ಮಧ್ಯಂತರ ಜಾಮೀನು ಕೋರಿ ತಾಹಿರ್ ಹುಸೇನ್ ಸಲ್ಲಿಸಿದ್ದ ಅರ್ಜಿ: ಸುಪ್ರೀಂ ಕೋರ್ಟ್ ಭಿನ್ನ ತೀರ್ಪು

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಪ್ರಚಾರದಲ್ಲಿ ತೊಡಗಲು ತಾಹಿರ್ ಮಧ್ಯಂತರ ಜಾಮೀನು ಕೋರಿದ್ದರು.
ಮಧ್ಯಂತರ ಜಾಮೀನು ಕೋರಿ ತಾಹಿರ್ ಹುಸೇನ್ ಸಲ್ಲಿಸಿದ್ದ ಅರ್ಜಿ: ಸುಪ್ರೀಂ ಕೋರ್ಟ್ ಭಿನ್ನ ತೀರ್ಪು
Published on

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಪಾಲಿಕೆ ಸದಸ್ಯ ತಾಹಿರ್ ಹುಸೇನ್ ಅವರಿಗೆ ಮಧ್ಯಂತರ ಜಾಮೀನು ನೀಡುವ ಸಂಬಂಧ ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಇಂದು ವ್ಯತಿರಿಕ್ತ ತೀರ್ಪು ನೀಡಿತು.

Also Read
'ಒಂಬತ್ತು ಪ್ರಕರಣಗಳಲ್ಲಿ ಜಾಮೀನು ನೀಡಿದರೂ ಅಂಥದ್ದೇ ಮತ್ತೊಂದು ಪ್ರಕರಣದಲ್ಲಿ ತಾಹಿರ್‌ಗೆ ಜಾಮೀನು ಏಕಿಲ್ಲ?' ಸುಪ್ರೀಂ

ನ್ಯಾಯಮೂರ್ತಿ ಮಿತ್ತಲ್‌ ಅವರು ಹುಸೇನ್ ಅವರ ಮನವಿ ತಿರಸ್ಕರಿಸಿದರೆ, ನ್ಯಾಯಮೂರ್ತಿ ಅಮಾನುಲ್ಲಾ ಅವರು ಹುಸೇನ್ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಅಭಿಪ್ರಾಯಪಟ್ಟರು.

"ನಮ್ಮ ತೀರ್ಪು ಭಿನ್ನವಾಗಿರುವುದರಿಂದ, ಮೂರನೇ ನ್ಯಾಯಮೂರ್ತಿಗಳ ಪೀಠ ರಚಿಸಲು ಅಥವಾ ಮೂವರು ನ್ಯಾಯಮೂರ್ತಿಗಳ ಮುಂದೆ ಪ್ರಕರಣವನ್ನು ಇರಿಸಲು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳೆದುರು ಪ್ರಕರಣವನ್ನು ಇರಿಸಲಿ” ಎಂದು ನ್ಯಾಯಾಲಯ ತಿಳಿಸಿತು.

ಜಾಮೀನು ನಿರಾಕರಿಸಿ ನೀಡಿದ ತೀರ್ಪಿನಲ್ಲಿ ನ್ಯಾ. ಮಿತ್ತಲ್‌ ಅವರು, ಮಧ್ಯಂತರ ಜಾಮೀನು ನೀಡಿದರೆ ಅದು ಸಂಕೀರ್ಣ ಸಮಸ್ಯೆಗಳಿಗೆ ಎಡೆ ಮಾಡಿಕೊಡಲಿದ್ದು ಜೈಲಿನಲ್ಲಿರುವ ಉಳಿದವರು ಸಹ ಚುನಾವಣೆಗೆ ಸ್ಪರ್ಧಿಸಲು ಆಗಾಗ್ಗೆ ಮಧ್ಯಂತರ ಜಾಮೀನು ಪಡೆಯುವಂತಾಗುತ್ತದೆ ಎಂದು ಹೇಳಿದರು.

ಹುಸೇನ್‌ ಅವರ ವಿರುದ್ಧದ ಆರೋಪಗಳು ಅದರಲ್ಲಿಯೂ ಗುಪ್ತಚರ ದಳದ ಅಧಿಕಾರಿ ಸಾವಿನ  ಪ್ರಕರಣದಲ್ಲಿ ಅವರು ಜಾಮೀನು ಕೋರಿರುವ ಬಗ್ಗೆ ನ್ಯಾ. ಮಿತ್ತಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡಿದರೆ ಅದು ದೇಶದಲ್ಲಿ ಅಂತಹ ವ್ಯಾಜ್ಯಗಳಿಗೆ ದಿಡ್ಡಿ ಬಾಗಿಲು ತೆರೆಯಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಪ್ರಕರಣದಲ್ಲಿ ಹುಸೇನ್‌ಗೆ ಜಾಮೀನು ನೀಡಿದರೂ, ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಅವರು ಇನ್ನೂ ಜೈಲಿನಲ್ಲೇ ಇರಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಮಿತ್ತಲ್‌ ತಿಳಿಸಿದರು.

ಆದರೆ ನ್ಯಾಯಮೂರ್ತಿ ಅಮಾನುಲ್ಲಾ ಅವರು ಕೆಲವು ಷರತ್ತುಗಳಿಗೆ ಒಳಪಟ್ಟಂತೆ ಮಧ್ಯಂತರ ಜಾಮೀನಿನ ಮೇಲೆ ತಾಹಿರ್ ಹುಸೇನ್ ಅವರನ್ನು ಬಿಡುಗಡೆ ಮಾಡಬಹುದು ಎಂದು ಹೇಳಿದರು.

Also Read
ದೆಹಲಿ ಗಲಭೆ ಪ್ರಕರಣ: ವಿಚಾರಣೆ ವಿಳಂಬ ಮಾಡದಂತೆ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಇತರರಿಗೆ ನ್ಯಾಯಾಲಯ ತಾಕೀತು

“ವಿಚಾರಣಾ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಏಕೆ ಕಾಯಬೇಕು?  ಅವರಿಗೆ ಜಾಮೀನು ಸಿಗುವುದಿಲ್ಲ ಎಂದು ನಾವು ಊಹಿಸಲು ಸಾಧ್ಯವಿಲ್ಲ. ನಾವು ವಿಚಾರಣಾ ನ್ಯಾಯಾಲಯಕ್ಕೆ ಕಾದು ಕುಳಿತರೆ ವಿಚಾರಣಾ ನ್ಯಾಯಾಲಯಕ್ಕೆ ಅಧೀನವಾದಂತೆ” ಎಂದು ಅವರು ಹೇಳಿದರು. ಹುಸೇನ್ ವಿರುದ್ಧದ ವಿಚಾರಣೆಯ ನಿಧಾನಗತಿಯ ಪ್ರಗತಿಯನ್ನೂ ನ್ಯಾಯಮೂರ್ತಿ ಅಮಾನುಲ್ಲಾ ಪ್ರಶ್ನಿಸಿದರು.

ಹುಸೇನ್‌ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಅಗರ್‌ವಾಲ್‌, ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ವಾದ ಮಂಡಿಸಿದರು.

Kannada Bar & Bench
kannada.barandbench.com