತಿದ್ದಿರಿ. ನಿರ್ಬಂಧದ ಜಾರಿ ಕಠಿಣತಮವಾದುದು. ಹಾಗಾಗಿ, ನಾವು ಸಕ್ರಿಯಕರವಾದಂತಹ ಕಾನೂನುಗಳನ್ನು ಜಾರಿಗೊಳಿಸಬೇಕಾಗುತ್ತದೆ. ನಿರ್ಬಂಧವನ್ನು ಜಾರಿಗೊಳಿಸಲು ಅಗತ್ಯವಾದ ಮಾನವಶಕ್ತಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಂದಿರಲಿಲ್ಲ. ಖಾಲಿ ಹುದ್ದೆಗಳ ತೀವ್ರ ಸಮಸ್ಯೆಯಿತ್ತು. ಇದಕ್ಕೆ ನಾವು ಕ್ರಮ ಕೈಗೊಳ್ಳಬೇಕಿತ್ತು. ಹಾಗಾದಾಗ ಮಾತ್ರ ನಿಷೇಧದ ಜಾರಿ ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಪಟಾಕಿ ಸಿಡಿಸಲು ಮಾಡಿದ ಸಡಿಲಿಕೆ ಅವಧಿ ಕೂಡ ಅಲ್ಪಾವಧಿಯದ್ದಾಗಿತ್ತು. ಇದನ್ನು ಪರೀಕ್ಷಾತ್ಮಕ ಕ್ರಮ ಎಂದು ಕೂಡ ಹೇಳಿದ್ದೆವು. ತುಲನಾತ್ಮಕ ವರದಿಗಳನ್ನು ಆಧರಿಸಿ ನ್ಯಾಯಾಲಯ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದೆವು ಎಂದು ಸ್ಪಷ್ಪಪಡಿಸಿದ್ದಾರೆ.  

Former CJI BR Gavai
Former CJI BR Gavai

ನ್ಯಾ. ವಿಪುಲ್‌ ಪಾಂಚೋಲಿ ಅವರು ಗುಜರಾತ್‌ ಮೂಲದವರು. ಗುಜರಾತ್‌ ಮೂಲದವರಿಗೇ ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿದೆ ಎಂಬ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು  ನೇಮಕಾತಿಗಳನ್ನು ಮಾಡುವಾಗ, ನಾವು ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಸಂಸ್ಥೆಯ ಮುಖ್ಯಸ್ಥರಾಗುವ ವ್ಯಕ್ತಿಯನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಪರಿಗಣನೆಯ ವಲಯ ತುಂಬಾ ಸೀಮಿತವಾಗಿದೆ. ಈಗ ಗುಜರಾತ್‌ ಮೂಲದವರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಹಿಂದೆ ಬಾಂಬೆ ಹೈಕೋರ್ಟ್‌, ದೆಹಲಿ ಹೈಕೋರ್ಟ್‌ಗಳಿಂದ ಅತ್ಯಧಿಕ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದ ಉದಾಹರಣೆಗಳಿವೆ ಎಂದು ವಿವರಿಸಿದ್ದಾರೆ.

Also Read
ದೆಹಲಿ ಸುತ್ತಮುತ್ತ ಹಸಿರು ಪಟಾಕಿಗೆ ಸುಪ್ರೀಂ ಅನುಮತಿ

ಕೊಲಿಜಿಯಂ ವ್ಯವಸ್ಥೆಯ ಕುರಿತಂತೆಯೂ ಅವರು ಸಂದದರ್ಶನದ ವೇಳೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕೊಲಿಜಿಯಂ ವ್ಯವಸ್ಥೆ ನ್ಯಾಯಾಂಗ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದೆ. ಗುಪ್ತಚರ ದಳದ ವರದಿ, ಕಾನೂನು ಇಲಾಖೆಯ ಮಾಹಿತಿಗಳು ಇದೆಲ್ಲವನ್ನೂ ಆಧರಿಸಿ ನ್ಯಾಯಮೂರ್ತಿಗಳ ನೇಮಕಾತಿ ನಡೆಯುತ್ತದೆಯಾದರೂ ಅಂತಿಮ ನಿರ್ಧಾರ ಕೊಲಿಜಿಯಂನದ್ದು ಎಂದು ವಿವರಿಸಿದ್ದಾರೆ.

ನ್ಯಾ. ವಿಪುಲ್‌ ನೇಮಕಾತಿ ಕುರಿತು ನ್ಯಾ. ನಾಗರತ್ನ ಅವರ ಭಿನ್ನಾಭಿಪ್ರಾಯವನ್ನು ಪ್ರಕಟಿಸದೆ ಇರುವುದನ್ನು ಸಮರ್ಥಿಸಿಕೊಂಡ ನ್ಯಾ. ಗವಾಯಿ ಹಾಗೆ ಭಿನ್ನಾಭಿಪ್ರಾಯಗಳನ್ನು ದಾಖಲಿಸುವ ಪೂರ್ವ ನಿದರ್ಶನವಿಲ್ಲ ಎಂದಿದ್ದಾರೆ. ಇದೇ ವೇಳೆ, ಕೊಲಿಜಿಯಂ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಆಯ್ದು ಪರಿಗಣಿಸಬಾರದು ಇದು ಕೊಲಿಜಿಯಂ ಅಧಿಕಾರ ಮತ್ತು ಕ್ರಿಯಾಶೀಲತೆಗೆ ಧಕ್ಕೆ ತರುತ್ತದೆ. ಕೊಲಿಜಿಯಂನ ನಿರ್ಣಯವೇ ಆತ್ಯಂತಿಕವಾಗಬೇಕು ಎಂದಿದ್ದಾರೆ.

ತಮ್ಮ ಸೋದರ ಸಂಬಂಧಿಯೊಬ್ಬರನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಕ್ಕೆ ಸಂಬಂಧಿಸಿದಂತೆ ಎದ್ದ ವಿವಾದದ ಕುರಿತು ಪ್ರತಿಕ್ರಿಯಿಸಿದ ನ್ಯಾ. ಗವಾಯಿ ಅವರು, ನ್ಯಾಯಮೂರ್ತಿಯೊಬ್ಬರ ಸಂಬಂಧಿಯಾಗಿದ್ದರೂ ಅಭ್ಯರ್ಥಿಗೆ ಅರ್ಹತೆ ಇದ್ದರೆ ಅವರನ್ನು ಪರಿಗಣಿಸಲು ಸಮಸ್ಯೆ ಏನಿದೆ? ವಕೀಲರು ಅಥವಾ ನ್ಯಾಯಾಧೀಶರ ಕುಟುಂಬದಲ್ಲಿ ಜನಿಸುವುದನ್ನು ಅವರ (ಅಭ್ಯರ್ಥಿಗಳ) ಅನನುಕೂಲಕ್ಕೆ ಬಳಸಲಾಗದು ಎಂದಿದ್ದಾರೆ.

ಮುಂದುವರೆದು, ತಮ್ಮ ಸೋದರ ಸಂಬಂಧಿಯ ನೇಮಾಕಾತಿ ಪ್ರಕ್ರಿಯೆಯ ವೇಳೆ ತಾನು ಹಿಂದೆ ಸರಿದಿದ್ದೆ. ಉಳಿದ ಇಬ್ಬರು ನ್ಯಾಯಮೂರ್ತಿಗಳು ಅವರನ್ನು ಅವಿರೋಧವಾಗಿ ಶಿಫಾರಸ್ಸು ಮಾಡಿದರು. ಆಯ್ಕೆಯಾದ ಅಭ್ಯರ್ಥಿ ಮೊದಲನೆಯದಾಗಿ ನನ್ನ ನೇರ ಸೋದರಳಿ ಅಲ್ಲ. ಬದಲಿಗೆ ದೂರದ ಸಂಬಂಧಿ. ಅವರಿಗೆ ಅರ್ಹತೆ ಇದ್ದರೆ ಅಡ್ಡಿ ಏನು? ಅಂತಹವರ ನೇಮಕಾತಿ ನಡೆಯುವಾಗ ಹೆಚ್ಚುವರಿ ಮಾನದಂಡಗಳು ಇರುತ್ತವೆ ಎಂದು ತಿಳಿಸಿದ್ದಾರೆ.

ತಮ್ಮ ಮೇಲೆ ಕೋರ್ಟ್‌ ಹಾಲ್‌ನಲ್ಲಿ ಶೂ ತೂರಲು ಕಾರಣವಾದ ಭಗವಾನ್‌ ವಿಷ್ಣುವಿನ ಕುರಿತಾದ ತಮ್ಮ ಹೇಳಿಕೆ ಮತ್ತು ಅದರ ಸುತ್ತ ಎದ್ದ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾ. ಗವಾಯಿ ಅವರು, ಮೊದಲನೆಯದಾಗಿ, ನಾನು ಯಾರ ಭಾವನೆಗಳಿಗೂ ನೋವುಂಟು ಮಾಡುವ ಯಾವುದೇ ಮಾತನ್ನು ಹೇಳಲಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳು ವಿಷಯವನ್ನು ಅತಿಶಯಗೊಳಿಸಿದವು. ಕೆಲವೊಮ್ಮೆ, ನೀವು ನಿಜವಾಗಿಯೂ ಹೇಳದೇ ಇರುವುದನ್ನು ಕೇಳಬೇಕಾದಂತಹ ಸಂದರ್ಭ ಬರುತ್ತದೆ. ಆದರೆ ನನ್ನ ಆತ್ಮಸಾಕ್ಷಿ ನಿಚ್ಚಳವಾಗಿತ್ತು. ನಾನು ಯಾರ ಭಾವನೆಗಳಿಗೂ ನೋವುಂಟು ಮಾಡುವಂತಹ ಹೇಳಿಕೆ ನೀಡಿರಲಿಲ್ಲ. ನಾನು ಹೇಳಿದ್ದು ಅದು ಸಂರಕ್ಷಿತ ಸ್ಮಾರಕವೆಂದು ಗೊತ್ತುಪಡಿಸಿದ ಸ್ಥಳವಾಗಿರುವ ಸಂದರ್ಭದಲ್ಲಿ ಏನಾದರೂ ಮಾಡಬೇಕಾದರೆ ಸಂಬಂಧಪಟ್ಟ ಸಕ್ಷಮ ಇಲಾಖೆಯನ್ನು ಸಂಪರ್ಕಿಸಬೇಕು. ವಕ್ಫ್ ವಿಷಯದಲ್ಲಿ ನಾನು ಹೇಳಿದಂತೆ ನಾವು ಪರಿಣತಿಯ ವಿಷಯಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿಯನ್ನು ನಿಗದಿಪಡಿಸಿದ್ದ ವಿಚಾರದಲ್ಲಿ ಮೆಲ್ಮನವಿಗೆ ಸಂಬಂಧಿಸಿದಂತೆ ನೀಡಲಾದ ತೀರ್ಪಿನ ವಿಚಾರವಾಗಿ ಮಾತನಾಡಿರುವ ನ್ಯಾ. ಗವಾಯಿ ಅವರು, ಸಂವಿಧಾನದಲ್ಲಿ ಅಂತಹ ಯಾವುದೇ ಕಾಲಮಿತಿಗಳನ್ನು ನೀಡಲಾಗಿಲ್ಲ. ಸಂವಿಧಾನದಲ್ಲಿ ಇಲ್ಲದೆ ಇರುವುದನ್ನು ನಾವು ವ್ಯಾಖ್ಯಾನದ ಪ್ರಕ್ರಿಯೆಯ ಮೂಲಕ ಸೇರಿಸಲಾಗದು ಎಂದಿದ್ದಾರೆ.

ಆದರೆ ಇದೇ ವೇಳೆ, ಯಾವುದೇ ಕಾಲಮಿತಿಯನ್ನು ಒದಗಿಸದಿದ್ದರೂ, ರಾಜ್ಯಪಾಲರು ಸಮಂಜಸವಾದ ಅವಧಿಯೊಳಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ನಾವು ಹೇಳಿದ್ದೇವೆ. ಸಮಂಜಸವಾದ ಅವಧಿ ಯಾವುದು ಎಂಬುದು ಆಯಾ ಪ್ರಕರಣದ ಸಂಗತಿಗಳನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದ್ದಾರೆ.

ಸಂದರ್ಶನದ ಪೂರ್ಣಪಾಠದ ಓದಿಗಾಗಿ ಆಂಗ್ಲ ವೃತಿಯ ಈ ಲಿಂಕ್‌ ಕ್ಲಿಕ್ಕಿಸಿ.

Kannada Bar & Bench
kannada.barandbench.com