ನೌಕರರ ಕಾಯಮಾತಿ ಪ್ರಕರಣ: ಕರ್ನಾಟಕ ಸಿಎಸ್ ಮತ್ತಿತರರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸುಪ್ರೀಂ ತಡೆ

ಹೈಕೋರ್ಟ್ ಆದೇಶಗಳನ್ನು ಸರ್ಕಾರ ಹೇಗೆ ಪಾಲಿಸಿದೆ ಎಂಬುದನ್ನು ವಿವರಿಸುವ ಹೆಚ್ಚುವರಿ ದಾಖಲೆ ಮತ್ತು ಅಫಿಡವಿಟ್ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ನೌಕರರ ಕಾಯಮಾತಿ ಪ್ರಕರಣ: ಕರ್ನಾಟಕ ಸಿಎಸ್ ಮತ್ತಿತರರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸುಪ್ರೀಂ ತಡೆ

Supreme Court

ಜಿಲ್ಲಾ ಪಂಚಾಯತ್ ಮತ್ತು ಇತರ ಇಲಾಖೆಗಳಲ್ಲಿನ ನೌಕರರನ್ನು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯದ ಉನ್ನತ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಆರಂಭಿಸಿದ್ದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ [ಕರ್ನಾಟಕ ಸರ್ಕಾರ ಮತ್ತು ಸುರೇಶ್ ನಾಯ್ಕ್ ಮತ್ತಿತರರ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹಿಂದಿನ ಆದೇಶಗಳನ್ನು ಪಾಲಿಸದೇ ಇದ್ದುದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ನೋಟಿಸ್‌ ನೀಡಿದೆ.

"ನೋಟಿಸ್ ಜಾರಿ ಮಾಡಿ. ಈ ಮಧ್ಯೆ, ಹೈಕೋರ್ಟ್‌ನಲ್ಲಿ ಬಾಕಿ ಇರುವ ನ್ಯಾಯಾಂಗ ನಿಂದನೆ ಅರ್ಜಿಗಳ ಮುಂದಿನ ವಿಚಾರಣೆಗೆ ತಡೆ ನೀಡಲಾಗುವುದು" ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಪ್ರಕರಣಗಳಲ್ಲಿ ಅಂತಿಮ ಹಂತಕ್ಕೆ ಬಂದಿರುವ ಹೈಕೋರ್ಟ್ ಆದೇಶಗಳನ್ನು ಈಗಾಗಲೇ ಹೇಗೆ ಪಾಲಿಸಲಾಗಿದೆ ಎಂದು ವಿವರಿಸುವ ಹೆಚ್ಚುವರಿ ದಾಖಲೆಗಳು ಮತ್ತು ಅಫಿಡವಿಟ್ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

Also Read
ಪ. ಬಂಗಾಳದ ಮಾಜಿ ಸಿಎಸ್ ಪ್ರಕರಣ: ಸಿಎಟಿ ವಿರುದ್ಧದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಅನುಪಾಲನಾ ಅಫಿಡವಿಟ್ ಅನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತಿತರ ಅಧಿಕಾರಿಗಳ ವಿರುದ್ಧ ಆರೋಪ ನಿಗದಿಪಡಿಸುವುದಕ್ಕಾಗಿ ಪ್ರಕರಣವನ್ನು ಮುಂದೂಡಿತ್ತು.

ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದ ಆದೇಶಗಳಿಗೆ ಒಳಪಡದೆ ಇರುವ ಮಂಜೂರಾದ ಹುದ್ದೆಗಳಲ್ಲಿ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದವರನ್ನು ಕಾಯಂಗೊಳಿಸಬೇಕು ಎಂಬ ಕರ್ನಾಟಕ ಸರ್ಕಾರ ಮತ್ತು ಉಮಾದೇವಿ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ್ದ ಆದೇಶವನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿಲ್ಲ ಎಂಬ ಆಧಾರದಲ್ಲಿ ಹೈಕೋರ್ಟ್‌ ಈ ಆದೇಶ ನೀಡಿತ್ತು.

“ಸರ್ಕಾರ ಕೆಲವು ವೈಯಕ್ತಿಕ ಪ್ರತಿವಾದಿಗಳ ಸೇವೆಗಳನ್ನು ಕ್ರಮಬದ್ಧಗೊಳಿಸಿದ್ದರೂ ಅದೇ ಸವಲತ್ತನ್ನು ಇತರ ಪ್ರಕರಣಗಳಲ್ಲಿ ದಿನಗೂಲಿ ಕಾರ್ಮಿಕರಿಗೆ ವಿಸ್ತರಿಸಲಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ 74 ಜನರಿಗೆ ಸವಲತ್ತು ಒದಗಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿರದ ಮತ್ತು ಸರ್ಕಾರದಿಂದ ಕಾಯಮಾತಿ ವಿನಂತಿ ತಿರಸ್ಕೃತರಾದವರಿಗೆ ಸವಲತ್ತು ಒದಗಿಸಿರುವ ಬಗ್ಗೆ ಯಾವುದೇ ಸಮರ್ಥನೆ ಅದರಲ್ಲಿ ಇಲ್ಲ.

“ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ಸರ್ಕಾರದ ನಿರ್ದಿಷ್ಟ ಆದೇಶಗಳಿಂದಾಗಿ ತಿರಸ್ಕೃತವಾದ ದಿನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸಲು ಆದೇಶ ಹೊರಡಿಸಿ ಪ್ರಾಯೋಗಿಕವಾಗಿ ತನ್ನ ವ್ಯಾಪ್ತಿ ಮೀರಲಾಗದು” ಎಂದು ಮನವಿ ತಿಳಿಸಿದೆ.

ನ್ಯಾಯಾಂಗ ನಿಂದನೆ ಅರ್ಜಿ ಆಲಿಸುವ ನ್ಯಾಯಾಲಯವು ಆ ದಿನಗೂಲಿ ನೌಕರರ ಸೇವೆಗಳನ್ನು ಕಾಯಂಗೊಳಿಸಲು ಯಾವುದೇ ಸಕಾರಾತ್ಮಕ ನಿರ್ದೇಶನವಿದೆಯೇ ಎಂದು ಪರಿಗಣಿಸುವ ಅಗತ್ಯವಿದೆ ಎಂದು ಅರ್ಜಿ ಹೇಳಿದೆ.

[ಆದೇಶವನ್ನು ಇಲ್ಲಿಓದಿ]

Attachment
PDF
State_of_Karnataka_vs_S Naik.pdf
Preview

Related Stories

No stories found.
Kannada Bar & Bench
kannada.barandbench.com