ಡಿಜಿಟಲ್ ಅರೆಸ್ಟ್: ಕೇಂದ್ರ, ಸಿಬಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಇಂತಹ ವಂಚನೆಗಳ ಹಿಂದೆ ಇರುವವರು ನಕಲಿ ನ್ಯಾಯಾಲಯ ಆದೇಶ ಬಳಸಿ ಜನರನ್ನು ಹಣಕ್ಕಾಗಿ ಮೋಸ ಮಾಡುತ್ತಿರುವುದು ದಿಗ್ಭ್ರಮೆ ಹುಟ್ಟಿಸುತ್ತಿದೆ ಎಂದ ನ್ಯಾಯಾಲಯ.
Cyber crime
Cyber crime
Published on

ದೇಶದೆಲ್ಲೆಡೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಸಿಬಿಐ ಪ್ರತಿಕ್ರಿಯೆ ಕೇಳಿದೆ.

ಇಂತಹ ವಂಚನೆಗಳ ಹಿಂದೆ ಇರುವವರು ನಕಲಿ ನ್ಯಾಯಾಲಯ ಆದೇಶ ಬಳಸಿ ಜನರನ್ನು ಹಣಕ್ಕಾಗಿ ಮೋಸ ಮಾಡುತ್ತಿರುವುದು ದಿಗ್ಭ್ರಮೆ ಹುಟ್ಟಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿತು. ಪ್ರಕರಣದಲ್ಲಿ ನ್ಯಾಯಾಲಯ ಭಾರತದ ಅಟಾರ್ನಿ ಜನರಲ್ ಅವರ ಸಹಾಯವನ್ನೂ ಕೋರಿದೆ.

Also Read
ನಗದು, ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿದ ಹಣದ ಲೆಕ್ಕವನ್ನು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಸಾಮಾನ್ಯವಾಗಿ ರಾಜ್ಯ ಪೊಲೀಸರಿಗೆ ತನಿಖೆಯನ್ನು ತ್ವರಿತಗೊಳಿಸುವಂತೆ ಮತ್ತು ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವಂತೆ ನಿರ್ದೇಶಿಸುತ್ತಿದ್ದೆವು. ಆದರೆ ವಂಚಕರು ಸುಪ್ರೀಂ ಕೋರ್ಟ್‌ ಹೆಸರಿನಲ್ಲಿ ನಕಲಿ ಆದೇಶ ತಯಾರಿಸಿರುವುದು ಕಂಡು ಆಘಾತವಾಗಿದೆ ಎಂದ ಪೀಠ ಪಿಎಂಎಲ್‌ಎ ಕಾಯಿದೆಯಡಿಯ ನಕಲಿ ಪ್ರಕರಣವೊಂದನ್ನು ಉಲ್ಲೇಖಿಸಿತು. ಅದರಲ್ಲಿ ನ್ಯಾಯಾಧೀಶರು, ಇಡಿ ಅಧಿಕಾರಿಯ ನಕಲಿ ಸಹಿ ಮತ್ತು ನ್ಯಾಯಾಲಯದ ಮುದ್ರೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿತು.

ಹೀಗೆ ನ್ಯಾಯಾಲಯದ ಆದೇಶ ನಕಲು ಮಾಡಿ ಬಳಸುವುದು ನ್ಯಾಯಂಗದ ಮೇಲೆ ಜನ ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಉಂಟಾಗಲಿದ್ದು ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಅದು ಹೇಳಿದೆ.

ಡಿಜಿಟಲ್‌ ಅರೆಸ್ಟ್‌ ಒಂದು ಬಗೆಯ ಆನ್‌ಲೈನ್‌ ವಂಚನೆಯಾಗಿದ್ದು ಕಾನೂನು ಜಾರಿ ಸಂಸ್ಥೆಗಳು, ಸುಂಕ ವಸೂಲಿ ಅಧಿಕಾರಿಗಳು ಅಥವಾ ಪೊಲೀಸರು ಇಲ್ಲವೇ ಸಿಬಿಐ ರೀತಿಯ ಸರ್ಕಾರಿ ಅಧಿಕಾರಿಗಳಂತೆ ನಟಿಸುವ ಸೈಬರ್‌ ಅಪರಾಧಿಗಳು ಸಂತ್ರಸ್ತರನ್ನು ಬೆದರಿಸಿ ಹಣ ದೋಚುತ್ತಾರೆ. ಸಂತ್ರಸ್ತರು ಕಾನೂನಾತ್ಮಕ ಸಮಸ್ಯೆಯಲ್ಲಿ ಸಿಲುಕಿದ್ದು ಅದರಿಂದ ಪಾರಾಗಲು ದೊಡ್ಡ ಪ್ರಮಾಣದ ಹಣ ಪಾವತಿಸುವಂತೆ ಇಂತಹ ವಂಚಕರು ಬೆದರಿಸುತ್ತಾರೆ.

Also Read
ಆನ್‌ಲೈನ್‌ ಗೇಮಿಂಗ್‌ ಕಾಯಿದೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಹೆಡ್‌ ಡಿಜಿಟಲ್‌ ವರ್ಕ್ಸ್‌

ಕಳೆದ ಸೆಪ್ಟೆಂಬರ್‌ ತಿಂಗಳ 1ರಿಂದ-16ನೇ ತಾರೀಖಿನ ನಡುವೆ ತಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮೂಲಕ ವಂಚಿಸಿದ್ದ ಬಗ್ಗೆ ವೃದ್ಧ ದಂಪತಿ ಸುಪ್ರೀಂ ಕೋರ್ಟ್‌ಗೆ ದೂರಿದ್ದರು. ತಾವು ಜೀವಮಾನವಿಡೀ ದುಡಿದಿದ್ದ ₹1.5 ಕೋಟಿ ಮೊತ್ತದ ಆಸ್ತಿಯನ್ನು ಡಿಜಿಟಲ್‌ ಅರೆಸ್ಟ್‌ನಿಂದಾಗಿ ಕಳೆದುಕೊಂಡ ಬಗ್ಗೆ ದಂಪತಿ ನ್ಯಾಯಾಲಯದ ಗಮನಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್‌ ಅರೆಸ್ಟ್‌ಗಳ ಕುರಿತು ಪ್ರಕರಣ ದಾಖಲಿಸಿಕೊಂಡಿತು.

ವಾದ ಆಲಿಸಿದ ನ್ಯಾಯಾಲಯ ದೇಶದಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿರುವುದು ಮಾಧ್ಯಮದಲ್ಲಿ ವರದಿಯಾಗಿದೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಪೊಲೀಸರ ಸಂಘಟಿತ ಪ್ರಯತ್ನಗಳೊಂದಿಗೆ ದೇಶಾದ್ಯಂತ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಅದು ನುಡಿಯಿತು. ಅಂತೆಯೇ ಅದು ಕೇಂದ್ರ ಸರ್ಕಾರ ಹಾಗೂ ಸಿಬಿಐ ಪ್ರತಿಕ್ರಿಯೆ ಕೇಳಿತು. ಜೊತೆಗೆ ವೃದ್ಧ ದಂಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಾಲಾ, ಹರಿಯಾಣ ಸೈಬರ್ ಅಪರಾಧ ಇಲಾಖೆಯ ಸ್ಥಿತಿಗತಿಯ ಕುರಿತಾದ ವರದಿಯನ್ನೂ ಅದು ಬಯಸಿದೆ.

Kannada Bar & Bench
kannada.barandbench.com