ಸಲಿಂಗ ವಿವಾಹ ಪರಿಗಣಿಸಲು ಕೋರಿ ಸಲಿಂಗ ಜೋಡಿಯಿಂದ ಅರ್ಜಿ: ಕೇಂದ್ರ ಸರ್ಕಾರ, ಅಟಾರ್ನಿ ಜನರಲ್‌ಗೆ ಸುಪ್ರೀಂ ನೋಟಿಸ್‌

ತಮ್ಮ ಇಚ್ಛೆಯ ವ್ಯಕ್ತಿಯ ಜೊತೆ ವಿವಾಹ ಮಾಡಿಕೊಳ್ಳುವ ಹಕ್ಕನ್ನು ಎಲ್‌ಜಿಬಿಟಿಕ್ಯು ಪ್ರಜೆಗಳಿಗೂ ವಿಸ್ತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
same sex marriage and Supreme Court
same sex marriage and Supreme Court
Published on

ವಿಶೇಷ ವಿವಾಹ ಕಾಯಿದೆ ಅಡಿ ಸಲಿಂಗ ವಿವಾಹ ಪರಿಗಣಿಸಲು ಕೋರಿ ಸಲಿಂಗ ಜೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸಲು ಆದೇಶಿಸಿದೆ.

ಹೈದರಾಬಾದ್‌ನಲ್ಲಿ ನೆಲೆಸಿರುವ ಸಲಿಂಗ ಜೋಡಿಯಾದ ಸುಪ್ರಿಯೊ ಚಕ್ರವರ್ತಿ ಮತ್ತು ಅಭಯ್‌ ದಂಗ್‌ ಸಲ್ಲಿಸಿರುವ ಪ್ರಮುಖ ಮನವಿಯ ವಿಚಾರಣೆಯನ್ನು‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ನೋಟಿಸ್‌ ಜಾರಿ ಮಾಡಲಾಗಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು. ಕೇಂದ್ರ ಸಂಸ್ಥೆಗೆ ನೋಟಿಸ್‌ ನೀಡುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಅಟಾರ್ನಿ ಜನರಲ್‌ ಅವರಿಗೂ ನೋಟಿಸ್‌ ನೀಡಬೇಕು” ಎಂದು ಪೀಠ ನಿರ್ದೇಶಿಸಿತು.

ತಮ್ಮ ಇಚ್ಛೆಯ ವ್ಯಕ್ತಿಯ ಜೊತೆ ವಿವಾಹ ಮಾಡಿಕೊಳ್ಳುವ ಹಕ್ಕನ್ನು ಎಲ್‌ಜಿಬಿಟಿಕ್ಯು ಪ್ರಜೆಗಳಿಗೂ ವಿಸ್ತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಸುಪ್ರಿಯೊ ಮತ್ತು ಅಭಯ್‌ ಅವರು ಒಂದು ದಶಕದಿಂದ ಜೋಡಿಯಾಗಿದ್ದು, ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದು, ಅದರಿಂದ ಸುಧಾರಿಸಿಕೊಂಡ ಬಳಿಕ ವಿವಾಹ ಬಂಧಕ್ಕೆ ಒಳಗಾಗಿದ್ದರು. ಅದಾಗ್ಯೂ, ಅರ್ಜಿದಾರರಿಗೆ ವಿವಾಹಿತ ದಂಪತಿಗೆ ಇರುವ ಹಕ್ಕುಗಳಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Kannada Bar & Bench
kannada.barandbench.com