
ಚುನಾವಣೆಯಲ್ಲಿ ಅವಿರೋಧ ಆಯ್ಕೆ ಕಡಿಮೆ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ಗುರುವಾರ ಸಲಹೆಯೊಂದನ್ನು ನೀಡಿದ್ದು ಒಬ್ಬ ಅಭ್ಯರ್ಥಿ ಚುನಾಯಿತರೆಂದು ಘೋಷಿಸಲು ಒಟ್ಟು ಚಲಾಯಿಸಲಾದ ಮತಗಳಲ್ಲಿ ಕನಿಷ್ಠ ಶೇಕಡಾವಾರು ಮತ ಪಡೆದಿರಬೇಕು ಎಂಬ ನಿಯಮ ಜಾರಿಗೆ ಪ್ರಸ್ತಾಪಿಸಿದೆ [ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಬೇರೆ ಯಾರೂ ಕಣದಲ್ಲಿಲ್ಲದಿದ್ದರೆ, ಮತದಾನ ಮಾಡದೆಯೇ ಅಭ್ಯರ್ಥಿಯನ್ನು ನೇರವಾಗಿ ಆಯ್ಕೆ ಮಾಡಲು ಅನುಮತಿಸುವ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 53(2) ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಮತದಾರರ ಬೆಂಬಲವಿಲ್ಲದೆ ಅಭ್ಯರ್ಥಿ ಸಂಸತ್ತು ಅನುಮತಿಸುವ ಈ ಸೆಕ್ಷನ್ ಬಗ್ಗೆ ನ್ಯಾಯಮೂರ್ತಿ ಕಾಂತ್ ಕಳವಳ ವ್ಯಕ್ತಪಡಿಸಿದರು.
"ಒಬ್ಬನೇ ಅಭ್ಯರ್ಥಿ ಸ್ಪರ್ಧಿಸಿದ್ದರೂ, ಆತ ಕನಿಷ್ಠ ಶೇ 10ರಷ್ಟು ಮತ ಪಡೆಯುವುದನ್ನು ಕಡ್ಡಾಯಗೊಳಿಸುವುದು ಪ್ರಗತಿಪರವಲ್ಲವೇ? ಒಟ್ಟು ಮತಗಳಲ್ಲಿ ಶೇ 5ರಷ್ಟು ಮತಗಳನ್ನು ಪಡೆಯದ ವ್ಯಕ್ತಿಯನ್ನು ಪೂರ್ವನಿಯೋಜಿತವಾಗಿ ಸಂಸತ್ತಿಗೆ ಪ್ರವೇಶಿಸಲು ಏಕೆ ಅವಕಾಶ ನೀಡಬೇಕು" ಎಂದು ನ್ಯಾಯಾಲಯ ಪ್ರಶ್ನಿಸಿತು.
ಹೀಗಾಗಿ, ಕೇಂದ್ರ ಸರ್ಕಾರ ಪ್ರಕರಣ ಪರಿಶೀಲಿಸಿ ಅವಿರೋಧ ಆಯ್ಕೆ ಪ್ರಕ್ರಿಯೆಯ ಸುಧಾರಣೆಗೆ ಶಿಫಾರಸು ಮಾಡುವಂತಹ ತಜ್ಞರ ಸಮಿತಿ ರಚಿಸುವುದನ್ನು ಕೇಂದ್ರ ಸರ್ಕಾರ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿತು.
ವಿಧಿ ಸಂಸ್ಥೆಯ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ ನ್ಯಾಯಾಲಯ ಜುಲೈ 24ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಪಡಿಸಿತು.
ಭಾರತದ ಪ್ರಜಾಪ್ರಭುತ್ವವು ಪ್ರತಿಯೊಂದು ಸವಾಲನ್ನು ಬಗೆಹರಿಸಿದ್ದು ಎಲ್ಲಾ ಭಾರತೀಯರು ಅದರ ಬಗ್ಗೆ ಹೆಮ್ಮೆ ಪಡಬೇಕು ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿತು.
"ನಮ್ಮದು ಅತ್ಯಂತ ಕ್ರಿಯಾತ್ಮಕ ಸಂವಿಧಾನ, ಇದರಲ್ಲಿ ಬಹುಮತದ ಪ್ರಜಾಪ್ರಭುತ್ವ ಎಂದು ಅದು ಹೇಳುತ್ತದೆ.... ಬೇರೆ ಯಾವುದೇ ಸಂವಿಧಾನ ಇದನ್ನು ಇಷ್ಟೊಂದು ಸ್ಪಷ್ಟವಾಗಿ ಹೇಳುವುದಿಲ್ಲ... ಎಲ್ಲಾ ಭಾರತೀಯರು ಹೆಮ್ಮೆಪಡಬೇಕಾದ ಸಂಗತಿ ಎಂದರೆ ಪ್ರತಿಯೊಂದು ಸವಾಲನ್ನೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗೆಹರಿಸಿದೆ” ಎಂದು ನ್ಯಾಯಾಲಯ ಹೇಳಿದೆ.
ಭಾರತದಲ್ಲಿ ಸ್ವಾತಂತ್ರ್ಯಾನಂತರ ಅವಿರೋಧ ಆಯ್ಕೆಗಳು ವ್ಯಾಪಕವಾಗಿ ನಡೆದಿವೆ ಎಂಬ ದತ್ತಾಂವನ್ನು ವಿಧಿ ಸಂಸ್ಥೆಯ ಪರ ವಕೀಲರಾದ ಅರವಿಂದ್ ದಾತಾರ್ ಮಂಡಿಸಿದರು. ಆದರೆ ಅಂತಹ ಆಯ್ಕೆಗಳು ಅಪರೂಪ. ಕೇವಲ 9 ಅವಿರೋಧ ಆಯ್ಕೆಗಳು ನಡೆದಿವೆ ಎಂದು ನ್ಯಾ. ಕಾಂತ್ ವಿವರಿಸಿದರು.
ಆದರೆ ಇದು ವಿಧಾನಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರಲಿದ್ದು ಅಲ್ಲಿ ಇಂತಹ ನಿದರ್ಶನಗಳು ಸಾಮಾನ್ಯವಾಗಿವೆ ಎಂದು ದಾತಾರ್ ಹೇಳಿದರು. ಆದರೆ ಕಾಯಿದೆಯಲ್ಲಿ ಬದಲಾವಣೆ ತರುವುದಕ್ಕೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಿರೋಧ ವ್ಯಕ್ತಪಡಿಸಿದರು. ಸೆಕ್ಷನ್ ಅನ್ನು ಸಂಪೂರ್ಣ ರದ್ದುಗೊಳಿಸುವುದು ಸೂಕ್ತವಲ್ಲ ಎಂದ ಅವರು ಇದಕ್ಕೆ ಸಂಬಂಧಿಸಿದಂತೆ ಹೆಚ್ಚು ಮಾನದಂಡಯುಕ್ತ ವಿಧಾನ ಅಳವಡಿಕೆಗೆ ಮನವಿ ಮಾಡಿದರು. ಆಗ ನ್ಯಾಯಾಲಯ ತಾನು 53(2)ನೇ ಸೆಕ್ಷನ್ ರದ್ದುಗೊಳಿಸಲು ಹೇಳುತ್ತಿಲ್ಲ ಬದಲಿಗೆ ಅದಕ್ಕೆ ಮತ್ತೊಂದು ನಿಯಮಾವಳಿ ಸೇರಿಸುವಂತೆ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿತು.