ಮೈಸೂರು ಜಿಲ್ಲಾ ನ್ಯಾಯಾಧೀಶರನ್ನು ತರಬೇತಿಗೆ ಕಳಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರ್ದೇಶನ ರದ್ದುಪಡಿಸಿದ ಸುಪ್ರೀಂ

ಅಂತಹ ಆದೇಶಗಳನ್ನು ಸಂಬಂಧಪಟ್ಟ ನ್ಯಾಯಾಧೀಶರ ವಿಚಾರಣೆ ನಡೆಸದೆ ಹೊರಡಿಸಬಾರದು, ಇದರಿಂದ ಅವರ ವೃತ್ತಿ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Supreme Court
Supreme Court

ಜಾಮೀನು ನೀಡುವ ವಿವೇಚನಾಧಿಕಾರ ಚಲಾಯಿಸುವುದನ್ನು ಕಲಿಯುವುದಕ್ಕಾಗಿ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯುವಂತೆ ಮೈಸೂರಿನ ನ್ಯಾಯಾಧೀಶರಿಗೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಅಶ್ವಿನಿ ವಿಜಯ್ ಶಿರಿಯಣ್ಣನವರ್ ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇನ್ನಿತರರ ನಡುವಣ ಪ್ರಕರಣ].

ಸೆಷನ್ಸ್ ನ್ಯಾಯಾಧೀಶರ ವಿರುದ್ಧ ಮಾಡಿದ ಅವಲೋಕನಗಳನ್ನು ಬದಿಗೆ ಸರಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಹೈಕೋರ್ಟ್‌ ಆದೇಶವನ್ನು ಉದ್ದೇಶಿಸಿ ಹಾಗೆ ಮಾಡುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದೆ.

“ನಮ್ಮ ಅಭಿಪ್ರಾಯದಲ್ಲಿ ಅಂತಹ ಅವಲೋಕನ ಮತ್ತು ನಿರ್ದೇಶನ ಸಮರ್ಥನೀಯವಲ್ಲ. ವೃತ್ತಿ ಮತ್ತು ಗೌರವದ ಮೇಲೆ ಪರಿಣಾಮ ಬೀರುವಂತಹ ಇಂತಹ ಆದೇಶವನ್ನು ವ್ಯಕ್ತಿಯ ವಿಚಾರಣೆಗೆ ಅವಕಾಶ ನೀಡದೆ ಜಾರಿಗೆ ತರಬಾರದು ಎಂದು ಈ ನ್ಯಾಯಾಲಯ ಪದೇ ಪದೇ ಸೂಚಿಸುತ್ತಿದೆ” ಎಂಬುದಾಗಿ ಪೀಠ ತಿಳಿಸಿತು.

Also Read
ಅನಗತ್ಯವಾಗಿ ಜನರನ್ನು ಜೈಲಿಗೆ ಕಳಿಸುವ ನ್ಯಾಯಾಧೀಶರಿಗೆ ಕೌಶಲ್ಯ ವೃದ್ಧಿ ತರಬೇತಿ ನೀಡಬೇಕಾಗುತ್ತದೆ: ಸುಪ್ರೀಂ ಕೋರ್ಟ್

ಆದೇಶದಲ್ಲಿ ತನ್ನ ವಿರುದ್ಧ ಮಾಡಲಾದ ಅವಲೋಕನಗಳು ಮತ್ತು ನೀಡಲಾದ ನಿರ್ದೇಶನಗಳನ್ನು ಪ್ರಶ್ನಿಸಿ ನ್ಯಾಯಾಂಗ ಅಧಿಕಾರಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಗೊಳಿಸುವ ವೇಳೆ ಹೈಕೋರ್ಟ್‌ “ನ್ಯಾಯಾಧೀಶರು ನ್ಯಾಯಾಂಗ ವಿವೇಚನಾಧಿಕಾರ ಚಲಾಯಿಸಲು ವಿಫಲವಾಗಿದ್ದು ವಿಕೃತ ಮತ್ತು ವಿಕ್ಷಿಪ್ತ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಘೋರ ಅಪರಾಧಗಳಲ್ಲಿ ಜಾಮೀನು ನೀಡುವ ಮೊದಲು ನ್ಯಾಯಯುತ ಚಿಂತನೆಯ ಪ್ರಕ್ರಿಯೆ ಅನ್ವಯಿಸುವ ಮತ್ತು ನ್ಯಾಯಾಂಗ ವಿವೇಚನೆಯನ್ನು ಚಲಾಯಿಸಲು ತರಬೇತಿ ಪಡೆಯುವುದಕ್ಕಾಗಿ ನ್ಯಾಯಾಧೀಶರನ್ನು ನ್ಯಾಯಾಂಗ ಅಕಾಡೆಮಿಗೆ ಕಳುಹಿಸುವಂತೆ ಹೈಕೋರ್ಟ್ ನಿರ್ದೇಶಿಸಿತ್ತು.

Kannada Bar & Bench
kannada.barandbench.com