ಬಿಜ್‌ವಾಸನ್ ರೈಲು ನಿಲ್ದಾಣ ವಿಸ್ತರಣೆ: 25 ಸಾವಿರ ಮರಗಳ ಹನನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಮರ ಕಡಿಯುವಿಕೆ ನಿಷೇಧಿಸಲು ನಿರಾಕರಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಫೆಬ್ರುವರಿ 13ರಂದು ನೀಡಿದ್ದ ಆದೇಶದ ವಿರುದ್ದ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.
Supreme Court of India, Trees
Supreme Court of India, Trees
Published on

ದೆಹಲಿಯ ಬಿಜ್‌ವಾಸನ್‌ ರೈಲು ನಿಲ್ದಾಣ ವಿಸ್ತರಿಸುವ ಉದ್ದೇಶಕ್ಕಾಗಿ ಶಹಾಬಾದ್ ಮೊಹಮ್ಮದ್‌ಪುರದ ಸುಮಾರು 25,000 ಮರಗಳನ್ನು ಕಡಿಯುವುದಕ್ಕೆ  ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಬಂಧ ವಿಧಿಸಿದೆ [ನವೀನ್ ಸೋಲಂಕಿ ಇನ್ನಿತರರು ಮತ್ತು ರೈಲು ಭೂಮಿ ಅಭಿವೃದ್ಧಿ ಪ್ರಾಧಿಕಾರ ಮತ್ತಿತರರ ನಡುವಣ ಪ್ರಕರಣ].

ಮರ ಕಡಿಯುವಿಕೆ ನಿಷೇಧಿಸಲು ನಿರಾಕರಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಫೆಬ್ರುವರಿ 13ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಭಯ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಈ ಆದೇಶ ನೀಡಿದೆ. ಯಾವುದೇ ನಿರ್ಮಾಣ ಕೈಗೊಳ್ಳದಂತೆಯೂ ಅದು ನಿರ್ಬಂಧಿಸಿದೆ.

Also Read
ದಾಲ್ ಸರೋವರದಲ್ಲಿ ಮಾಲಿನ್ಯ ತಡೆ ಹಾಗೂ ಹೌಸ್‌ಬೋಟ್‌ಗಳಿಗೆ ಲಗಾಮು: ಸಮಿತಿ ರಚಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ಅರಣ್ಯ ಸಂರಕ್ಷಣಾ ಕಾಯಿದೆ- 1980ರ ಪ್ರಕಾರ 120 ಎಕರೆ ಹಸಿರು ಹೊದಿಕೆ ಇರುವ ಪ್ರದೇಶ "ಅರಣ್ಯ ಭೂಮಿ" ಎಂದು ಅರ್ಹತೆ ಪಡೆಯುವುದಿಲ್ಲ ಎಂದು ಹಸಿರು ನ್ಯಾಯಮಂಡಳಿ ಅಭಿಪ್ರಾಯಪಟ್ಟಿತ್ತು.

 ವಿಸ್ತರಣಾ ಯೋಜನೆಯ ಪ್ರದೇಶ ಡೀಮ್ಡ್‌ ಅರಣ್ಯ ಎಂದು ಮೇಲ್ಮನವಿದಾರರು ವಾದಿಸಿದ್ದರು. ಅಲ್ಲದೆ ಟಿ ಎನ್‌ ಗೋದಾವರ್ಮನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 1996ರಲ್ಲಿ ನೀಡಿರುವ ತೀರ್ಪಿನಂತೆ ಡೀಮ್ಡ್‌ ಅರಣ್ಯಗಳಿಗೂ ಸಹ ಅರಣ್ಯಗಳಿಗೆ ಇರುವ ಎಲ್ಲಾ ರಕ್ಷಣೆಯೂ ಇರುತ್ತದೆ ಎಂದಿದ್ದರು.

Also Read
ಪತಂಜಲಿ ಹಲ್ಲಿನ ಪುಡಿಯಲ್ಲಿನ ಪ್ರಾಣಿಜನ್ಯ ಅಂಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ: ರಾಮದೇವ್‌ಗೆ ಹೊಸ ಸಂಕಷ್ಟ

ಯೋಜನಾ ಪ್ರದೇಶ ದೆಹಲಿ ವಿಮಾನ ನಿಲ್ದಾಣದ ಪಕ್ಕದಲ್ಲಿ ಇದ್ದು ಅದು ಇಂಗಾಲದ ಡೈ ಆಕ್ಸೈಡ್‌ಅನ್ನು ಶೋಧಿಸುವ ಪ್ರಾಥಮಿಕ ಸೋಸುಕದ (ಫಿಲ್ಟರ್‌) ರೀತಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ನಗರದ ಇತರೆ ಭಾಗಗಳಿಗೆ ಹೋಲಿಸಿದರೆ ನೈಋತ್ಯ ದೆಹಲಿಯ ನಿವಾಸಿಗಳಿಗೆ ಹಸಿರು ಹೊದಿಕೆ ಪ್ರಮಾಣ ಕಡಿಮೆ ಇರುವುದರಿಂದ ಇದು ಈ ಭಾಗದ ಶ್ವಾಸಕೋಶದಂತೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ವಾದ ಮಂಡಿಸಲಾಗಿತ್ತು.

ರೈಲು ಭೂಮಿ ಅಭಿವೃದ್ಧಿ ಪ್ರಾಧಿಕಾರ, ದೆಹಲಿ ಅರಣ್ಯ ಇಲಾಖೆ ಹಾಗೂ ಯೋಜನೆ ಕಾರ್ಯಗತಗೊಳಿಸುವ ಕಂಪನಿ ಈ ಸಂಬಂಧ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿರುವ ನ್ಯಾಯಾಲಯ ಅಕ್ಟೋಬರ್ 21ಕ್ಕೆ ಪ್ರಕರಣ ಮುಂದೂಡಿದೆ. ಅಲ್ಲದೆ ಮಧ್ಯಂತರ ಪರಿಹಾರ ಸಂಬಂಧವೂ ಅದು ನೋಟಿಸ್‌ ಜಾರಿಗೊಳಿಸಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತವರ ತಂಡ ವಾದ ಮಂಡಿಸಿತು.

Kannada Bar & Bench
kannada.barandbench.com