ಮೌಢ್ಯ ನಿರ್ಮೂಲನೆಗೆ ತಾನು ನಿರ್ದೇಶನ ನೀಡಲಾಗದು ಎಂದ ಸುಪ್ರೀಂ ಕೋರ್ಟ್

ಕೇವಲ ನ್ಯಾಯಾಲಯದ ಮೆಟ್ಟಿಲೇರಿದ ಮಾತ್ರಕ್ಕೆ ನೀವು ಸಮಾಜ ಸುಧಾರಕರಾಗುವುದಿಲ್ಲ ಎಂದು ಕೂಡ ಪೀಠ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರಿಗೆ ಬುದ್ಧಿವಾದ ಹೇಳಿತು.
Supreme Court of India
Supreme Court of India
Published on

ದೇಶದಿಂದ ಮೌಢ್ಯವನ್ನು ತೊಡೆದು ಹಾಕುವಂತೆ ಹಾಗೂ ಭಾರತೀಯರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಆಗ್ರಹಿಸುವಂತೆ ಕೋರಿ ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ [ಅಶ್ವಿನಿ ಕುಮಾರ್‌ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇವಲ ನ್ಯಾಯಾಲಯಕ್ಕೆ ಎಡತಾಕಿದ ಮಾತ್ರಕ್ಕೆ ನೀವು ಸಮಾಜ ಸುಧಾರಕರಾಗುವುದಿಲ್ಲ. ಸಮಾಜ ಸುಧಾರಕರು ಎಂದಿಗೂ ನ್ಯಾಯಾಲಯದ ಮೊರೆ ಹೋಗುವುದಿಲ್ಲ. ನಾವು ಕಾನೂನಿನ ಮಡಿಲಲ್ಲಿ ಕೆಲಸ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ  ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿತು.

ಮೂಢನಂಬಿಕೆ ಮತ್ತು ವಾಮಾಚಾರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಸಂವಿಧಾನದ 51ಎನಲ್ಲಿ ತಿಳಿಸಿರುವಂತೆ ವೈಜ್ಞಾನಿಕ ಮನೋಭಾವ, ಮಾನವತಾವಾದ ಹಾಗೂ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಲು ಸೂಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ಕಟ್ಟುನಿಟ್ಟಾದ ಮೌಢ್ಯ ಮತ್ತು ವಾಮಾಚಾರ ವಿರೋಧಿ ಕಾನೂನು ಜಾರಿಗೆ ತರಬೇಕು; ಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಮಾಜದಲ್ಲಿ ಪ್ರಚಲಿತದಲ್ಲಿರುವ ಅವೈಜ್ಞಾನಿಕ ಕೃತ್ಯಗಳನ್ನು ತೊಡೆದುಹಾಕಬೇಕು; ಸಮಾಜದ ಎಲ್ಲರನ್ನೂ ಅದರಲ್ಲಿಯೂ ಎಸ್‌ಸಿ, ಎಸ್‌ಟಿ ವರ್ಗಗಳನ್ನು ಅತಾರ್ಕಿಕ ನಂಬಿಕೆಯ ಆಧಾರದಲ್ಲಿ ನೋಡಬಾರದು; ಮುಗ್ಧ ಜನರನ್ನು ಶೋಷಣೆ ಮಾಡುವುದನ್ನು ತಡೆಯಬೇಕು; ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವೈಚಾರಿಕ ಮನೋಭಾವ ಬೆಳೆಸಬೇಕು. ದಾಭೋಲ್ಕರ್-ಪನ್ಸಾರೆ ಅವರಂತಹ ಸಾಮಾಜಿಕ ಹೋರಾಟಗಾರರ ಹತ್ಯೆಯನ್ನು ತಡೆಯಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

Also Read
[ನರಬಲಿ ಪ್ರಕರಣ] ಕ್ಷುದ್ರ ನಂಬಿಕೆ, ಮೌಢ್ಯ ಹರಡಲು ಸಾಮಾಜಿಕ ಮಾಧ್ಯಮಗಳ ಬಳಕೆ: ಕೇರಳ ನ್ಯಾಯಾಲಯ

ಮನವಿಯನ್ನು ಆಲಿಸಿದ ಪೀಠವು, ಪ್ರಭುತ್ವದ ನೀತಿ ನಿರ್ದೇಶಕ ತತ್ವಗಳು ವೈಜ್ಞಾನಿಕ ಮನೋಭಾವದ ಅಭಿವೃದ್ಧಿಗೆ ಒತ್ತು ನೀಡುತ್ತವೆ ಆದರೆ ಅದನ್ನು ನ್ಯಾಯಾಂಗ ನಿರ್ದೇಶಿಸಲಾಗದು ಎಂದು ನುಡಿಯಿತು.

ಆದರೂ ಇತ್ತೀಚೆಗೆ ನಡೆದಿದ್ದ ಭಾಟಿಯಾ ಕುಟುಂಬದ 11 ಸದಸ್ಯರ ಸಾಮೂಹಿಕ ಆತ್ಮಹತ್ಯೆ ಮತ್ತು ಹಾಥ್‌ರಸ್‌ ಕಾಲ್ತುಳಿತ ದುರಂತವನ್ನು ಉಲ್ಲೇಖಿಸಿ ಉಪಾಧ್ಯಾಯ ಅವರು ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಈ ವೇಳೆ ನ್ಯಾಯಾಲಯವು ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಳ್ಳುವಂತೆ ತಾನು ನಾಗರಿಕರಿಗೆ ನಿರ್ದೇಶನ ನೀಡಲಾಗದು ಎಂದು ಸ್ಪಷ್ಟಪಡಿಸಿತು

Also Read
[ಸಂವಿಧಾನ ಜಾಥಾ] ಫೆ.24 ಮತ್ತು 25ರಂದು ಎರಡು ದಿನಗಳ ರಾಷ್ಟ್ರೀಯ ಐಕ್ಯತಾ ಸಮಾವೇಶ: ಸಿಎಂ ಸಿದ್ದರಾಮಯ್ಯ

ಅಲ್ಲದೆ ಅನೇಕ ಭಾಗೀದಾರರೊಂದಿಗೆ ಸಮಾಲೋಚಿಸಿ ಸಂಸತ್ತು ಈ ಕುರಿತಂತೆ ಮಧ್ಯಪ್ರವೇಶಿಸಬಹುದು. ವೈಜ್ಞಾನಿಕ ಮನೋಭಾವ ಬೆಳೆಸುವಂತೆ ಮಾಡಲು ಕಾನೂನು ರೂಪಿಸಬಹುದು. ಆದರೆ ತಾನು ಈ ಕುರಿತು ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು. ಈ ಹಿನ್ನೆಲೆಯಲ್ಲಿ ಉಪಾಧ್ಯಾಯ ಅವರು ತಮ್ಮ ಮನವಿ ಹಿಂಪಡೆದರು. 

Kannada Bar & Bench
kannada.barandbench.com