ಕೋವಿಡ್‌: ಸಾವಿನ ಭಯ ಕಾಡಿದರೆ ನಿರೀಕ್ಷಣಾ ಜಾಮೀನು ನೀಡಬಹುದು ಎಂಬ ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಕೋವಿಡ್‌ ನಿಭಾಯಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಬಂಧಿತ ವ್ಯಕ್ತಿಗೆ ಕೋವಿಡ್‌ ತಗುಲುವ ಸಾಧ್ಯತೆ ಇದೆ ಎಂದಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಸರ್ಕಾರದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.
ಕೋವಿಡ್‌: ಸಾವಿನ ಭಯ ಕಾಡಿದರೆ ನಿರೀಕ್ಷಣಾ ಜಾಮೀನು ನೀಡಬಹುದು ಎಂಬ ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಕೋವಿಡ್‌ನಿಂದ ಸಾವನ್ನಪ್ಪಬಹುದು ಎಂಬ ಭಯದ ಹಿನ್ನೆಲೆಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಆದೇಶಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ (ಉತ್ತರ ಪ್ರದೇಶ ರಾಜ್ಯ ವರ್ಸಸ್‌ ಪ್ರತೀಕ್‌ ಜೈನ್).

‌ಉತ್ತರ ಪ್ರದೇಶವು ಕೋವಿಡ್‌ ತಡೆಯಲು ಅಗತ್ಯವಾದ ಸಿದ್ಧತೆ ಮತ್ತು ಸಂಪನ್ಮೂಲವನ್ನು ಹೊಂದಿಲ್ಲವಾದ್ದರಿಂದ ಬಂಧಿತ ವ್ಯಕ್ತಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂದಿದ್ದ ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಕಾನೂನಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಅಭಿಪ್ರಾಯಕ್ಕೆ ಮಾತ್ರ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಆರೋಪಿಗೆ ನೀಡಿರುವ ಜಾಮೀನಿಗೆ ತಡೆ ನೀಡಿಲ್ಲ. “ಬಂಧನ ಪೂರ್ವ ಮತ್ತು ಆನಂತರ ಕೊರೊನಾ ವೈರಸ್‌ ತಗುಲುವ ಸಾಧ್ಯತೆಯ ಆತಂಕವನ್ನು ಅರೋಪಿ ವ್ಯಕ್ತಪಡಿಸಿದರೆ ಮತ್ತು ಪೊಲೀಸರು, ನ್ಯಾಯಾಲಯ ಮತ್ತು ಜೈಲು ಸಿಬ್ಬಂದಿ ಅಥವಾ ಅವರು ಆರೋಪಿಯ ಸಂಪರ್ಕಕ್ಕೆ ಬರುವ ಮೂಲಕ ವೈರಸ್‌ ವ್ಯಾಪಿಸುವ ಸಾಧ್ಯತೆಯನ್ನು ಆಧರಿಸಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು” ಎಂದು ಹೈಕೋರ್ಟ್‌ ಆದೇಶಿಸಿತ್ತು.

Also Read
ಅಲಾಹಾಬಾದ್‌ ಹೈಕೋರ್ಟ್‌ ಆದೇಶದ ಹೊರತಾಗಿಯೂ ಲಾಕ್‌ಡೌನ್‌ ಜಾರಿಗೊಳಿಸಲಾಗದು ಎಂದ ಉತ್ತರ ಪ್ರದೇಶ ಸರ್ಕಾರ

“ಅಸಾಮಾನ್ಯ ಸಂದರ್ಭಗಳಲ್ಲಿ ಅಸಾಮಾನ್ಯ ಪರಿಹಾರದ ಅಗತ್ಯವಿರುತ್ತದೆ. ಕಾನೂನನ್ನೂ ಹತಾಶೆಯ ಸಮಯಕ್ಕೆ ಅನುಗುಣವಾಗಿ ವ್ಯಾಖ್ಯಾನಿಸಬೇಕು" ಎಂದು ಹೈಕೋರ್ಟ್‌ ಹೇಳಿತ್ತು.

“ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯನ್ನು ಅಮಾನತಿನಲ್ಲಿಡಬೇಕು. ಆರೋಪಿಯು ಅಪರಾಧ ನಡೆಸಿಯೂ ಶೀಘ್ರದಲ್ಲಿ ಮುಗಿಯುವ ಯಾವುದೇ ಲಕ್ಷಣ ತೋರದ ಸಾಂಕ್ರಾಮಿಕತೆಯ ನೆಪದಲ್ಲಿ ನಿರ್ಭಯದಿಂದ ಇರಬಹುದಾದ ಅವಕಾಶ ದೊರಕುತ್ತದೆ ಎಂಬುದನ್ನು ಹೈಕೋರ್ಟ್‌ ಆದೇಶ ಸೂಚಿಸುತ್ತದೆ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಉಲ್ಲೇಖಿಸಿತ್ತು.

ಮುಂದುವರೆದು, "ಆರೋಪಿಗಳಿಗೆ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕುಗಳ ಆಧಾರದಲ್ಲಿ ಜಾಮೀನು ನೀಡುವುದು ಆರೋಪಿಯ ಹಕ್ಕುಗಳನ್ನು ಅಧಿಕಗೊಳಿಸಿ ತಕ್ಕಡಿಯನ್ನು ಅವರೆಡೆಗೆ ಬಾಗಿಸುವ ಮೂಲಕ ಅಂತಹ ಆರೋಪಿಗಳಿಂದ ತೊಂದರೆಗೊಳಗಾಗಿ ನ್ಯಾಯವನ್ನು ಕೋರಿರುವ ಸಂತ್ರಸ್ತರ ಒಟ್ಟು ಹಕ್ಕುಗಳನ್ನು ಮರೆಮಾಚುತ್ತದೆ" ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com