
ವಕ್ಫ್ (ತಿದ್ದುಪಡಿ) ಕಾಯಿದೆ- 2025ರ ಜಾರಿಗೆ ತಡೆ ನೀಡಿದ್ದರೂ, ವಕ್ಫ್ ಆಸ್ತಿಯದ ದರ್ಗಾವೊಂದನ್ನು ಕೆಡವಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ನೀಡಿದೆ.
ವಕ್ಫ್ ಕಾಯಿದೆಯಲ್ಲಿನ ಇತ್ತೀಚಿನ ಬದಲಾವಣೆಗಳ ವಿರುದ್ಧ ಇದಾಗಲೇ ತಮ್ಮ ಮುಂದೆ ಬಾಕಿ ಇರುವ ಮನವಿಯೊಂದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಉತ್ತರಾಖಂಡ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಅಸ್ತಿತ್ವದಲ್ಲಿರುವ ಯಾವುದೇ ವಕ್ಫ್ ಅನ್ನು ತಾನು ಡಿನೋಟಿಫೈ ಮಾಡುವುದಿಲ್ಲ ಅಥವಾ ವಕ್ಫ್ ಮಂಡಳಿಗಳನ್ನು ರಚಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.
ವಕೀಲ ಫುಜೈಲ್ ಅಹ್ಮದ್ ಅಯ್ಯೂಬಿ ಅವರ ಮೂಲಕ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ, ಡೆಹ್ರಾಡೂನ್ ಸ್ಥಳೀಯ ಆಡಳಿತವು ಏಪ್ರಿಲ್ 25 ರ ತಡರಾತ್ರಿ ಯಾವುದೇ ನೋಟಿಸ್ ನೀಡದೆ ಹಜರತ್ ಕಮಲ್ ಶಾ ದರ್ಗಾವನ್ನು ಕೆಡವಿದೆ ಎಂದು ದೂರಲಾಗಿದೆ
ದರ್ಗಾ ಹಜರತ್ ಕಮಲ್ ಶಾ ಅನ್ನು 1982 ರಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಸುನ್ನಿ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್‌ಗಳಲ್ಲಿ ಡೆಹ್ರಾಡೂನ್‌ನ 55 ನೇ ಸಂಖ್ಯೆಯ ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದ್ದು ತೆರವು ಕಾರ್ಯಾಚರಣೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗೆ ವ್ಯತಿರಿಕ್ತವಾಗಿದೆ ಎಂದು ಅರ್ಜಿ ಹೇಳಿದೆ.