ನ್ಯಾಯಾಂಗವನ್ನು ವಿಮರ್ಶಿಸಿ ಟ್ವೀಟ್ ಮಾಡಿದುದ್ದಕ್ಕೆ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಲ್ಪಟ್ಟಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಶಿಕ್ಷೆ ನಿಗದಿ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ರಾಜೀವ್ ಧವನ್ ಮತ್ತು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಅರ್ ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠವು ಆದೇಶ ಕಾಯ್ದಿರಿಸಿತು.
ನನ್ನ ಕಕ್ಷಿದಾರ ಭೂಷಣ್ ಅವರು ಸವಿವರವಾಗಿ ದಾಖಲೆಯನ್ನೊಳಗೊಂಡ ಹೇಳಿಕೆಯನ್ನು ಕೋರ್ಟಿಗೆ ಸಲ್ಲಿಸುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಎಂದು ಧವನ್ ಹೇಳಿದರು. ಟ್ವೀಟ್ ಗಳಿಗೆ ಸಂಬಂಧಿಸಿದ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಪೂರಕ ದಾಖಲೆಯನ್ನು ಭೂಷಣ್ ಕೋರ್ಟಿಗೆ ಸಲ್ಲಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದು ಭೂಷಣ್ ಸ್ಪಷ್ಟಪಡಿಸಿದ್ದು, ದಾಖಲೆಯಲ್ಲಿನ ಹೇಳಿಕೆ ಇಂತಿದೆ:
ಈ ವೇಳೆ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಅಭಿಪ್ರಾಯ ಕೇಳಬಯಿಸಿತು. ಅಟಾರ್ನಿ ಪ್ರತಿಕ್ರಿಯೆ ಹೀಗಿತ್ತು:
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು “ತಾನು ಮಾಡಿದ್ದು ತಪ್ಪು ಎಂದು ಅವರು ಯೋಚಿಸುತ್ತಿಲ್ಲ. ಅವರು ಕ್ಷಮೆಯನ್ನೂ ಕೇಳಿಲ್ಲ… ತಾನು ಮಾಡಿದ್ದು ತಪ್ಪು ಎಂದು ಅವರಿಗೆ ಅನಿಸದಿದ್ದಾಗ ಏನು ಮಾಡುವುದು?” ಎಂದರು.
ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಷಣ್ ವಿರುದ್ಧ ತಾವು ಕಾನೂನು ಪ್ರಕ್ರಿಯೆ ಆರಂಭಿಸಿದ್ದನ್ನು ಕೆ ಕೆ ವೇಣುಗೋಪಾಲ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.
“ಭೂಷಣ್ ಅವರು ವಿಷಾದ ವ್ಯಕ್ತಪಡಿಸಿದ್ದನ್ನು ನಾನು ಓದಿದೆ. ಆನಂತರ ಅವರ ವಿರುದ್ಧದ ನಿಂದನಾ ಪ್ರಕರಣವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ಕೈಬಿಟ್ಟೆ. ಗೌರವಾನ್ವಿತ ನ್ಯಾಯಮೂರ್ತಿಗಳು ಸಹಾನುಭೂತಿಯ ನಡೆ ಅನುಸರಿಸುವ ಮೂಲಕ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸಿದರೆ ಮಹದುಪಕಾರ ಮಾಡಿದಂತೆ” ಎಂದು ನ್ಯಾಯಪೀಠದಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮಿಶ್ರಾ ಅವರು “ಎಲ್ಲರೂ ತಪ್ಪು ಮಾಡುತ್ತಾರೆ. ಕೆಲವೊಮ್ಮೆ ಪ್ರಾಮಾಣಿಕವಾಗಿಯೂ ತಪ್ಪುಗಳು ಆಗುತ್ತವೆ. ತಾನು ಮಾಡಿರುವುದು ತಪ್ಪು ಎಂದು ಭೂಷಣ್ ಅವರಿಗೆ ಎನಿಸದಿರುವಾಗ ಅವರಿಗೆ ಮತ್ತೊಮ್ಮೆ ಹೀಗೆ ಮಾಡಬೇಡಿ ಎಂದು ಹೇಳುವುದು ಹೇಗೆ?” ಎಂದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಭೂಷಣ್ ಅವರು ಮಾಡಿರುವ ಉತ್ತಮ ಕೆಲಸಗಳತ್ತ ವೇಣುಗೋಪಾಲ್ ಅವರು ಕೋರ್ಟ್ ಗಮನಸೆಳೆದಾಗ, ನ್ಯಾ. ಗವಾಯಿ ಹೀಗೆ ಹೇಳಿದರು:
“ಪಿಐಎಲ್ ಮತ್ತು ಅವರ ಎಲ್ಲಾ ಉತ್ತಮ ಕೆಲಸಗಳು ಸರಿ. ಆದರೆ ನಿಮ್ಮ ವಿಚಾರಕ್ಕೆ ಬರುವುದಾದರೆ ನೀವು ನಿಂದನಾ ಪ್ರಕರಣ ದಾಖಲಿಸಿದ್ದಿರಿ.. ಅವರು ವಿಷಾದ ವ್ಯಕ್ತಪಡಿಸಿದ ನಂತರ ನೀವು ಅದನ್ನು ಹಿಂಪಡೆದಿರಿ. ಆದರೆ, ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ”.
ಇದಕ್ಕೆ ಧ್ವನಿಗೂಡಿಸಿದ ನ್ಯಾ. ಮಿಶ್ರಾ ಅವರು “ಕೆಲವು ಗಂಭೀರ ಹೇಳಿಕೆಗಳನ್ನು ನೀಡಲಾಗಿದೆ. ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಭೂಷಣ್ ಅವರು ತಮ್ಮ ರಕ್ಷಣೆಯಲ್ಲಿ ನೀಡಿರುವ ಹೇಳಿಕೆಯನ್ನು ಪರಿಗಣಿಸುವಂತೆ ಹೇಳುತ್ತಿದ್ದಾರೆ… ಅವರು ಹಲವು ಟೀಕೆಗಳನ್ನು ಮಾಡಿದ್ದಾರೆ. ರಾಮಜನ್ಮಭೂಮಿ ಪ್ರಕರಣದಲ್ಲಿಯೂ ಸಹ…ಆ ಪೈಕಿ ಒಬ್ಬೇ ಒಬ್ಬ ನ್ಯಾಯಮೂರ್ತಿ ನಿವೃತ್ತಿಯಾಗಿದ್ದಾರೆ” ಎಂದರು.
ಭೂಷಣ್ ಮತ್ತೊಮ್ಮೆ ಹಾಗೆ ಮಾಡುವುದಿಲ್ಲ ಎಂದು ವೇಣುಗೋಪಾಲ್ ಹೇಳುತ್ತಿದ್ದಂತೆ ಪೀಠವು, “ ಆ ಮಾತನ್ನು ಭೂಷಣ್ ಹೇಳಲಿ. ಇದಕ್ಕೆ ಬದಲಾಗಿ ಭೂಷಣ್ ಅವರು ತಮ್ಮ ಟ್ವೀಟ್ ಗಳಿಗೆ ಬಣ್ಣ ಹಚ್ಚುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿತು.
ಭೂಷಣ್ ಪ್ರತಿಕ್ರಿಯೆನ್ನು ದಾಖಲೆಯಿಂದ ತೆಗೆಯಬೇಕು ಎಂಬ ವೇಣುಗೋಪಾಲ್ ಅವರ ಸಲಹೆಗೆ ನ್ಯಾ, ಮಿಶ್ರಾ ಹೀಗೆ ಹೇಳಿದರು:
ಮುಂದುವರೆದು ನ್ಯಾ. ಮಿಶ್ರಾ ಅವರು “ಸುಪ್ರೀಂ ಕೋರ್ಟ್ ಕುಸಿದಿದೆ” ಎಂಬ ಭೂಷಣ್ ಹೇಳಿಕೆಯನ್ನು ಪ್ರಸ್ತಾಪಿಸಿ “ಇದು ಆಕ್ಷೇಪಾರ್ಹ?’ ಎನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ಭೂಷಣ್ ಅವರ ಹೇಳಿಕೆಯಲ್ಲಿನ ಅವರ ಹಲವು ಆರೋಪಗಳನ್ನು ಪ್ರಸ್ತಾಪಿಸಿದ ನ್ಯಾ. ಮಿಶ್ರಾ ಅವರು “ಯಾವ ನ್ಯಾಯಮೂರ್ತಿಯನ್ನು ಬಿಡಲಾಗಿದೆ. ಹಾಲಿ ಇರುವವರೋ ಅಥವಾ ನಿವೃತ್ತರೋ?” ಎಂದು ಅಸಮಾಧಾನ ಸೂಚಿಸಿದರು. ಈ ಸಂದರ್ಭದಲ್ಲಿ ನ್ಯಾಯಪೀಠವು ಭೋಜನ ವಿರಾಮ ತೆಗೆದುಕೊಂಡಿತು.
ವಿಚಾರಣೆ ಪುನಾರಂಭವಾದಾಗ ಭೂಷಣ್ ಪರ ವಕೀಲ ಧವನ್ ಅವರು “ನಾನು ಎರಡು ಟೋಪಿಗಳನ್ನು ಧರಿಸುತ್ತೇನೆ. ಅದರಲ್ಲಿ ಒಂದು ನಾನು ನನ್ನ ಕ್ಷಕ್ಷಿದಾರರನ್ನು ಪ್ರತಿನಿಧಿಸುವುದು ಮತ್ತೊಂದು ನಾನು ನ್ಯಾಯಾಲಯದ ಕರ್ತವ್ಯ ನಿಭಾಯಿಸುವುದಾಗಿದೆ. ನ್ಯಾಯಾಲಯದ ಬಗೆಗಿನ ನನ್ನ ಕರ್ತವ್ಯ ಮತ್ತು ಕಕ್ಷಿದಾರನ ಪರವಾದ ಕರ್ತವ್ಯ ಎರಡೂ ಒಂದೇ ಅಲ್ಲ” ಎಂದರು.
ಭೂಷಣ್ ಅವರ ಹೇಳಿಕೆಯನ್ನು ಮರುಪರಿಶೀಲಿಸುವುದು ಮತ್ತು ಕ್ಷಮೆ ಕೇಳುವುದಕ್ಕೆ ಕಾಲಾವಕಾಶ ನೀಡಿದ ನ್ಯಾಯಾಲಯದ ಆದೇಶವನ್ನು ಧವನ್ ಟೀಕಿಸಿದರು.
“ಈ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡುವಂಥದ್ದಲ್ಲ. ನಿಮಗೆ ಇಷ್ಟು ದಿನ ಕಾಲಾವಕಾಶ ನೀಡುತ್ತೇವೆ. ನೀವು ಕ್ಷಮೆ ಕೋರಿ ಎನ್ನುವುದು. ಇದು ತಪ್ಪಾದ ನ್ಯಾಯಶಾಸ್ತ್ರ. ಯಾವುದೇ ನ್ಯಾಯಾಲಯ ಇಂಥ ಆದೇಶ ಹೊರಡಿಸುವುದಿಲ್ಲ” ಎಂದರು.
ಭೂಷಣ್ ಅವರು ಸಲ್ಲಿಸಿರುವ ಅಫಿಡವಿಟ್ ಅನ್ನು ತೆಗೆದುಹಾಕುವುದಿಲ್ಲ ಎಂಬುದನ್ನು ಧವನ್ ಸ್ಪಷ್ಟಪಡಿಸಿದರು. ಆಗಸ್ಟ್ 14ರ ತೀರ್ಪಿನಲ್ಲಿ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿದ್ದನ್ನು ಹಿಂಪಡೆಯುವಂತೆ ಮನವಿ ಮಾಡಿದರು.
ಭೂಷಣ್ ಅವರ ವಿರುದ್ಧ ಯಾವ ಕ್ರಮಕೈಗೊಳ್ಳಬೇಕು ಎಂಬ ನ್ಯಾಯಪೀಠದ ಕರೆಗೆ ಧವನ್ ಅವರು, “ ಅಟಾರ್ನಿ ಜನರಲ್ ಅವರು ಖಂಡಿಸಿ ಎಂದಿದ್ದಾರೆ. ಒಂದು ಸಾಮಾನ್ಯ ಸಂದೇಶ ರವಾನೆಯಾಗಬೇಕು ಎಂಬುದು ನನ್ನ ಅಭಿಪ್ರಾಯ” ಎಂದರು.
ಮುಂದುವರೆದು ಮಾತನಾಡಿದ ಧವನ್ ಅವರು ಭೂಷಣ್ ಅವರಿಗೆ ಶಿಕ್ಷೆ ವಿಧಿಸುವ ಮೂಲಕ ಅವರನ್ನು ಹುತಾತ್ಮರನ್ನಾಗಿಸಬೇಡಿ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಸಿ ಯು ಸಿಂಗ್ ಅವರ ಅಭಿಪ್ರಾಯ ಬಯಸಿದ್ದ ನ್ಯಾಯಾಲಯವು ಯಾವ ನಿರ್ಧಾರ ಕೈಗೊಳ್ಳಬೇಕು ಎಂದು ಅವರನ್ನು ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಂಗ್ ಅವರು ಅಟಾರ್ಜಿ ಜನರಲ್ ಅವರ ಅಭಿಪ್ರಾಯದಂತೆ ಹಿಂದಿನ ಆದೇಶವನ್ನು ಉಳಿಸಿಕೊಳ್ಳಬೇಕು. ಆದರೆ, ಭೂಷಣ್ ಅವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು ಎಂದು ಹೇಳಿದರು.
ಭಾವೋದ್ವೇಗಕ್ಕೆ ಒಳಗಾದ ನ್ಯಾ. ಮಿಶ್ರಾ ಅವರು “ನಾವು ಬಾರ್ ನಿಂದ (ನ್ಯಾಯವಾದಿ ವರ್ಗ) ಹೊರತಾದವರಲ್ಲ. ಬಾರ್ ನಿಂದಲೇ ನಾವು ಇಲ್ಲಿಗೆ ಬಂದಿದ್ದೇವೆ. ಎಲ್ಲಾ ರೀತಿಯ ತ್ಯಾಗ ಮಾಡಿದ ಮೇಲೆ ನಾವು ಪಡೆದುಕೊಳ್ಳುವುದಾದರೂ ಏನು? ನಾವು ಮಾಧ್ಯಮಗಳ ಮುಂದೆ ಹೋಗುವಂತಿಲ್ಲ.. ನೀವು ವ್ಯವಸ್ಥೆಯ ಭಾಗ, ಆ ವ್ಯವಸ್ಥೆಯನ್ನು ನೀವು ನಾಶ ಮಾಡುವಂತಿಲ್ಲ. ನಾವು ಪರಸ್ಪರ ಗೌರವಿಸಬೇಕು”. ಎಂದರು.
ಅಂತಿಮವಾಗಿ ನ್ಯಾಯಾಲಯವು ವಿಚಾರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿ, ತೀರ್ಪನ್ನು ಕಾಯ್ದಿರಿಸಿತು.