ಹೈಕೋರ್ಟ್‌ನ ಹೆಚ್ಚುವರಿ, ಕಾಯಂ ನ್ಯಾಯಮೂರ್ತಿಗಳಿಗೆ ಸಮಾನ ಪಿಂಚಣಿ: ಸುಪ್ರೀಂ ಕೋರ್ಟ್‌ ತೀರ್ಪು

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ವಾರ್ಷಿಕ ₹15 ಲಕ್ಷ ಮತ್ತು ಹೆಚ್ಚುವರಿ ಹಾಗೂ ಕಾಯಂ ನ್ಯಾಯಮೂರ್ತಿಗಳಿಗೆ ವಾರ್ಷಿಕ ₹13.6 ಲಕ್ಷ ನಿವೃತ್ತಿ ವೇತನ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
Supreme court, Judges Pension
Supreme court, Judges Pension
Published on

ಹೈಕೋರ್ಟ್‌ ನ್ಯಾಯಮೂರ್ತಿಗಳು ಹೆಚ್ಚುವರಿ ಅಗಿರಲಿ ಅಥವಾ ಕಾಯಂ ಆಗಿರಲಿ ಅವರು ಸಮಾನ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸೀಹ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಗೆ ನೀಡಲಾಗುವ ನಿವೃತ್ತಿ ಸೌಲಭ್ಯಗಳಲ್ಲಿ ತಾರತಮ್ಯ ಮಾಡುವುದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗುತ್ತದೆ ಎಂದಿದೆ.

“ನ್ಯಾಯಮೂರ್ತಿಗಳು ಯಾವಾಗ ಸೇವೆಗೆ ಸೇರ್ಪಡೆಯಾದರು ಎಂಬುದನ್ನು ಮೀರಿ ನಿವೃತ್ತಿಯ ಬಳಿಕ ನ್ಯಾಯಮೂರ್ತಿಗಳಿಗೆ ಯಾವುದೇ ಸೌಲಭ್ಯದಲ್ಲಿ ತಾರತಮ್ಯ ಮಾಡುವುದು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದ್ದು, ಅವರು ಪೂರ್ಣ ನಿವೃತ್ತಿ ವೇತನಕ್ಕೆ ಅರ್ಹರು. ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನಿವೃತ್ತಿಯಾದವರೂ ಪೂರ್ಣ ನಿವೃತ್ತಿ ವೇತನಕ್ಕೆ ಅರ್ಹರಾಗಿದ್ದು, ಹೆಚ್ಚುವರಿ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ನಡುವೆ ಯಾವುದೇ ಭೇದಭಾವ ಮಾಡುವುದು ಹಿಂಸಾ ಸ್ವರೂಪವಾಗುತ್ತದೆ…” ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಗಳ ಕುಟುಂಬಸ್ಥರಿಗೆ ದೊರೆಯುವ ಎಲ್ಲಾ ನಿವೃತ್ತಿ ನಂತರದ ಸೌಲಭ್ಯಗಳೂ ಹೆಚ್ಚುವರಿ ನ್ಯಾಯಮೂರ್ತಿಗಳ ಕುಟುಂಬಸ್ಥರಿಗೂ ವಿಸ್ತರಣೆಯಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನಗಳು ಇಂತಿವೆ:

  • ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರವು ಸಂಪೂರ್ಣ ₹15 ಲಕ್ಷ ವಾರ್ಷಿಕ ನಿವೃತ್ತಿ ವೇತನ ಪಾವತಿಸಬೇಕು.

  •  ಹೈಕೋರ್ಟ್‌ಗಳ ಹೆಚ್ಚುವರಿ ನ್ಯಾಯಮೂರ್ತಿಗಳೂ ಸೇರಿ ಕಾಯಂ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರವು ವಾರ್ಷಿಕ ₹13.6 ಲಕ್ಷ ನಿವೃತ್ತಿ ವೇತನ ಪಾವತಿಸಬೇಕು.

  • ಎಲ್ಲಾ ಹೈಕೋರ್ಟ್‌ ನ್ಯಾಯಮೂರ್ತಿಗಳು, ಅವರು ಯಾವುದೇ ವಿಧಾನದಲ್ಲಿ ನ್ಯಾಯಾಂಗ ಸೇವೆಗೆ ಸೇರ್ಪಡೆಯಾಗಿದ್ದರೂ, ವಕೀಲರ ಪರಿಷತ್‌ನಿಂದ ಪದೋನ್ನತಿ ಪಡೆದಿರಲಿ ಅಥವಾ ಜಿಲ್ಲಾ ನ್ಯಾಯಾಂಗದಿಂದ ಪದೋನ್ನತಿ ಪಡೆದಿರಲಿ ಅವರು ಸಂಪೂರ್ಣ ನಿವೃತ್ತಿ ವೇತನಕ್ಕೆ ಅರ್ಹರು.

  • ಹೈಕೋರ್ಟ್‌ ನ್ಯಾಯಮೂರ್ತಿಗಳ ಪತ್ನಿಯರಿಗೆ ನಿವೃತ್ತಿ ವೇತನ ಪಾವತಿಸುವಂತೆ ಹೆಚ್ಚುವರಿ ನ್ಯಾಯಮೂರ್ತಿಗಳ ಪತ್ನಿಯರಿಗೂ ನಿವೃತ್ತಿ ವೇತನ ಪಾವತಿಸಬೇಕು.

Kannada Bar & Bench
kannada.barandbench.com