
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಕೊಠಡಿ ಹೊರಗೆ ಪಡಸಾಲೆ ಕಾಮಗಾರಿ ನಡೆಸುವಂತೆ ಉಚ್ಚ ನ್ಯಾಯಾಲಯ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಿತ್ತಿದೆ.
ಹೈಕೋರ್ಟ್ ಕಟ್ಟಡದ ಭಾಗವಾಗಿರುವ ಚಂಡೀಗಢ ಕ್ಯಾಪಿಟಲ್ ಸಂಕೀರ್ಣ ಯುನೆಸ್ಕೋ ಪಾರಂಪರಿಕ ತಾಣವಾಗಿದ್ದು ಯಾವುದೇ ಹೆಚ್ಚುವರಿ ಕಾಮಗಾರಿಯಿಂದ ಅದರ ಸ್ವರೂಪವನ್ನು ಬದಲಾಗುತ್ತದೆ ಎಂದು ಚಂಡೀಗಢ ಆಡಳಿತ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಆದೇಶ ನೀಡಿತು.
ಅಂತೆಯೇ ತನ್ನ ಆದೇಶ ಪಾಲಿಸದಿದ್ದಕ್ಕಾಗಿ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಮುಖ್ಯ ಇಂಜಿನಿಯರ್‌ಗೆ ಹೈಕೋರ್ಟ್‌ನೀಡಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೂ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಜೊತೆಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಹಾಗೂ ಉಳಿದ ಪ್ರತಿವಾದಿಗಳಿಗೆ ಅದು ನೋಟಿಸ್ ಜಾರಿ ಮಾಡಿದೆ.
ಎರಡರಿಂದ ನಾಲ್ಕು ವಾರಗಳಲ್ಲಿ ಪಡಸಾಲೆ ನಿರ್ಮಾಣ ಪೂರ್ಣಗೊಳಿಸುವಂತೆ ಕೇಂದ್ರಾಡಳಿತ ಪ್ರದೇಶ ಸರ್ಕಾರಕ್ಕೆ ಕಳೆದ ನವೆಂಬರ್ 29ರಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಕೇಂದ್ರಾಡಳಿತ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಟ್ಟಡದ ಅಂತರರಾಷ್ಟ್ರೀಯ ಪಾರಂಪರಿಕ ಸ್ಥಾನಮಾನದ ಬಗ್ಗೆ ಅಧಿಕಾರಿಗಳಿಗೆ ಆತಂಕ ಇದೆ. ಪಂಜಾಬ್ ಮತ್ತು ಹರಿಯಾಣದ ವಕೀಲ ಸಮುದಾಯಗಳಿಗೆ ನಿರ್ಮಾಣ ಅಗತ್ಯವಿಲ್ಲ. ಇದರಿಂದ ಪಾರಂಪರಿಕ ಕಟ್ಟಡದ ಸ್ವರೂಪ ಬದಲಾಗುತ್ತದೆ. ಪಡಸಾಲೆ ನಿರ್ಮಾಣ ಪ್ರತಿಷ್ಠೆಯ ವಿಚಾರವಾಗಬಾರದು. ಕಟ್ಟಡಕ್ಕೆ ಯುನೆಸ್ಕೊ ವಿಶ್ವ ಪರಂಪರೆಯ ತಾಣ ಎಂಬ ಸ್ಥಾನಮಾನ ದೊರೆತಿದೆ ಎಂದು ವಾದಿಸಿದರು.
ಹೈಕೋರ್ಟ್ ಕಟ್ಟಡವನ್ನು ಫ್ರೆಂಚ್ ವಾಸ್ತುಶಿಲ್ಪಿ ಲೆ ಕಾರ್ಬ್ಯೂಸಿಯರ್ ವಿನ್ಯಾಸಗೊಳಿಸಿದ್ದಾರೆ. ಕಾಂಕ್ರಿಟ್ ನಿರ್ಮಿತಿಗಳಿಗೇ ಹೊಸ ಮಜಲನ್ನು ಹಾಕಿಕೊಟ್ಟ ಈ ವಿಶಿಷ್ಟ ಕಟ್ಟಡದ ನಿರ್ಮಾಣ ಕಾರ್ಯವನ್ನು ಕೆ ಸಿ ಲಿಯಾ ಅವರ ಮೇಲ್ವಿಚಾರಣೆಯಲ್ಲಿ ಬಾಂಬೆಯ ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್ ಕೈಗೊಂಡಿತು. 40 ಐಷಾರಾಮಿ ಸುಸಜ್ಜಿತ ನ್ಯಾಯಾಲಯದ ಕೊಠಡಿಗಳು, ನ್ಯಾಯಮೂರ್ತಿಗಳ ಗ್ರಂಥಾಲಯ, ಆಸ್ಪತ್ರೆ ಹಾಗೂ ಉತ್ತಮ ಕ್ಯಾಂಟೀನ್ ಹೊಂದಿರುವ ಇದು ದೇಶದ ವಿಶಾಲ ಮತ್ತು ಅತ್ಯಂತ ಸುಂದರವಾದ ಹೈಕೋರ್ಟ್‌ಗಳಲ್ಲಿ ಒಂದಾಗಿದೆ. ಕಟ್ಟಡದ ಸ್ಥಳ ಹಿಮಾಲಯದ ಮಡಲಿನಲ್ಲಿದ್ದು ನಗರದ ಮಿತಿಗಳಾಚೆಗೂ ಪಕ್ಕದ ಪಂಜಾಬ್ ವಿಧಾನ ಸೌಧ ಹಾಗೂ ಸುಖ್ನಾ ಕೆರೆ ಅದರ ಅಂದವನ್ನು ಹೆಚ್ಚಿಸಿವೆ ಎಂದು ಪಂಜಾಬ್ ಹೈಕೋರ್ಟ್‌ನ ಜಾಲತಾಣ ಕಟ್ಟಡದ ಚರಿತ್ರೆಯನ್ನುಅದರ ಸೌಂದರ್ಯವನ್ನು ಬಣ್ಣಿಸಿದೆ.