ಜಾರಿ ನಿರ್ದೇಶನಾಲಯದ (ಇ ಡಿ) ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ, ಇದು ತಾನು 2021ರಲ್ಲಿ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ [ಡಾ. ಜಯಾ ಠಾಕೂರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಮಿಶ್ರಾ ಅವರಿಗೆ ನೀಡಲಾದ ಅಧಿಕಾರಾವಧಿ ವಿಸ್ತರಣೆಯು 2021ರಲ್ಲಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ, ತೀರ್ಪಿನಲ್ಲಿ ನವೆಂಬರ್ 2021ರ ನಂತರ ಮಿಶ್ರಾ ಅವರ ಅಧಿಕಾರ ವಿಸ್ತರಿಸದಂತೆ ಸುಪ್ರೀಂ ಕೋರ್ಟ್ ನುಡಿದಿತ್ತು.
ಇದೇ ವೇಳೆ, ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ವಿಚಕ್ಚಣಾ ಆಯೋಗ ಕಾಯಿದೆಗೆ (ಸಿವಿಸಿ ಕಾಯಿದೆ) ಶಾಸಕಾಂಗ ಮಾಡಿದ್ದ ತಿದ್ದುಪಡಿಗಳನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ಸಿವಿಸಿ ಕಾಯಿದೆ ಮತ್ತು ದೆಹಲಿ ಪೊಲೀಸ್ ಸ್ಥಾಪನೆ ವಿಶೇಷ ಕಾಯಿದೆಗೆ ಒಡ್ಡಲಾಗಿದ್ದ ಸವಾಲನ್ನು ಅಷ್ಟಕ್ಕೆ ಒಳಪಟ್ಟು ವಜಾಗೊಳಿಸಲಾಗಿದೆ. ಮಿಶ್ರಾ ಅವರ ಅಧಿಕಾರಾವಧಿ ಕಾನೂನುಬಾಹಿರ ಎಂದಿರುವ ಸುಪ್ರೀಂ ಕೋರ್ಟ್ ಅವರು ಜುಲೈ 31, 2023 ರವರೆಗೆ ಅಧಿಕಾರದಲ್ಲಿರಲು ಅನುಮತಿ ಇದೆ ಎಂದು ತಿಳಿಸಿದೆ.
ಇ ಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಿಸಲು ಅವಕಾಶ ನೀಡುವ ಕಾನೂನು ಜಾರಿಗೊಳಿಸಲು ಶಾಸಕಾಂಗಕ್ಕೆ ಅಧಿಕಾರ ಇದ್ದರೂ ಮಿಶ್ರಾ ಅವರ ಅಧಿಕಾರಾವಧಿಯನ್ನು ಮತ್ತಷ್ಟು ವಿಸ್ತರಿಸುವುದರ ವಿರುದ್ಧ ಸುಪ್ರೀಂ ಕೋರ್ಟ್ 2021ರ ತೀರ್ಪಿನಲ್ಲಿ ನಿರ್ದಿಷ್ಟ ಆದೇಶ ಇರುವುದರಿಂದ ತಾನು ಮಿಶ್ರಾ ಅವರ ರಕ್ಷಣೆಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.