
ಕಾನೂನು ಪ್ರಕ್ರಿಯೆ ಪಾಲಿಸದೆ ವಕೀಲರು, ಪ್ರಾಧ್ಯಾಪಕರು ಸೇರಿದಂತೆ ಆರು ಮಂದಿಯ ಮನೆಗಳನ್ನು ಅಕ್ರಮವಾಗಿ ಕೆಡವಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿತು [ಜುಲ್ಫಿಕರ್ ಹೈದರ್ ಇನ್ನಿತರರು ಮತ್ತು ಉತ್ತರ ಪ್ರದೇಶ ಸರ್ಕಾರ ಮತ್ತಿತರರ ನಡುವಿನ ಪ್ರಕರಣ].
ಆರು ಮಂದಿ ಸಂತ್ರಸ್ತರಿಗೆ ತಲಾ ₹10 ಲಕ್ಷ ಪರಿಹಾರದಂತೆ ಒಟ್ಟು ₹60 ಲಕ್ಷ ಪರಿಹಾರವನ್ನು ನೀಡುವಂತೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ನೋಟಿಸ್ ನೀಡಿ 24 ಗಂಟೆಗಳ ಒಳಗೆ ಆರು ಜನರ ಮನೆಗಳನ್ನು 2021ರಲ್ಲಿ ಕೆಡವಿದ್ದಕ್ಕೆ ನ್ಯಾಯಮೂರ್ತಿಗಳು ಆಘಾತ ವ್ಯಕ್ತಪಡಿಸಿದರು. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದ್ದು ಅಮಾನವೀಯ ಮಾತ್ರವಲ್ಲದೆ ಅಧಿಕಾರ ದುರುಪಯೋಗಕ್ಕೆ ಸಮ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
"ಈ ಪ್ರಕರಣಗಳು ನಮ್ಮ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ. ಮೇಲ್ಮನವಿ ಸಲ್ಲಿಸಿದವರ ವಸತಿಗಳನ್ನು ನಿರಂಕುಶ ರೀತಿಯಲ್ಲಿ ಕೆಡವಲಾಗಿದೆ... ಸಂವಿಧಾನದ ಅಡಿಯಲ್ಲಿ ಆಶ್ರಯ ಪಡೆಯುವ ಹಕ್ಕು ಇದ್ದು ಇದು ದೇಶದಲ್ಲಿ ಕಾನೂನು ಆಡಳಿತವೆಂಬುದು ಇದ್ದು ಅದು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ ಎಂಬುದನ್ನು ಅಭಿವೃದ್ಧಿ ಪ್ರಾಧಿಕಾರ ನೆನಪಿನಲ್ಲಿಡಬೇಕು. ನಾಗರಿಕರ ವಸತಿ ಕಟ್ಟಡಗಳ ಕುರಿತು ಈ ರೀತಿ ನಿರ್ಧರಿಸುವಂತಿಲ್ಲ. ಈ ರೀತಿಯ ವ್ಯವಹಾರಗಳು ನಿಲ್ಲಬೇಕು” ಎಂದು ನ್ಯಾಯಾಲಯ ಮೌಖಿಕವಾಗಿ ಬುದ್ಧಿವಾದ ಹೇಳಿತು.
ನೋಟಿಸ್‌ಗೆ ಉತ್ತರಿಸಲು ಅವಕಾಶ ನೀಡದೆ ಕಟ್ಟಡಗಳನ್ನು ಕೆಡವಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ ಇದು ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯ್ದೆ, 1973 ರ ಸೆಕ್ಷನ್ 27(1)ರ ಉಲ್ಲಂಘನೆಯಾಗಿದೆ. ಹೀಗಾಗಿ ಕೆಡವುವ ಕ್ರಮ ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ಇದು ಸಂವಿಧಾನದ 21ನೇ ವಿಧಿಯ ಮೂಲಕ ಮೇಲ್ಮನವಿದಾರರರಿಗೆ ಒದಗಿಸಲಾದ ಆಶ್ರಯ ಪಡೆಯುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಿತು.
ಕಟ್ಟಡ ತೆರವು ಕಾರ್ಯಾಚರಣೆ ಕುರಿತಂತೆ ತಾನು ಈಚೆಗೆ ನೀಡಿದ್ದ ತೀರ್ಪುಗಳನ್ನು ಅವಲಂಬಿಸಿದ ಸುಪ್ರೀಂ ಕೋರ್ಟ್ ನೋಟಿಸ್ ಅಂಟಿಸುವುದು ಕೊನೆಯ ಆಯ್ಕೆಯಾಗಿರಬೇಕು ಮತ್ತು ಅದನ್ನು ಸಾಮಾನ್ಯೀಕರಿಸುವಂತಿಲ್ಲ ಎಂದಿತು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದ ಮಂಡಿಸಿದರು.
ಆರು ವಾರಗಳಲ್ಲಿ ಪ್ರತಿಯೊಬ್ಬ ಅರ್ಜಿದಾರನಿಗೂ ತಲಾ ₹10 ಲಕ್ಷ ಪರಿಹಾರ ನೀಡಬೇಕು. ಜೊತೆಗೆ ತಾನು 2024ರಲ್ಲಿ ನೀಡಿರುವ ತೆರವು ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಭಿವೃದ್ಧಿ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು