ಪಶ್ಚಿಮ ಬಂಗಾಳದಲ್ಲಿ ಮುಂಬರುವ ಕಾಳಿ ಪೂಜೆ, ದೀಪಾವಳಿ, ಛತ್ ಪೂಜಾ, ಜಗಧಾತ್ರಿ ಪೂಜಾ, ಗುರು ನಾನಕ್ ಜಯಂತಿ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಿದ್ದ ಕಲ್ಕತ್ತಾ ಹೈಕೋರ್ಟ್‌ನ ಇತ್ತೀಚೆಗಿನ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಬದಿಗೆ ಸರಿಸಿದೆ.
ಮಾಲಿನ್ಯ ಕಾರಕಗಳನ್ನು ಹೊಂದಿರುವ ಪಟಾಕಿಗಳಿಗೆ ನಿರ್ಬಂಧ ವಿಧಿಸಿ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಹೀಗಾಗಿ, ಪಟಾಕಿ ಸಿಡಿಸುವುದರ ಮೇಲೆ ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ನೇತೃತ್ವದ ವಿಭಾಗೀಯ ಪೀಠವು ಆದೇಶಿಸಿದೆ.
“ಪಟಾಕಿ ಸುಡುವುದರ ಮೇಲೆ ಸಂಪೂರ್ಣ ನಿಷೇಧ ಹೇರಲಾಗದು. ಸುಪ್ರೀಂ ಕೋರ್ಟ್ ಹಿಂದಿನ ನಿರ್ದೇಶನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಜಾರಿಗೊಳಿಸಲು ವ್ಯವಸ್ಥೆ ಬಲಪಡಿಸಬೇಕು” ಎಂದು ಪೀಠ ಹೇಳಿದೆ.
ಬೇರಿಯಂ ಅಂಶವನ್ನು ಒಳಗೊಂಡಿರುವ ಪಟಾಕಿಗಳ ಮೇಲೆ ನಿಷೇಧ ಹೇರಿ, ಹಸಿರು ಪಟಾಕಿ ಬಳಸಲು ಜುಲೈ ಮತ್ತು ಅಕ್ಟೋಬರ್ ಆದೇಶದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಸುಪ್ರೀಂ ಕೋರ್ಟ್ ಆದೇಶವು ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ. ಇದರಲ್ಲಿ ಪಶ್ಚಿಮ ಬಂಗಾಳ ಹೊರತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಇದು ಹೊಸ ವಿಷಯವಲ್ಲ. ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ಮಾಡಿದೆ. ಸಾರ್ವತ್ರಿಕವಾಗಿ ಇದನ್ನು ಜಾರಿ ಮಾಡಬೇಕು” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ವಕೀಲ ಆನಂದ್ ಗ್ರೋವರ್ ಮೂಲಕ ಪಶ್ಚಿಮ ಬಂಗಾಳವು ಪೀಠಕ್ಕೆ ತಿಳಿಸಿದೆ. ಗ್ರೋವರ್ ವಾದವನ್ನು ದಾಖಲಿಸಿಕೊಂಡ ಪೀಠವು ಹೈಕೋರ್ಟ್ ವಾದವನ್ನು ಬದಿಗೆ ಸರಿಸಿತು.
ಪಟಾಕಿ ವ್ಯಾಪಾರಿಗಳನ್ನು ಪ್ರತಿನಿಧಿಸಿದ್ದ ವಕೀಲ ಸಿದ್ಧಾರ್ಥ್ ಭಟ್ನಾಗರ್ ಅವರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ವಿವರವಾಗಿ ವಿಚಾರಣೆ ನಡೆಸಿವೆ ಎಂದರು. ಸುಪ್ರೀಂ ಕೋರ್ಟ್ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ, ಕಲ್ಕತ್ತಾ ಹೈಕೋರ್ಟ್ ಆದೇಶವು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಪಕ್ಷಕಾರರನ್ನು ಪ್ರತಿನಿಧಿಸಿದ್ದ ವಕೀಲೆ ಮಾಳವಿಕಾ ತ್ರಿವೇದಿ ಅವರು ಇದೇ ವಾದವನ್ನು ಮಂಡಿಸಿದರು.
ಹಸಿರುವ ಪಟಾಕಿ ಎಂಬ ಚೀಟಿ ಅಂಟಿಸಿ ನಿಷೇಧಿತ ಪಟಾಕಿಗಳನ್ನು ಹಲವು ತಯಾರಕರು ಮಾರಾಟ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಾಕಿ ಇರುವ ಮನವಿಯಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಹೇಳಿದರು. ಈ ವಿಚಾರವನ್ನು ನ್ಯಾಯಮೂರ್ತಿ ಎಂ ಆರ್ ಶಾ ನೇತೃತ್ವದ ಪೀಠವು ಪರಿಗಣನೆಗೆ ತೆಗೆದುಕೊಂಡಿದೆ ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಕ್ರಮ ಕೈಗೊಂಡಿರುವುದನ್ನು ಪರಿಗಣಿಸಿದ ಪೀಠವು ಶಂಕರ ನಾರಾಯಣನ್ ಅವರ ವಾದವನ್ನು ಒಪ್ಪಲಿಲ್ಲ.
“ಪ್ರಾಯೋಗಿಕ ಸಮಸ್ಯೆಗಳು ಮತ್ತು ಹಸಿರು ಪಟಾಕಿಯನ್ನಷ್ಟೇ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಯೋಜನೆ ಜಾರಿಯಲ್ಲಿ ಇಲ್ಲದಿರುವುದನ್ನು ಪರಿಗಣಿಸಿ ಕಲ್ಕತ್ತಾ ಹೈಕೋರ್ಟ್ ಪಟಾಕಿ ನಿಷೇಧಿಸಿ ಆದೇಶ ಮಾಡಿತ್ತು. ಎಲ್ಲಾ ದತ್ತಾಂಶವನ್ನು ದಾಖಲೆಯಲ್ಲಿ ಮಂಡಿಸುವ ಮೂಲಕ ಹೈಕೋರ್ಟ್ ಮನವೊಲಿಸಿ ಸುಪ್ರೀಂ ಕೋರ್ಟ್‌ಗೆ ವಿರುದ್ಧವಾದ ಆದೇಶ ಮಾಡದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆನಂದ್ ಗ್ರೋವರ್ ಹೇಳಿದ್ದಾರೆ. ಇಂಥ ಕಠಿಣವಾದ ಆದೇಶ ಮಾಡುವುದಕ್ಕೂ ಮುನ್ನ ಕಲ್ಕತ್ತಾ ಹೈಕೋರ್ಟ್ ಎಲ್ಲಾ ಪಕ್ಷಕಾರರನ್ನು ಆಲಿಸಬೇಕಿತ್ತು ಎಂದು ನಮಗೆ ಮನವರಿಕೆಯಾಗಿದೆ” ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ.