ಸಮಗ್ರ ಲೈಂಗಿಕ ಶಿಕ್ಷಣ ಯೋಜನೆ ಜಾರಿಗೆ ಸುಪ್ರೀಂ ಕೋರ್ಟ್ ಸಲಹೆ

ಆರೋಗ್ಯಕರ ಸಂಬಂಧ, ಸಮ್ಮತಿ ಮತ್ತು ಸೂಕ್ತ ವರ್ತನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಶಾಲಾ-ಆಧಾರಿತ ಕಾರ್ಯಕ್ರಮ ಜಾರಿಗೊಳಿಸಿದರೆ ಅದರಿಂದ ಸಮಸ್ಯಾತ್ಮಕ ಲೈಂಗಿಕ ವರ್ತನೆ ತಡೆಯಲು ಸಹಕಾರಿಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
Supreme Court of India
Supreme Court of India
Published on

ಸಮ್ಮತಿಯ ಲೈಂಗಿಕ ಕ್ರಿಯೆ ಬಗ್ಗೆ ಅರಿವು ಮೂಡಿಸುವ ಹಾಗೂ ಶೋಷಣೆಯ ಪರಿಣಾಮಗಳ ಬಗ್ಗೆ ಯುವಜನರಿಗೆ ಸ್ಪಷ್ಟವಾದ ತಿಳಿವಳಿಕೆ ನೀಡಲು ಸಮಗ್ರ ಲೈಂಗಿಕ ಶಿಕ್ಷಣ ಯೋಜನೆ ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತುವಿಷಯ ವೀಕ್ಷಣೆ, ಸಂಗ್ರಹ, ಪ್ರಸರಣ ಪೋಕ್ಸೊ ಕಾಯಿದೆಯಡಿ ಅಪರಾಧ ಎಂದು ಸೋಮವಾರ ನೀಡಿದ ಮಹತ್ವದ ತೀರ್ಪಿನ ವೇಳೆ ಅದು ಈ ವಿಚಾರ ತಿಳಿಸಿದೆ.

ಆರೋಗ್ಯ ಮತ್ತು ಲೈಂಗಿಕ ಶಿಕ್ಷಣ ಕುರಿತಂತೆ ಸಮಗ್ರ ಕಾರ್ಯಕ್ರಮ ಅಥವಾ ಕಾರ್ಯವಿಧಾನ ರೂಪಿಸಲು ತಜ್ಞರ ಸಮಿತಿ  ರಚಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸಲಹೆ ನೀಡಿತು.

ಸುಪ್ರೀಂ ಕೋರ್ಟ್‌ ಅವಲೋಕನದ ಪ್ರಮುಖಾಂಶಗಳು

  • ಭಾರತದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ತಪ್ಪು ಕಲ್ಪನೆಗಳು ವ್ಯಾಪಕವಾಗಿದ್ದು ಸಾಮಾಜಿಕ ಅಪವಾದದ ಭೀತಿ  ಲೈಂಗಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿತ ಉಂಟಾಗಿದೆ. ಪರಿಣಾಮ  ಹದಿಹರೆಯದವರಲ್ಲಿ ಈ ಬಗೆಗಿನ ಜ್ಞಾನದ ಕೊರತೆ ಬಹಳಷ್ಟಿದೆ. ಪೋಷಕರು ಮತ್ತು ಶಿಕ್ಷಕರು ಸೇರಿದಂತೆ ಅನೇಕ ಜನರು ಲೈಂಗಿಕತೆಯನ್ನು ಚರ್ಚಿಸುವುದು ಸೂಕ್ತವಲ್ಲ ಎಂದು ಭಾವಿಸಿದ್ದಾರೆ.

  • ಆದರೆ, ಸಮಗ್ರ ಲೈಂಗಿಕ ಶಿಕ್ಷಣ ವಾಸ್ತವವಾಗಿ ಲೈಂಗಿಕ ಚಟುವಟಿಕೆಗೆ ಮುಂದಾಗುವುದನ್ನು ವಿಳಂಬಗೊಳಿಸುತ್ತದೆ. ಮತ್ತು ಲೈಂಗಿಕವಾಗಿ ಸಕ್ರಿಯವಾಗಿರುವವರಲ್ಲಿ ಸುರಕ್ಷಿತ ಅಭ್ಯಾಸ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

  • ಲೈಂಗಿಕ ಶಿಕ್ಷಣವು ಪಾಶ್ಚಿಮಾತ್ಯ ಪರಿಕಲ್ಪನೆಯಾಗಿದ್ದು ಅದು ಸಾಂಪ್ರದಾಯಿಕ ಭಾರತೀಯ ಮೌಲ್ಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬ ಸಾಮಾನ್ಯ ನಂಬಿಕೆಯಿಂದಾಗಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ವಿವಿಧ ರಾಜ್ಯ ಸರ್ಕಾರಗಳು ಪ್ರತಿರೋಧ ಒಡ್ಡುತ್ತಿವೆ.

  • ಈ ಬಗೆಯ ವಿರೋಧದಿಂದ ಸಮಗ್ರ ಮತ್ತು ಪರಿಣಾಮಕಾರಿ ಲೈಂಗಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯುಂಟಾಗಿ, ಅನೇಕ ಹದಿಹರೆಯದವರು ನಿಖರವಾದ ಮಾಹಿತಿ ಇಲ್ಲದವರಾಗುತ್ತಾರೆ.

  •  ಜಾರ್ಖಂಡ್‌ನ  ಉಡಾನ್ ಕಾರ್ಯಕ್ರಮದಂತೆ ಭಾರತದಲ್ಲಿ ಯಶಸ್ವಿ ಲೈಂಗಿಕ ಶಿಕ್ಷಣ ಕಾರ್ಯಕ್ರಮ ಜಾರಿಯಾಗಬೇಕು.

  • ಲೈಂಗಿಕ ಶಿಕ್ಷಣ ಎಂಬುದು ಸಂತಾನೋತ್ಪತ್ತಿಯ ಜೈವಿಕ ಅಂಶಗಳನ್ನಷ್ಟೇ ಅಲ್ಲದೆ ಸಮ್ಮತಿ, ಆರೋಗ್ಯಕರ ಸಂಬಂಧಗಳು, ಲಿಂಗ ಸಮಾನತೆ ಮತ್ತು ಲಿಂಗ ವೈವಿಧ್ಯತೆ ಬಗೆಗಿನ ಗೌರವ ಸೇರಿದಂತೆ ವ್ಯಾಪಕ ವಿಚಾರಗಳನ್ನು ಒಳಗೊಳ್ಳುತ್ತದೆ.  

  • ಲೈಂಗಿಕ ದೌರ್ಜನ್ಯವನ್ನು ಕಡಿಮೆ ಮಾಡಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಈ ವಿಷಯಗಳನ್ನು ತಿಳಿಸುವುದು ಬಹಳ ಮುಖ್ಯ .

  • ಪೋಕ್ಸೊ ಕಾಯಿದೆಯ ಕೆಲ ಸೆಕ್ಷನ್‌ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿರುವ ಬಾಧ್ಯತೆ ಜಾಗೃತಿ ಮೂಡಿಸಲಷ್ಟೇ ಸೀಮಿತವಾಗಿಲ್ಲ ಬದಲಿಗೆ ತತ್ಪರಿಣಾಮವಾಗಿ ಸಾರ್ವಜನಿಕರು ಮತ್ತು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಕುರಿತಂತೆಯೂ ಹೇಳುತ್ತವೆ.

  • ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮತ್ತು ಅಶ್ಲೀಲತೆಯ ವ್ಯಸನದ ಸಮಸ್ಯೆಗೆ ಕಡಿವಾಣ ಹಾಕಲು ಪ್ರಾಯೋಗಿಕ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಶ್ರದ್ಧೆಯಿಂದ ಸರ್ಕಾರಗಳು ಗಣನೆಗೆ ತೆಗೆದುಕೊಳ್ಳಬೇಕು.

  • ಅಂತಿಮವಾಗಿ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತ ಮಕ್ಕಳಿಗೆ ಅಗತ್ಯವಾದ ಆರೈಕೆ, ರಕ್ಷಣೆ, ಬೆಂಬಲ ಹಾಗೂ ನ್ಯಾಯವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಅವರು ಮುಂಚಿನ ಸ್ಥಿತಿಗೆ ಮರಳಲು ಅಗತ್ಯವಾದ ಹಾದಿಯನ್ನು ಹುಡುಕಿಕೊಳ್ಳಲು ಹಾಗೂ ಭದ್ರತೆ, ಘನತೆ ಹಾಗೂ ಆಶಾವಾದದ ಭಾವನೆಯನ್ನು ಬೆಳೆಸಿಕೊಳ್ಳಲು ನಾವು ಸಹಾಯ ಮಾಡಬೇಕಿದೆ. ಈ ಹಾದಿಯು ಸಮಾಜದ ಧೋರಣೆಯನ್ನು ಬದಲಿಸುವುದನ್ನು, ಸಂತ್ರಸ್ತರನ್ನು ರಕ್ಷಿಸಲು ಕಾನೂನಾತ್ಮಕ ಚೌಕಟ್ಟುಗಳನ್ನು ಸುಧಾರಿಸುವುದನ್ನು ಹಾಗೂ ಶೋಷಕರನ್ನು ಅವರ ತಪ್ಪಿಗೆ ಹೊಣೆಗಾರರನ್ನಾಗಿಸುವುದನ್ನು ಒಳಗೊಳ್ಳುತ್ತದೆ.

Kannada Bar & Bench
kannada.barandbench.com