ದೇಶದ ಯಾವುದೇ ಜೈಲುಗಳಲ್ಲಿ ಜಾತಿ ತಾರತಮ್ಯ ಎಸಗುವುದನ್ನು ಸಹಿಸಲಾಗದು ಎಂದಿರುವ ಸುಪ್ರೀಂ ಕೋರ್ಟ್ ಅಂತಹ ತಾರತಮ್ಯಕ್ಕೆ ಎಡೆ ಮಾಡಿಕೊಡುವ ನಿಯಮಾವಳಿಗಳನ್ನು ಗುರುವಾರ ರದ್ದುಗೊಳಿಸಿದೆ. ಅಂತೆಯೇ ಸಮಸ್ಯೆ ಮೇಲ್ವಿಚಾರಣೆಗಾಗಿ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ (ಸುಕನ್ಯಾ ಶಾಂತಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).
ಜೈಲುಗಳಲ್ಲಿ ಯಾವುದೇ ಜಾತಿ ಆಧಾರಿತ ತಾರತಮ್ಯ ಕಂಡುಬಂದಲ್ಲಿ ರಾಜ್ಯ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ.
ಸಮಾಜದಂಚಿನ ಜಾತಿಗಳಿಗೆ ಸೇರಿದವರು ಎಂಬ ಕಾರಣಕ್ಕೆ ತುಳಿತಕ್ಕೊಳಗಾದ ಜಾತಿಗಳ ಕೈದಿಗಳನ್ನು ಕೀಳಾಗಿ ಕಾಣುವ, ಅವಮಾನ ಮಾಡುವ ಇಲ್ಲವೇ ಅಮಾನವೀಯ ಕೆಲಸದಲ್ಲಿ ತೊಡಗಿಸುವಹಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದು ಕೆಲ ರಾಜ್ಯಗಳ ಜೈಲು ಕೈಪಿಡಿಗಳಲ್ಲಿ ಅಂತಹ ಆಚರಣೆಯನ್ನು ಜೀವಂತವಾಗಿಟ್ಟಿದ್ದ ನಿಯಮಗಳನ್ನು ರದ್ದುಪಡಿಸಿದೆ. ಅಂತೆಯೇ ಜೈಲು ರಿಜಿಸ್ಟ್ರಿ ಪುಸ್ತಕಗಳಿಂದ ಕೈದಿಗಳ ಜಾತಿ ವಿವರ ತೆಗೆದು ಹಾಕುವಂತೆ ಅದು ನಿರ್ದೇಶಿಸಿದೆ.
ಸಮಾಜದಂಚಿನ ಜಾತಿಯಿಂದ ಬಂದವರಿಗೆ ಸ್ವಚ್ಛತೆಯ ಕೆಲಸಗಳನ್ನು ವಹಿಸುವುದು, ಉನ್ನತ ಜಾತಿಯವರಿಗೆ ಅಡುಗೆ ಕಾರ್ಯ ನಿಯೋಜಿಸುವುದು ಸಂವಿಧಾನದ 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಜಾತಿ ತಾರತಮ್ಯ ಮಾಡುವಂತಹ ಎಲ್ಲಾ ನಿಯಮಗಳನ್ನು ಅಸಾಂವಿಧಾನಿಕ ಎಂದು ಪರಿಗಣಿಸಲಾಗಿದ್ದು ಈಗ ನೀಡುತ್ತಿರುವ ತೀರ್ಪಿನ ಪ್ರಕಾರ ಬದಲಾವಣೆ ಮಾಡಿಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗುತ್ತಿದೆ. ಮೂರು ತಿಂಗಳ ಬಳಿಕ ತಾರತಮ್ಯ ತೊಡೆದುಹಾಕಲು ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಗಳು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಅದು ಸೂಚಿಸಿದೆ.
ಇದಲ್ಲದೆ ಡಿನೋಟಿಫೈಡ್ ಬುಡಕಟ್ಟುಗಳ ಸದಸ್ಯರನ್ನು (ವಸಾಹತುಶಾಹಿ ಕಾಲಘಟ್ಟದಲ್ಲಿ ಅಪರಾಧಿ ಬುಡಕಟ್ಟುಗಳು ಎಂದು ಕರೆದು ಹೊರಡಿಸಿದ್ದ ಅಧಿಸೂಚನೆಯ ವ್ಯಾಪ್ತಿಯೊಳಗಿದ್ದ ಬುಡಕಟ್ಟುಗಳು) ರೂಢಿಗತ ಅಪರಾಧಿ ಗುಂಪುಗಳ ಸದಸ್ಯರಂತೆ ಕಾಣಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಂತಹ ತಾರತಮ್ಯ ಇರುವ ಜೈಲು ಕೈಪಿಡಿಗಳು ದೋಷಯುಕ್ತವಾಗಿವೆ ಎಂದು ಅದು ಟೀಕಿಸಿತು.
ಜಾತಿ ತಾರತಮ್ಯ ನೇರವಾಗೇ ಇರಲಿ ಅಥವಾ ಪರೋಕ್ಷವಾಗಿಯೇ ಇರಲಿ ಅದನ್ನು ತಡೆಯುವ ಹೊಣೆಗಾರಿಕೆ ಪ್ರಭುತ್ವದ್ದು. ಅಲ್ಲದೆ ಕೈದಿಗಳ ಘನತೆಯನ್ನು ಅದು ಕಾಪಾಡಬೇಕು ಎಂದು ನ್ಯಾಯಾಲಯ ನುಡಿದಿದೆ. ಉತ್ತರ ಪ್ರದೇಶದ ಜೈಲು ಕೈಪಿಡಿಯಲ್ಲಿರುವ ಜಾತಿ ತಾರತಮ್ಯದ ನಿಯಮಗಳನ್ನು ಖಂಡಿಸಿದ ನ್ಯಾಯಾಲಯ ಯಾವುದೇ ಗುಂಪು ಮಲ ಹೊರುವ ಅಥವಾ ಕೀಳು ಕೆಲಸ ಮಾಡುವ ಗುಂಪಾಗಿ ಅಥವಾ ಕೀಳು ಕೆಲಸ ಮಾಡದೇ ಇರುವ ಸಮುದಾಯವಾಗಿ ಹುಟ್ಟಿರುವುದಿಲ್ಲ ಎಂದು ತಿಳಿಸಿದೆ.
ಅಂತೆಯೇ, ಹರಿ ಅಥವಾ ಚಂಡಾಲ್ ಜಾತಿಗಳಿಂದ ಬಂದವರನ್ನು ಕಸಗುಡಿಸುವುದಕ್ಕೆ ಆಯ್ಕೆ ಮಾಡಬೇಕು ಎಂದು ಹೇಳುವ ಜೈಲು ಕೈಪಿಡಿ ನಿಯಮಗಳನ್ನು ಕೂಡ ಪೀಠ ಟೀಕಿಸಿತು. ಜೊತೆಗೆ ಮಲದ ಗುಂಡಿಗಳನ್ನು ಶುಚಿಗೊಳಿಸುವಂತಹ ಅಪಾಯಕಾರಿ ಕೆಲಸ ಮಾಡಲು ಕೈದಿಗಳನ್ನು ತೊಡಗಿಸುವಂತಿಲ್ಲ ಎಂದು ನುಡಿಯಿತು.
ಜೈಲು ಬ್ಯಾರಕ್‌ಗಳಲ್ಲಿನ ಜಾತಿ ಆಧಾರಿತ ತಾರತಮ್ಯದ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ್ದ ಪತ್ರಕರ್ತೆ ಸುಕನ್ಯಾ ಶಾಂತಾ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಸುಕನ್ಯಾ ಶಾಂತಾ ಪರ ಹಿರಿಯ ವಕೀಲ ಡಾ.ಎಸ್.ಮುರಳೀಧರ್ ಹಾಗೂ ವಕೀಲರಾದ ಪ್ರಸನ್ನ ಎಸ್. , ದಿಶಾ ವಾಡೇಕರ್ ವಾದ ಮಂಡಿಸಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಹಾಯ ಮಾಡಿದ್ದರು.