
ವಕ್ಫ್ ತಿದ್ದುಪಡಿ ಕಾಯಿದೆ 2025ರ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬರುವವರೆಗೆ ಕಾಯಿದೆಯ ಕೆಲ ಸೆಕ್ಷನ್‌ಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಇಂದು ಮಧ್ಯಂತರ ಆದೇಶ ಹೊರಡಿಸಿತು. ಕಾಯಿದೆಯನ್ನು ಸಂಪೂರ್ಣವಾಗಿ ತಡೆಯಲು ಪೂರಕ ಕಾರಣ ದೊರೆತಿಲ್ಲ. ಆದರೆ ಕೆಲ ಸೆಕ್ಷನ್‌ಗಳಿಗೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಒಬ್ಬ ವ್ಯಕ್ತಿ ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ಮುನ್ನ ಆತ ಕನಿಷ್ಠ 5 ವರ್ಷ ಕಾಲ ಮುಸ್ಲಿಂ ಆಗಿರಬೇಕೆಂಬ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು ಪ್ರಭುತ್ವವು ಧರ್ಮ ಪಾಲನೆ ಮಾಡುವ (ಪ್ರಾಕ್ಟಿಸಿಂಗ್ ಮುಸ್ಲಿಂ) ಎಂಬುದನ್ನು ಪರಿಶೀಲಿಸಲು ಸ್ಪಷ್ಟ ನಿಯಮ ರೂಪಿಸುವವರೆಗೆ ಈ ನಿಯಮ ಜಾರಿಯಲ್ಲಿ ಇರುವುದಿಲ್ಲ. ಅಂತಹ ನಿಯಮ ಜಾರಿಯಲ್ಲಿಲ್ಲದೆ ಈ ಸೆಕ್ಷನ್ ಕಾರ್ಯರೂಪಕ್ಕೆ ಬಂದರೆ ಅದು ಅಧಿಕಾರದ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಜಿಲ್ಲಾಧಿಕಾರಿಗೆ ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಣಯಿಸಲು ಅನುಮತಿ ನೀಡುವ ನಿಯಮಕ್ಕೂ ಪೀಠ ತಡೆ ನೀಡಿದೆ. ತಡೆ ನೀಡದೆ ಹೋದರೆ ಅಧಿಕಾರ ಪ್ರತ್ಯೇಕತೆಯ ಉಲ್ಲಂಘನೆಯಾಗುತ್ತದೆ. ವಕ್ಫ್ ನ್ಯಾಯಮಂಡಳಿ ತೀರ್ಪು ಬರುವವರೆಗೆ ತೃತೀಯ ವ್ಯಕ್ತಿಗೆ ಹಕ್ಕುಗಳನ್ನು ಸೃಷ್ಟಿಸಲು ಅವಕಾಶ ಇರುವುದಿಲ್ಲ ಎಂದು ಅದು ತಿಳಿಸಿದೆ.
ವಕ್ಫ್ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಳ್ಳುವ ನಿಬಂಧನೆಯ ಬಗ್ಗೆಯೂ ನ್ಯಾಯಾಲಯ ಪ್ರಸ್ತಾಪಿಸಿದೆ. ಸದ್ಯಕ್ಕೆ, ರಾಜ್ಯ ವಕ್ಫ್ ಮಂಡಳಿಯಲ್ಲಿ 3 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಸೇರಿಸಿಕೊಳ್ಳಬಾರದು ಮತ್ತು ಒಟ್ಟಾರೆಯಾಗಿ 4 ಕ್ಕಿಂತ ಹೆಚ್ಚು ಮುಸ್ಲಿಮೇತರರನ್ನು ಕೇಂದ್ರ ವಕ್ಫ್ ಮಂಡಳಿಯಲ್ಲಿ ಸೇರಿಸಿಕೊಳ್ಳಬಾರದು ಎಂದು ಅದು ಆದೇಶಿಸಿದೆ.
ಆದರೆ, ವಕ್ಫ್ ಆಸ್ತಿಗಳ ನೋಂದಣಿಗೆ ಇರುವ ಅವಶ್ಯಕತೆಯನ್ನು ತಡೆಹಿಡಿಯಲು ನ್ಯಾಯಾಲಯ ನಿರಾಕರಿಸಿತು , ಏಕೆಂದರೆ ಈ ಸೆಕ್ಷನ್ ಹಿಂದಿನ ಕಾನೂನಿನಲ್ಲಿಯೂ ಇತ್ತು. ಇದು ಹೊಸದೇನಲ್ಲ ಎಂದು ಅದು ಸ್ಪಷ್ಟಪಡಿಸಿದೆ. 1995ರಿಂದ 2013 ರವರೆಗೆ ನೋಂದಣಿ ಅಸ್ತಿತ್ವದಲ್ಲಿದೆ. ಆದ್ದರಿಂದ ನೋಂದಣಿ ಹೊಸದಲ್ಲ ಎಂದು ಮಧ್ಯಂತರ ಆದೇಶದ ಓದುವಾಗ ಸಿಜೆಐ ಹೇಳಿದರು.
ಅಲ್ಲದೆ, ಸುದೀರ್ಘ ಕಾಲ ಧಾರ್ಮಿಕ ಅಥವಾ ದತ್ತಿ ಚಟುವಟಿಕೆಗಳಿಗೆ ಬಳಲಸಾದ - ʼಬಳಕೆಯಿಂದಾದ ವಕ್ಫ್ʼ (ವಕ್ಫ್ ಬೈ ಯುಸರ್ಸ್) ಎನ್ನುವುದನ್ನು ಅಳಿಸಿ ಹಾಕಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಪೀಠವು ತಡೆ ನೀಡಲಿಲ್ಲ. ಆದರೆ, ಬಳಕೆಯಿಂದಾದ ವಕ್ಫ್‌ಗೆ (ವಕ್ಫ್ ಬೈ ಯುಸರ್ಸ್) ಮಧ್ಯಂತರ ರಕ್ಷಣೆಯನ್ನು ನೀಡಿತು.
ತಾನು ನೀಡಿರುವುದು ಮೇಲ್ನೋಟದ ಅಭಿಪ್ರಾಯ ಎಂದಿರುವ ನ್ಯಾಯಾಲಯ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಮುಂದಿನ ವಿಚಾರಣೆ ವೇಳೆ ಪಕ್ಷಕಾರರು ಮಂಡಿಸುವ ವಾದಗಳಿಗೆ ತಡೆ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ವಕ್ಫ್ ತಿದ್ದುಪಡಿ ಕಾಯಿದೆ ಮುಸ್ಲಿಮ್ ಸಮುದಾಯವನ್ನು ತಾರತಮ್ಯದಿಂದ ಕಾಣುತ್ತದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ದೂರಿ ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿವಿಧ ವ್ಯಕ್ತಿಗಳು, ರಾಜಕೀಯ ಪಕ್ಷಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕಾಯಿದೆ ಸಂಬಂಧ ಮಧ್ಯಂತರ ಪರಿಹಾರ ಕೋರಿಯೂ ಅರ್ಜಿಗಳನ್ನು ಸಲ್ಲಿಸಲಾಗಿತ್ತು.