ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆ ಅನೂರ್ಜಿತಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವಾಗಿ ಚುನಾಯಿತವಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಡಿ ಸಿ ಗೌರಿಶಂಕರ್ ಸ್ವಾಮಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ [ಡಿ ಸಿ ಗೌರಿಶಂಕರ್ ಸ್ವಾಮಿ ವರ್ಸಸ್ ಬಿ ಸುರೇಶ್ ಗೌಡ].
ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೆ ತಡೆ ಕೋರಿ ಗೌರಿಶಂಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಕೆ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಹೈಕೋರ್ಟ್ ಆದೇಶವು ಶಾಸಕರಾಗಿ ಗೌರಿ ಶಂಕರ್ ಅವರಿಗೆ ನೀಡಲಾಗಿರುವ ಸವಲತ್ತು, ಭತ್ಯೆಗಳು ಮತ್ತು ವೇತನಕ್ಕೆ ಯಾವುದೇ ಅಡ್ಡಿಯಾಗದು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇದರ ಜೊತೆಗೆ ಗೌರಿಶಂಕರ್ ಅವರು ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದರೆ ನ್ಯಾಯಾಲಯದ ಅನುಮತಿ ಪಡೆಯದೇ ವಿಶ್ವಾಸಮತದಲ್ಲಿ ಹಕ್ಕು ಚಲಾವಣೆಯನ್ನು ಮಾಡುವುದಾಗಲಿ ಮತ್ತು ಯಾವುದೇ ಸಮಿತಿಯ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವುದನ್ನಾಗಲಿ ಮಾಡುವಂತಿಲ್ಲ ಎಂದು ಪೀಠವು ಹೇಳಿದೆ.
ಗೌರಿ ಶಂಕರ್ ಅವರು ಎಸಗಿದ್ದಾರೆ ಎಂದು ಆರೋಪಿಸಲಾದ ಅಕ್ರಮಗಳಿಂದ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಉಂಟಾಗಿದೆ ಎಂಬುದನ್ನು ಬಿಜೆಪಿ ನಾಯಕ ಬಿ ಸುರೇಶ್ ಗೌಡ ಅವರು ಸಾಬೀತುಪಡಿಸಬೇಕು. ಆದರೆ, ಅದರಲ್ಲಿ ಅವರು ವಿಫಲವಾಗಿದ್ದಾರೆ ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.
ಭ್ರಷ್ಟ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದವರು ಮೇಲ್ಮನವಿದಾರರ (ಗೌರಿಶಂಕರ್) ಏಜೆಂಟರು ಎಂಬುದನ್ನು ಸಾಬೀತುಪಡಿಸುವಲ್ಲಿಯೂ ಸುರೇಶ್‌ಗೌಡ ವಿಫಲರಾಗಿದ್ದಾರೆ. ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿಯಲ್ಲಿ (ಕೆಎಂಎಸ್‌ಎಸ್) ಗೌರಿಶಂಕರ್ ಅವರು ಯಾವುದೇ ತೆರನಾದ ಸ್ಥಾನಮಾನ ಹೊಂದಿಲ್ಲ ಅಥವಾ ಯಾವುದೇ ರೀತಿಯಲ್ಲಿಯೂ ಸಂಪರ್ಕ ಹೊಂದಿಲ್ಲ. ಹೈಕೋರ್ಟ್ ಆದೇಶವು ಅಸಮರ್ಥನೀಯವಾಗಿದ್ದು, ನ್ಯಾಯದ ವಿಫಲತೆಯಾಗಿದೆ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಗೌರಿಶಂಕರ್ ಅವರನ್ನು ಹಿರಿಯ ವಕೀಲ ಕೆ ಕೆ ವೇಣುಗೋಪಾಲ್, ವಕೀಲರಾದ ಎ ವಿ ನಿಶಾಂತ್, ಬಾಲಾಜಿ ಶ್ರೀನಿವಾಸನ್ ಪ್ರತಿನಿಧಿಸಿದ್ದರು. ಸುರೇಶ್‌ಗೌಡ ಪರ ಹಿರಿಯ ವಕೀಲ ಎಂ ಆರ್ ರಂಜಿತ್ ಕುಮಾರ್ ವಾದಿಸಿದರು.