'ನಿಮಗೆಷ್ಟು ಧೈರ್ಯ?' ಚಾರಿತ್ರಿಕ ಸಮಾಧಿ ಅತಿಕ್ರಮಣಕಾರರು ಹಾಗೂ ಎಎಸ್ಐಗೆ ಚಳಿ ಬಿಡಿಸಿದ ಸುಪ್ರೀಂ ಕೋರ್ಟ್

ಸಮಾಧಿಯನ್ನು ಅತಿಕ್ರಮಿಸಲು ಅವಕಾಶ ನೀಡಿದ್ದಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
Supreme Court
Supreme Court
Published on

ನವದೆಹಲಿಯ ಐತಿಹಾಸಿಕ ಶೇಖ್ ಅಲಿ ಗುಮ್ಟಿ ಸಮಾಧಿಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡ ಡಿಫೆನ್ಸ್ ಕಾಲನಿ ನಿವಾಸಿಗಳ ಕಲ್ಯಾಣ ಸಂಘವನ್ನು ಹಾಗೂ ಈ ಅತಿಕ್ರಮಣ ನಡೆಯುತ್ತಿದ್ದರೂ ನಿಷ್ಕ್ರಿಯವಾಗಿದ್ದ ಭಾರತೀಯ ಪುರಾತತ್ವ  ಸರ್ವೇಕ್ಷಣಾ ಇಲಾಖೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಅತಿಕ್ರಮಣದ ಕುರಿತಾಗಿ ಸಿಬಿಐ ಸಲ್ಲಿಸಿದ್ದ ಸ್ಥಿತಿಗತಿ ವರದಿ ಪರಿಶೀಲಿಸಿದ ನಂತರ, ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಸಂಘವನ್ನು ಕಟುಪದಗಳಲ್ಲಿ ಖಂಡಿಸಿತು.

Also Read
ಡಿಫೆನ್ಸ್‌ ಕಾಲನಿ ನಿವಾಸಿಗಳ ಕಲ್ಯಾಣ ಸಂಘದಿಂದ ಚಾರಿತ್ರಿಕ ಸಮಾಧಿ ಅತಿಕ್ರಮಣ: ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಆದೇಶ

“ಅತಿಕ್ರಮಿಸಲು ನಿಮಗೆಷ್ಟು ಧೈರ್ಯ? ಅದೆಷ್ಟು ಧೈರ್ಯ?” ಎಂದು ನ್ಯಾಯಮೂರ್ತಿ ಧುಲಿಯಾ ಪ್ರಶ್ನಿಸಿದರು. ಆಗ ಸಂಘದ ಪರ ವಕೀಲರು ಅನೇಕ ದಶಕಗಳಿಂದ ನಾವು ಅಲ್ಲಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದ ಮತ್ತಷ್ಟು ಕೆರಳಿದ ನ್ಯಾ. ಧುಲಿಯಾ “ಇದು ಯಾವ ಸೀಮೆಯ ವಾದ?” ಎಂದರು.

ಇದಕ್ಕೆ ದನಿಗೂಡಿಸಿದ ನ್ಯಾ. ಅಮಾನತುಲ್ಲಾ ಅವರು, "ಇದಕ್ಕೆ ಅನುಮತಿ ನೀಡಲಾಗದು, ಅಗತ್ಯ ಬಿದ್ದರೆ ನಾವು ನಿಮ್ಮನ್ನು ಮುಕ್ತ ನ್ಯಾಯಾಲಯದಲ್ಲಿಯೇ ಹೊರಹಾಕಲು ಆದೇಶಿಸಬೇಕಾದೀತು" ಎಂದು ಕಿಡಿಕಾರಿದರು.

ಸಂಘದ ಅತಿಕ್ರಮವಣನ್ನು ಸಮರ್ಥಿಸಿಕೊಳ್ಳಲು ಮುಂದಾದ ಸಂಘದ ಪರ ವಕೀಲರು, "ಸಮಾಜ ವಿರೋಧಿ ಶಕ್ತಿಗಳು ಅಲ್ಲಿ (ಸಮಾಧಿ ಸ್ಥಳದಲ್ಲಿ) ಬೇರೂರುತ್ತವೆ," ಎಂದು ಸಬೂಬು ನೀಡಿದರು. ಇದು ನ್ಯಾಯಾಲಯವನ್ನು ಮತ್ತಷ್ಟು ಕೆರಳಿಸಿತು.

"ನೀವು ವಸಾಹತುಶಾಹಿ ಆಡಳಿತಗಾರರಂತೆ ಮಾತನಾಡುತ್ತಿದ್ದೀರಿ. ನಾವು ಭಾರತಕ್ಕೆ ಬರದಿದ್ದರೆ ಏನಾಗುತ್ತಿತ್ತು ಎನ್ನುವ ಅವರ ವಾದದಂತೆ ಮಾತನಾಡುತ್ತಿದ್ದೀರಿ" ಎಂದು ಪೀಠ ಕುಟುಕಿತು.

ಸಮಾಧಿ ಇರುವ ಪ್ರದೇಶವನ್ನುಅತಿಕ್ರಮಿಸಲು ಸಂಘಕ್ಕೆ ಎಷ್ಟು ಧೈರ್ಯ ?
ನ್ಯಾಯಮೂರ್ತಿ ಸುಧಾಂಶು ಧುಲಿಯಾ

ಇದೇ ವೇಳೆ, ಸಂಘವು ಸಮಾಧಿ ಇರುವ ಸ್ಥಳದಲ್ಲಿ ಛಾವಣಿ, ವಿದ್ಯುತ್ ಫ್ಯಾನ್ ಹಾಗೂ ಪೀಠೋಪಕರಣಗಳನ್ನು ಅಳವಡಿಸಿ ಅತಿಕ್ರಮಣ ಮಾಡಲು ಅವಕಾಶ ನೀಡಿದ್ದಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

“ಕೇವಲ ವಿದ್ಯುತ್ ಸಂಪರ್ಕ ಇದೆ ಎಂಬ ಮಾತ್ರಕ್ಕೆ ಎಎಸ್ಐ ತನ್ನ ನೀತಿಯನ್ನು ತಿರುವು ಮುರುವು ಮಾಡಿದ್ದೇಕೆ? ಈ ಅಚಾತುರ್ಯದ ಸಂಗತಿಗಳು ಇನ್ನು ಸಾಕು. ಅತಿಕ್ರಮಿಸಿರುವವರನ್ನು ತೆರವುಗೊಳಿಸುತ್ತೇವೆ! ಕಿಟಕಿ, ಟೇಬಲ್, ಫ್ಯಾನ್ ಅಳವಡಿಸಿದ ಮಾತ್ರಕ್ಕೆ ಏನೂ ಮಾಡಲಾಗದು ಎಂದೇ? ಇದೇನು ಹುಚ್ಚಾಟ? ಇದು ಸ್ಥಳೀಯ ಅಧಿಕಾರಿಗಳು ನಡೆದುಕೊಳ್ಳುವ ರೀತಿಯೇ? ಇದಕ್ಕೆ ಅನುಮತಿ ನೀಡಲು ಸಾಧ್ಯವೇ? ನಮಗೆ ತೀವ್ರ ಆಘಾತವಾಗಿದೆ” ಎಂದು ನ್ಯಾಯಾಲಯ ಸಿಡಿಮಿಡಗೊಂಡಿತು.

“ತಾನೇ ನೀಡಿರುವ ಆದೇಶಕ್ಕೆ ಎಎಸ್ಐ ವ್ಯತಿರಿಕ್ತವಾಗಿ ನಡೆದುಕೊಂಡಿದೆ! ! 700 ವರ್ಷಗಳ ಲೋದಿ ಯುಗದ ಸಮಾಧಿಗೆ ಸಂಬಂಧಿಸಿದಂತೆ ಇಂಥ ಅನುಮತಿ ನೀಡಲು ಹೇಗೆ ಸಾಧ್ಯ?” ಎಂದು ನ್ಯಾಯಾಲಯ ಪ್ರಶ್ನಿಸಿತು.

ಸಮಾಧಿಗೆ ಉಂಟಾಗಿರುವ ಹಾನಿಯ ಪ್ರಮಾಣವನ್ನು ಅಧ್ಯಯನ ಮಾಡಿ ಪುನರುಜ್ಜೀವನಕ್ಕೆ ಬೇಕಾದ ಕ್ರಮಗಳನ್ನು ಸೂಚಿಸುವುದಕ್ಕಾಗಿ ನ್ಯಾಯಾಲಯ ಅಂತಿಮವಾಗಿ ತಜ್ಞರನ್ನು ನೇಮಿಸಿತು.

ತಜ್ಞರು 6 ವಾರಗಳಲ್ಲಿ ವರದಿ ಸಲ್ಲಿಸಬೇಕು, ಜನವರಿ 21, 2025 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಅತಿಕ್ರಮಣವನ್ನು ಎತ್ತಿ ತೋರಿಸಿದ್ದಕ್ಕಾಗಿ ಸಿಬಿಐ ಮತ್ತು ಅರ್ಜಿದಾರ ರಾಜೀವ್ ಸೂರಿ ಅವರನ್ನು ಪೀಠ ಶ್ಲಾಘಿಸಿದೆ.

Also Read
ಐತಿಹಾಸಿಕ ಸ್ಮಾರಕಗಳ ಸಂರಕ್ಷಿಸಲು ಕೆಲವು ಬಾರಿ ಅವುಗಳ ನವೀಕರಣ ಅಗತ್ಯ: ಸುಪ್ರೀಂ ಕೋರ್ಟ್

ಹಿನ್ನೆಲೆ

ಸ್ಮಾರಕಗಳು ಮತ್ತು ಪ್ರಾಚೀನ ವಸ್ತುಗಳ ರಾಷ್ಟ್ರೀಯ ಮಿಷನ್ ಪ್ರಕಾರ, ಗುಮ್ಟಿಯು 500 ವರ್ಷಗಳ ಹಿಂದೆ ಲೋದಿ ಅವಧಿಯಲ್ಲಿ ನಿರ್ಮಿಸಲಾದ ಅಷ್ಟಭುಜಾಕೃತಿಯ ಸಮಾಧಿಯಾಗಿದೆ. ಸಮಾಧಿಯ ಸುತ್ತಲಿನ ತೆರೆದ ಭೂಮಿಯಲ್ಲಿ ಬಹು ಹಂತದ ಕಾರ್ ಪಾರ್ಕಿಂಗ್ ಮತ್ತು ಶಾಪಿಂಗ್ ಪ್ಲಾಜಾವನ್ನು ನಿರ್ಮಿಸಲು ಡಿಫೆನ್ಸ್ ಕಾಲನಿ ನಿವಾಸಿಗಳ ಕಲ್ಯಾಣ ಸಂಘ ಯತ್ನಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು. ಕಟ್ಟಡವನ್ನು ಡಿಸಿಡಬ್ಲ್ಯೂಎಗೆ ಎಂದಿಗೂ ಹಂಚಿರಲಿಲ್ಲ ಎಂದು ಎಎಸ್ಐ ಮತ್ತು ಕೇಂದ್ರ ಸರ್ಕಾರಗಳ ಪರ ವಕೀಲರು ಕಳೆದ ಏಪ್ರಿಲ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಆಗಸ್ಟ್ 27 ರಂದು, ದಾಖಲೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ 2004ರಲ್ಲಿ ಕೇಂದ್ರ ಸರ್ಕಾರ ಸಮಾಧಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಲು ಯೋಜಿಸಿತ್ತು. ಆದರೆ ಸಮಾಧಿಯನ್ನು ಸಂಘ ಕಚೇರಿಯಾಗಿ ಬಳಸುತ್ತಿರುವುದರಿಂದ ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಲು ಸಾಧ್ಯವಿಲ್ಲ ಎಂಬುದಾಗಿ 2008ರಲ್ಲಿ ಎಎಸ್ಐ ಮತ್ತು ಕೇಂದ್ರ ಸರ್ಕಾರ ತಮ್ಮ ನಿಲುವು ಬದಲಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com