ಪ. ಬಂಗಾಳದ ಮಾಜಿ ಸಿಎಸ್ ಪ್ರಕರಣ: ಸಿಎಟಿ ವಿರುದ್ಧದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್

ಹೈಕೋರ್ಟ್‌ನಲ್ಲಿ (ದೆಹಲಿ ಹೈಕೋರ್ಟ್) ಸಿಎಟಿ ತೀರ್ಪನ್ನು ಪ್ರಶ್ನಿಸಲು ಬಂಡ್ಯೋಪಾಧ್ಯಾಯ ಅವರಿಗೆ ಸ್ವಾತಂತ್ರ್ಯ ಇದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿಳಿಸಿತು.
ಪ. ಬಂಗಾಳದ ಮಾಜಿ ಸಿಎಸ್ ಪ್ರಕರಣ: ಸಿಎಟಿ ವಿರುದ್ಧದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಾಪನ್‌ ಬಂಡ್ಯೋಪಾಧ್ಯಾಯ ಅವರು ದಾಖಲಿಸಿದ್ದ ಅರ್ಜಿಯನ್ನು ಕೇಂದ್ರ ಆಡಳಿತ ನ್ಯಾಯಮಂಡಳಿಯು (ಸಿಎಟಿ) ಕಲ್ಕತ್ತಾದಿಂದ ದೆಹಲಿಯ ಪ್ರಧಾನ ಪೀಠಕ್ಕೆ ವರ್ಗಾಯಿಸಿದ್ದನ್ನು ರದ್ದುಪಡಿಸಿದ್ದ ಕಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ಬದಿಗೆ ಸರಿಸಿದೆ [ಭಾರತ ಸರ್ಕಾರ ವರ್ಸಸ್‌ ಅಲಾಪನ್‌ ಬಂಡ್ಯೋಪಾಧ್ಯಾಯ].

ಬಂಡ್ಯೋಪಾಧ್ಯಾಯ ಅವರ ಅರ್ಜಿಯನ್ನು ಆಲಿಸಲು ಕಲ್ಕತ್ತಾ ಹೈಕೋರ್ಟ್‌ಗೆ ನ್ಯಾಯವ್ಯಾಪ್ತಿ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿಳಿಸಿದೆ. ಬದಲಿಗೆ ದೆಹಲಿ ಹೈಕೋರ್ಟ್‌ನಲ್ಲಿ ಸಿಎಟಿ ತೀರ್ಪು ಪ್ರಶ್ನಿಸಲು ಬಂಡ್ಯೋಪಾಧ್ಯಾಯ ಅವರಿಗೆ ಸ್ವಾತಂತ್ರ್ಯ ಇದೆ ಎಂದು ನ್ಯಾಯಾಲಯ ತಿಳಿಸಿದೆ. ಬಂಡ್ಯೋಪಾಧ್ಯಾಯ ಅವರ ಅರ್ಜಿಯನ್ನು ದೆಹಲಿಯ ಸಿಎಟಿ ಪ್ರಧಾನ ಪೀಠ ವಿಚಾರಣೆ ನಡೆಸಬಹುದು ಎಂಬುದು ತೀರ್ಪಿನ ಸಾರವಾಗಿದೆ.

ಬಂಡ್ಯೋಪಾಧ್ಯಾಯ ಅವರ ಪ್ರಕರಣವನ್ನು ವರ್ಗಾಯಿಸುವ ಪ್ರಯತ್ನದಲ್ಲಿ ಸಿಎಟಿ ಕೇಂದ್ರ ಸರ್ಕಾರದ ಪರವಾಗಿ ನಡೆದುಕೊಂಡಿದೆ ಎಂದು ಕಲ್ಕತ್ತಾ ಹೈಕೋರ್ಟ್ ಅಕ್ಟೋಬರ್ 29, 2021 ರಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

Also Read
[ಬಂಗಾಳ ಮುಖ್ಯ ಕಾರ್ಯದರ್ಶಿ ವರ್ಗಾವಣೆ] ಕೇಂದ್ರದಿಂದ ಕೇವಿಯಟ್‌; ನಾವೂ ಕೋರ್ಟ್‌ ಮೊರೆ ಹೋಗಬೇಕಾಗಬಹುದು ಎಂದ ಮಮತಾ

ಕಳೆದ ವರ್ಷ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಯಾಸ್‌ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಕುರಿತಾದ ಪರಿಶೀಲನಾ ಸಭೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾದ ದಿನವೇ ಮುಖ್ಯ ಕಾರ್ಯದರ್ಶಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು. ಅದಕ್ಕೂ ನಾಲ್ಕು ದಿನಗಳ ಹಿಂದಷ್ಟೇ ಅವರ ಸೇವಾವಧಿಯನ್ನು ಮೂರು ತಿಂಗಳ ಕಾಲ ಕೇಂದ್ರ ಸರ್ಕಾರ ವಿಸ್ತರಿಸಿತ್ತು.

ನಂತರ ಬಂಡ್ಯೋಪಾಧ್ಯಾಯ ವಿರುದ್ಧ ಕೇಂದ್ರ ತನಿಖೆ ಆರಂಭಿಸಿತ್ತು. ತನಿಖೆ ನಿರ್ಧಾರ ಪ್ರಶ್ನಿಸಿ ಬಂಡ್ಯೋಪಾಧ್ಯಾಯ ಸಿಎಟಿ ಕೊಲ್ಕತ್ತಾ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಕೇಂದ್ರವು ಅರ್ಜಿಯನ್ನು ಪ್ರಧಾನ ಪೀಠಕ್ಕೆ ವರ್ಗಾಯಿಸುವಂತೆ ಕೋರಿತ್ತು. ಅಕ್ಟೋಬರ್ 22 ರಂದು, ವರ್ಗಾವಣೆ ಅರ್ಜಿಗೆ ಅನುವು ಮಾಡಿದ ಪ್ರಧಾನ ಪೀಠ ಇದನ್ನು ಸಿಎಟಿಯ ಕಲ್ಕತ್ತಾ ಪೀಠಕ್ಕೆ ತಿಳಿಸುವಂತೆ ತನ್ನ ರೆಜಿಸ್ಟ್ರಿಗೆ ಸೂಚಿಸಿತ್ತು. ಆಗ ಬಂಡೋಪಾಧ್ಯಾಯ ಅವರು ವರ್ಗಾವಣೆ ಆದೇಶವು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಕಾರ್ಯವಿಧಾನ) ನಿಯಮಗಳು, 1987 ರ ನಿಯಮ 6 (2) ರ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ಸಬ್ಯಸಾಚಿ ಭಟ್ಟಾಚಾರ್ಯ ಮತ್ತು ರವೀಂದ್ರನಾಥ್ ಸಮಂತಾ ಅವರಿದ್ದ ಹೈಕೋರ್ಟ್ ಪೀಠ ಪ್ರಕರಣವನ್ನು ನವದೆಹಲಿಯ ಸಿಎಟಿಯ ಪ್ರಧಾನ ಪೀಠಕ್ಕೆ ವರ್ಗಾಯಿಸುವ ಕೇಂದ್ರ ಸರ್ಕಾರದ ಯತ್ನ ದುರುದ್ದೇಶಪೂರಿತವಾಗಿದೆ ಎಂದು ಅದನ್ನು ರದ್ದುಗೊಳಿಸಿತ್ತು.

Related Stories

No stories found.
Kannada Bar & Bench
kannada.barandbench.com