ಮೋಟಾರು ವಾಹನ ಅಪಘಾತ: ಕಾಲಮಿತಿಯ ಉಲ್ಲಂಘನೆ ಕಾರಣಕ್ಕೆ ಪರಿಹಾರ ಕೋರಿದ ಅರ್ಜಿಗಳನ್ನು ತಿರಸ್ಕರಿಸದಂತೆ ಸುಪ್ರೀಂ ಆದೇಶ

ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯಲ್ಲಿ ಸೇರಿಸಲಾದ ಸೆಕ್ಷನ್ 166 (3) ಅಪಘಾತಕ್ಕೊಳಗಾದವರಿಗೆ ಪರಿಹಾರವನ್ನು ಕಸಿದುಕೊಳ್ಳುವ ಕಠಿಣ ಸಮಯದ ಮಿತಿಯನ್ನು ವಿಧಿಸುವ ಮೂಲಕ ಅವರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವುದು ಅರ್ಜಿದಾರರ ವಾದ.
Motor Vehicle Accident
Motor Vehicle Accident
Published on

ರಸ್ತೆ ಅಪಘಾತದ ಪ್ರಕರಣಗಳಲ್ಲಿ ಪರಿಹಾರ ಕೋರಿ ಸಂತ್ರಸ್ತರು ಸಲ್ಲಿಸುವ ಅರ್ಜಿಗಳನ್ನು ದೇಶಾದ್ಯಂತ ಇರುವ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗಳು ಮತ್ತು ಹೈಕೋರ್ಟ್‌ಗಳು ಅರ್ಜಿಗಳನ್ನು ಸಲ್ಲಿಸುವಲ್ಲಿನ ವಿಳಂಬದ ಕಾರಣದಿಂದ ತಿರಸ್ಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಿರ್ದೇಶಿಸಿದೆ [ICICI ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ vs. ಆಯಿತಿ ನವನೀತ & ಅದರ್ಸ್.].

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ ವಿ ಅಂಜಾರಿಯಾ ಅವರ ಪೀಠವು ಮೋಟಾರು ಅಪಘಾತ ಪರಿಹಾರ ಕೋರಿ ಕ್ಲೇಮ್ ಅರ್ಜಿಗಳನ್ನು ಸಲ್ಲಿಸಲು ಆರು ತಿಂಗಳ ಕಾಲಮಿತಿಯನ್ನು ಕಡ್ಡಾಯಗೊಳಿಸುವ ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 166(3)ಅನ್ನು ತಡೆಹಿಡಿದಿದೆ.

"ಈ ಅರ್ಜಿಗಳ ವಿಚಾರಣೆಯ ಸಮಯದಲ್ಲಿ, ನ್ಯಾಯಮಂಡಳಿ ಅಥವಾ ಹೈಕೋರ್ಟ್‌ಗಳು ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 166 ರ ಉಪ-ವಿಭಾಗ (3) ರ ಅಡಿಯಲ್ಲಿ ಸೂಚಿಸಲಾದ ಗಡುವಿನ ಹಿನ್ನೆಲೆಯಲ್ಲಿ ನಿರ್ಬಂಧಿಸಲಾದ ಕಾರಣಕ್ಕೆ ಪರಿಹಾರ ಕೋರಿಕೆ ಅರ್ಜಿಗಳನ್ನು ವಜಾಗೊಳಿಸಬಾರದು" ಎಂದು ನ್ಯಾಯಾಲಯ ಆದೇಶಿಸಿತು.

ಅಪಘಾತದ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸುವ ಶಾಸಕಾಂಗ ಉದ್ದೇಶದ ಹಿನ್ನಲೆಯಲ್ಲಿ ಗಮನಿಸಿದಾಗ ಪರಿಹಾರ ಕೋರಿಕೆ ಕ್ಲೇಮ್‌ಗಳನ್ನು ಸಲ್ಲಿಸಲು ಆರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸುವುದು ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ವಿವರಿಸಿ ಎರಡು ವಾರಗಳಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

2019ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅಪಘಾತ ಪರಿಹಾರದ ಹಕ್ಕುಗಳಿಗೆ ಆರು ತಿಂಗಳ ಮಿತಿ ಅವಧಿಯನ್ನು ವಿಧಿಸಿದ 2019ರ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಮಧ್ಯಂತರ ಆದೇಶವನ್ನು ನೀಡಿದೆ.

2019ರ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯಲ್ಲಿ ಸೇರಿಸಲಾದ ಸೆಕ್ಷನ್ 166 (3) ಅಪಘಾತಕ್ಕೊಳಗಾದವರಿಗೆ ಪರಿಹಾರವನ್ನು ಕಸಿದುಕೊಳ್ಳುವ ಅನಿಯಂತ್ರಿತ ಮತ್ತು ಕಠಿಣ ಸಮಯದ ಮಿತಿಯನ್ನು ವಿಧಿಸುವ ಮೂಲಕ ಅವರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿದೆ.

ರಸ್ತೆ ಬಳಕೆದಾರರನ್ನು ರಕ್ಷಿಸಲು ಜಾರಿಗೆ ತಂದ ಕಲ್ಯಾಣಕಾರಿ ಕಾನೂನಿನ ಉದ್ದೇಶವನ್ನೇ ಇದು ಸೋಲಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಹಿಂದೆ ಕಾನೂನಿನಲ್ಲಿ ಅಂತಹ ಮಿತಿ ಅವಧಿ ಇರಲಿಲ್ಲ ಎಂದು ಸಹ ಅರ್ಜಿದಾರರು ಗಮನಸೆಳೆದಿದ್ದಾರೆ. 1939ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ, ಅಪಘಾತದ ಆರು ತಿಂಗಳೊಳಗೆ ಸಂತ್ರಸ್ತರು ಪರಿಹಾರ ಕೋರಿ ಹಕ್ಕು ಸಲ್ಲಿಸಬಹುದು ಮತ್ತು ನ್ಯಾಯಮಂಡಳಿಗಳು ಒಂದು ವರ್ಷಕ್ಕಿಂತ ಹೆಚ್ಚಿನ ಕಾರಣಕ್ಕಾಗಿ ವಿಳಂಬವನ್ನು ಕ್ಷಮಿಸಬಹುದು ಎನ್ನಲಾಗಿತ್ತು. 1994ರ ತಿದ್ದುಪಡಿಯವರೆಗೆ ಈ ಸಡಿಲಿಕೆ ಮುಂದುವರೆದಿತ್ತು, ಆದರೆ 94ರ ತಿದ್ದುಪಡಿಯು ಸೆಕ್ಷನ್ 166ರ ಕಾಲಮಿತಿಯ ಷರತ್ತನ್ನು ತೆಗೆದುಹಾಕಿತು. ಇದರಿಂದಾಗಿ ಸಂತ್ರಸ್ತರು ಕಾಲಮಿತಿಯ ತಡೆಯಿಲ್ಲದೆ ಯಾವಾಗ ಬೇಕಾದರೂ ಪರಿಹಾರ ಕೋರಿಕೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.

ಆದಾಗ್ಯೂ, 2019 ರಲ್ಲಿ ಮಾಡಲಾದ ಮತ್ತೊಂದು ತಿದ್ದುಪಡಿಯು ಏಪ್ರಿಲ್ 2022 ರಿಂದ ಜಾರಿಗೆ ಬರುವಂತೆ ಸೆಕ್ಷನ್‌ 166(3)ರ ನಿರ್ಬಂಧದ ಮೂಲಕ ಕಟ್ಟುನಿಟ್ಟಾದ ಕಾಲಮಿತಿಯ ನಿರ್ಬಂಧವನ್ನು ಪುನಃ ಪರಿಚಯಿಸುವ ಮೂಲಕ ಆ ನಿಲುವನ್ನು ಬದಲಾಯಿಸಿತು. ಈ ಬದಲಾವಣೆಯು "ನ್ಯಾಯವನ್ನು ಪಡೆಯುವಲ್ಲಿ ಅಸಮಂಜಸ ನಿರ್ಬಂಧವನ್ನು ವಿಧಿಸುವ ಮೂಲಕ ರಸ್ತೆ ಸಂತ್ರಸ್ತರ ಹಕ್ಕುಗಳನ್ನು ಮೊಟಕುಗೊಳಿಸಿದೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಸ್ತುತ ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ಆದೇಶವು ಸೆಕ್ಷನ್ 166(3) ರ ಸಾಂವಿಧಾನಿಕ ಸಿಂಧುತ್ವದ ವಿಸ್ತೃತ ವಿಷಯವು ಇತ್ಯರ್ಥವಾಗುವವರೆಗೆ ಕಾಲಮಿತಿಯ ಗಡುವನ್ನು ಉಲ್ಲಂಘಿಸಿ ಸಲ್ಲಿಸಲಾದ ಪರಿಹಾರ ಕೋರಿಕೆಯ ಹಕ್ಕುಗಳನ್ನು ತಿರಸ್ಕರಿಸದಂತೆ ರಕ್ಷಿಸುತ್ತದೆ.

2019ರ ತಿದ್ದುಪಡಿಯನ್ನು ಪ್ರಶ್ನಿಸುವ ಇದೇ ರೀತಿಯ ಅರ್ಜಿಗಳು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿದ್ದು, ಈ ವಿಷಯವನ್ನು ತ್ವರಿತವಾಗಿ ನಿರ್ಧರಿಸುವ ಅಗತ್ಯವಿದೆ ಎಂದು ಇದೇ ವೇಳೆ ನ್ಯಾಯಪೀಠವು ಹೇಳಿತು.

ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 25ಕ್ಕೆ ನಡೆಯಲಿದೆ.

Kannada Bar & Bench
kannada.barandbench.com