ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು ಚುನಾವಣಾ ವೆಚ್ಚ ಸಲ್ಲಿಸಬೇಕು: ಬಾಂಬೆ ಹೈಕೋರ್ಟ್‌

ತಮ್ಮ ನಾಮನಿರ್ದೇಶನ ನಮೂನೆಗಳನ್ನು ಸಲ್ಲಿಸುವಾಗಲೂ ಸಹ ತಮ್ಮ ಉಮೇದುವಾರಿಕೆಯನ್ನು ಹೆಚ್ಚು ಅಭಿಮಾನಿಗಳೊಂದಿಗೆ ಸೇರಿ ಸಲ್ಲಿಸುವುದು ಇತ್ತೀಚಿನ ಅಭ್ಯರ್ಥಿಗಳಲ್ಲಿ ಒಂದು ಪ್ರವೃತ್ತಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
Aurangabad Bench, Bombay High Court
Aurangabad Bench, Bombay High Court

ಸ್ಥಳೀಯ ಸಂಸ್ಥೆಗಳಿಗೆ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳೂ ಚುನಾವಣಾ ವೆಚ್ಚವನ್ನು ಸಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠ ಹೇಳಿದೆ.

ತಮ್ಮ ನಾಮನಿರ್ದೇಶನ ನಮೂನೆಗಳನ್ನು ಸಲ್ಲಿಸುವಾಗಲೂ ಸಹ ತಮ್ಮ ಉಮೇದುವಾರಿಕೆಯನ್ನು ಹೆಚ್ಚು ಅಭಿಮಾನಿಗಳೊಂದಿಗೆ ಪ್ರಚಾರ ಮಾಡುವುದು ಇತ್ತೀಚಿನ ಅಭ್ಯರ್ಥಿಗಳಲ್ಲಿ ಒಂದು ಪ್ರವೃತ್ತಿಯಾಗಿದೆ ಎಂದು ತೀರ್ಪು ಹೊರಡಿಸಿದ ನ್ಯಾಯಮೂರ್ತಿಗಳಾದ ಎಸ್‌ ವಿ ಗಂಗಾಪುರ್ವಾಲಾ ಮತ್ತು ಸುನಿಲ್‌ ಪಿ ದೇಶಮುಖ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ತಮ್ಮ ಉಮೇದುವಾರಿಕೆ ಸಲ್ಲಿಸುವಾಗ ಅಭ್ಯರ್ಥಿಗಳು ಬ್ಯಾಂಡ್‌ನೊಂದಿಗೆ ಮೆರವಣಿಗೆ, ಕಟೌಟ್‌ಗಳನ್ನು ಹಾಕಿಸುವುದು, ಜಾಹೀರಾತು ಇತ್ಯಾದಿ ನೀಡುತ್ತಾರೆ. ಇದಕ್ಕೆ ಅಪಾರ ವೆಚ್ಚವಾಗುತ್ತದೆ ಎಂದು ಪೀಠ ಹೇಳಿದೆ.

ಆದ್ದರಿಂದ, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಬೇರೆ ಅಭ್ಯರ್ಥಿಗಳಿಲ್ಲದಿದ್ದರೂ ಸಹ ಅಂತಹ ಅಭ್ಯರ್ಥಿಯಿಂದ ಖರ್ಚಾಗುತ್ತದೆ. “ಆದ್ದರಿಂದ, ಎಲ್ಲಾ ಸಂದರ್ಭಗಳಲ್ಲಿಯೂ ಮುಕ್ತ ಅಥವಾ ಅವಿರೋಧ ಚುನಾವಣೆಗಳಲ್ಲಿ ಯಾವುದೇ ಚುನಾವಣಾ ವೆಚ್ಚಗಳು ಇರುವುದಿಲ್ಲ ಮತ್ತು ಅವಿರೋಧವಾಗಿ ಚುನಾಯಿತರಾಗುವ ಅಭ್ಯರ್ಥಿಗಳು ಚುನಾವಣಾ ವೆಚ್ಚವನ್ನು ಸಲ್ಲಿಸುವುದರಿಂದ ವಿನಾಯಿತಿ ಪಡೆಯುತ್ತಾರೆ ಎಂದು ಹೇಳಲಾಗದು” ಎಂದು ನ್ಯಾಯಾಲಯ ಹೇಳಿದೆ.

ಮೊದಲಿಗೆ ಪ್ರಕರಣವನ್ನು ಏಕಸದಸ್ಯ ಪೀಠವು ವಿಚಾರಣೆ ನಡೆಸಿದ್ದು, ಅದು ಬಾಂಬೆ ಹೈಕೋರ್ಟ್‌ನ ದಿಪ್ಮಾಲಾ ವೈಫ್‌ ಆಫ್‌ ರವೀಂದ್ರ ಚಚನೆ ವರ್ಸಸ್‌ ನಾಗಪುರ ಹೆಚ್ಚುವರಿ ಆಯುಕ್ತರ ಪ್ರಕರಣವನ್ನು ಉಲ್ಲೇಖಿಸಿತ್ತು.

ಒಂದು ನಿರ್ದಿಷ್ಟ ಹುದ್ದೆಗೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳಿದ್ದರೆ ಮಾತ್ರ ಅದು ಸ್ಪರ್ಧೆಗೆ ಸಮನಾಗಿರುತ್ತದೆ ಮತ್ತು ಅಂತಹ ಸ್ಪರ್ಧೆಯಲ್ಲಿ ಖರ್ಚು ಮಾಡುವ ಅಭ್ಯರ್ಥಿಗಳು ಮಾತ್ರವೇ ತಮ್ಮ ವೆಚ್ಚಗಳನ್ನು ಸಲ್ಲಿಸಬೇಕು ಎಂದು ದಿಪ್ಮಾಲಾ ತೀರ್ಪಿನಲ್ಲಿ ಸೂಚಿಸಿರುವುದನ್ನು ಏಕ ಸದಸ್ಯ ಪೀಠ ಗಮನಿಸಿತು.

ಚುನಾವಣಾ ವೆಚ್ಚದ ಲೆಕ್ಕವನ್ನು ಅಭ್ಯರ್ಥಿ ಇಟ್ಟುಕೊಳ್ಳಬೇಕು ಎಂದು ಫೆಬ್ರವರಿ 7, 1995ರ ಆದೇಶದಲ್ಲಿ ಹೇಳಿದ್ದು ಹಾಗೂ ಸಂಸತ್‌, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದಂತೆ ವೆಚ್ಚ ಸಲ್ಲಿಸಬೇಕು ಎಂದು ಅಕ್ಟೋಬರ್‌ 15, 2016ರಲ್ಲಿ ರಾಜ್ಯ ಚುನಾವಣಾ ಆಯೋಗ ಹೇಳಿದ್ದನ್ನು ಏಕಸದಸ್ಯ ಪೀಠವು ಆದೇಶದಲ್ಲಿ ವಿವರಿಸಿತ್ತು. ದಿಪ್ಮಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ಎರಡು ಆದೇಶಗಳನ್ನು ಬಾಂಬೆ ಹೈಕೋರ್ಟ್‌ ಗಮನಕ್ಕೆ ತಂದಿರಲಿಲ್ಲ ಎಂಬುದನ್ನು ಏಕಸದಸ್ಯ ಪೀಠ ಉಲ್ಲೇಖಿಸಿತ್ತು.

Also Read
ಕೋವಿಡ್‌ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದನ್ನು ಮುಂದೂಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್‌

07.02.1995ರ ಆದೇಶ ಮತ್ತು 15.10.2016ರ ಸರ್ಕಾರದ ನಿಲುವಳಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗ್ರಾಮ ಪಂಚಾಯಿತಿ ಕಾಯಿದೆ ಸೆಕ್ಷನ್‌ 14ಬಿ (1), ಮಹಾರಾಷ್ಟ್ರ ಪುರಸಭೆ, ನಗರ ಪಂಚಾಯಿತಿಗಳು ಮತ್ತು ಟೌನ್‌ಶಿಪ್‌ಗಳ ಕಾಯಿದೆ 1965ರ ಸೆಕ್ಷನ್‌ 16 (1- ಡಿ) ಮತ್ತು ಪಂಚಾಯಿತಿ ಸಮಿತಿ ಕಾಯಿದೆ 1961ರ ಅಡಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿ ಚುನಾವಣಾ ವೆಚ್ಚವನ್ನು ಸಲ್ಲಿಸಬೇಕೆ ಎಂಬ ಪ್ರಶ್ನೆಯನ್ನು ಏಕಸದಸ್ಯ ಪೀಠವು ವಿಸ್ತೃತ ಪೀಠದ ತೀರ್ಮಾನಕ್ಕೆ ಸೂಚಿಸಿದೆ.

ಚುನಾವಣೆಗಳಲ್ಲಿ ಶುದ್ಧತೆ ತರಲು ಮತ್ತು ಅಭ್ಯರ್ಥಿಗಳ ಹಣಕಾಸು ವ್ಯವಹಾರಗಳು ಮತ್ತು ವಹಿವಾಟುಗಳನ್ನು ಪರಿಶೀಲಿಸಲು ನಿಯಮಗಳನ್ನು ಪರಿಚಯಿಸಲಾಯಿತು ಎಂದು ಮಹಾರಾಷ್ಟ್ರ ಗ್ರಾಮ ಪಂಚಾಯಿತಿ ಕಾಯಿದೆ ನಿಬಂಧನೆಗಳಿಗೆ ಸಂಬಂಧಿಸಿದಂತೆ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

“ಹಣ, ಅದರ ಶಕ್ತಿ ಮತ್ತು ಪ್ರಭಾವವು ಸವಲತ್ತು ಪಡೆದ ವರ್ಗವನ್ನು ಸ್ಪಷ್ಟವಾಗಿ ಅನುಕೂಲಕರ ಸ್ಥಾನದಲ್ಲಿ ಇರಿಸಲು ಕಾರಣವನ್ನು ತಿಳಿಸಲು ಬಲವಾದ ಒಲವು ಹೊಂದಿದೆ” ಎಂದು ಪೀಠ ಹೇಳಿದೆ.

ಕಾನೂನುಬಾಹಿರ ವಿಧಾನಗಳ ಮೂಲಕ ಚುನಾಯಿತರಾಗುವುದರಿಂದ ತಡೆಯಲು ನಿಯಂತ್ರಕ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಪೀಠ ಹೇಳಿದೆ. “ಆದ್ದರಿಂದ, ಮುಕ್ತ ಅಥವಾ ಅವಿರೋಧ ಚುನಾವಣೆಗಳಲ್ಲಿ ಯಾವುದೇ ಚುನಾವಣಾ ವೆಚ್ಚಗಳು ಇರುವುದಿಲ್ಲ ಎಂದು ಎಲ್ಲಾ ಸಂದರ್ಭಗಳಲ್ಲಿ ಹೇಳಲಾಗುವುದಿಲ್ಲ. ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು ಚುನಾವಣಾ ವೆಚ್ಚ ಸಲ್ಲಿಸುವುದರಿಂದ ವಿನಾಯಿತಿ ಪಡೆಯುತ್ತಾರೆ ಎನ್ನಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com