ಸಹಾರಾ ಸಮೂಹಕ್ಕೆ ಸಂಬಂಧಿಸಿದ ಒಂಬತ್ತು ಕಂಪೆನಿಗಳ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ನೀಡಿದ್ದ ಎರಡು ಆದೇಶಗಳ ಕಾರ್ಯಾಚರಣೆ, ಜಾರಿ ಹಾಗೂ ಅನುಷ್ಠಾನಕ್ಕೆ ದೆಹಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ರಜಾಕಾಲೀನ ಪೀಠ ಗುರುವಾರ ರದ್ದುಗೊಳಿಸಿದೆ [ಎಸ್‌ಎಫ್‌ಐಒ ಇನ್ನಿತರರು ಹಾಗೂ ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತಿತರರ ನಡುವಣ ಪ್ರಕರಣ].
ಸಹಾರಾ ಸಮೂಹದ ಒಂಬತ್ತು ಕಂಪನಿಗಳ ವಿರುದ್ಧದ ತನಿಖೆಗೆ ದೆಹಲಿ ಹೈಕೋರ್ಟ್ ಡಿಸೆಂಬರ್ 2021ರಲ್ಲಿ ತಡೆ ನೀಡಿತ್ತು. ಇದನ್ನು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಮಧ್ಯಂತರ ಹಂತದಲ್ಲಿ ತನಿಖೆಗೆ ತಡೆ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ತ್ರಿವೇದಿ ಅವರಿದ್ದ ರಜಾಕಾಲೀನ ಪೀಠ, ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿತು.
ನ್ಯಾಯಾಲಯದ ಈ ನಿರ್ಧಾರವು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಸಹಾರಾದ ಬೇರೆ ಅರ್ಜಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಹಾರಾ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ತಿಳಿಸಿದರು.
ಆದರೆ ತನ್ನ ಆದೇಶ ಹೈಕೋರ್ಟ್‌ನಲ್ಲಿ ಬಾಕಿ ಇರುವ ರಿಟ್ ಅರ್ಜಿಗಳ ವಿಚಾರಣಾರ್ಹತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ಎಸ್‌ಎಫ್‌ಐಒ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.