ಉತ್ತರಾಖಂಡ ಅರಣ್ಯ ಒತ್ತುವರಿ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂ; ಕೂಡಲೇ ಕಾಮಗಾರಿ ಸ್ಥಗಿತಕ್ಕೆ ಆದೇಶ

ಅರಣ್ಯ ಭೂಮಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು ಎಲ್ಲಾ ಖಾಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಿತು.
Forest
Forest
Published on

ಉತ್ತರಾಖಂಡದಲ್ಲಿ ಅರಣ್ಯ ಭೂಮಿ ಅತಿಕ್ರಮಣದ ಕುರಿತು ಸೋಮವಾರ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್‌ ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿದೆ [ಅನಿತಾ ಕಂದ್ವಾಲ್ ಮತ್ತು ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].

ಹಿಮಚ್ಛಾದಿತ ಜಿಲ್ಲೆಗಳ ಸಂರಕ್ಷಿತ ಅರಣ್ಯವನ್ನು ಅನಧಿಕೃತವಾಗಿ ಅತಿಕ್ರಮಿಸಿರುವ ಕುರಿತ ವಿಚಾರವನ್ನು ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ರಜಾಕಾಲೀನ ಪೀಠದೆದುರು ವಿಚಾರಣೆಗೆ ಬಂದಿತ್ತು.

Also Read
ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು: ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ಅರಣ್ಯ ಭೂಮಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು ಎಲ್ಲಾ ಖಾಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಿತು.

ಸಕಾಲಕ್ಕೆ ಕ್ರಮ ಕೈಗೊಳ್ಳದಿರುವುದಕ್ಕೆ ರಾಜ್ಯ ಸರ್ಕಾರವನ್ನು ಸಿಜೆಐ ತರಾಟೆಗೆ ತೆಗೆದುಕೊಂಡರು.

ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಗಂಭೀರ ಆರೋಪಗಳು ಮತ್ತು ಅರಣ್ಯ ರಕ್ಷಣೆಯನ್ನು ಮಾಡಬೇಕಾದ ಜವಾಬ್ದಾರಿಯುತ ಅಧಿಕಾರಿಗಳು ಪ್ರತಿಕ್ರಿಯೆ ನೀಡದಿರುವುದನ್ನು ಪರಿಗಣಿಸಿದ ಪೀಠ, ತಕ್ಷಣ ನ್ಯಾಯಾಂಗ ಮಧ್ಯಪ್ರವೇಶಿಸಬೇಕಿದೆ ಎಂದಿತು.   

"ಆಘಾತಕಾರಿ ಸಂಗತಿಯೆಂದರೆ ತಮ್ಮ ಕಣ್ಣೆದುರೇ ಅರಣ್ಯ ಭೂಮಿ ಕಬಳಿಕೆಯಾಗುತ್ತಿರುವಾಗಲೂ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕುಳಿತಿದ್ದಾರೆ. ಹೀಗಾಗಿ ನಾವು ಸ್ವಯಂಪ್ರೇರಿತ ಪ್ರಕರಣ ಹೂಡುತ್ತಿದ್ದೇವೆ" ಎಂದು ಸಿಜೆಐ ನುಡಿದರು.

Also Read
ಶಿವಾಲಿಕ್ ಆನೆ ಅಭಯಾರಣ್ಯದಲ್ಲಿ 3,300 ಮರ ಕಡಿಯುವ ಪ್ರಸ್ತಾವನೆಗೆ ಉತ್ತರಾಖಂಡ ಹೈಕೋರ್ಟ್ ತಡೆ

ತನಿಖೆಗೆ ಆದೇಶಿಸಿದ ನ್ಯಾಯಾಲಯ ಇಂತಹ ಪರಿಸ್ಥಿತಿ ಮತ್ತೆ ತಲೆದೋರದಂತೆ ಕೆಲ ನಿರ್ಬಂಧಗಳನ್ನು ವಿಧಿಸಿತು. ಖಾಸಗಿ ವ್ಯಕ್ತಿಗಳು ಅಥವಾ ಮೂರನೇ ವ್ಯಕ್ತಿ ಅರಣ್ಯ ಭೂಮಿ ಕುರಿತಂತೆ ಹಕ್ಕು ಚಲಾಯಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ನಿರ್ಮಾಣ ಕಾರ್ಯ ನಡೆಯಬಾರದು ಎಂದು ಅದು ಎಚ್ಚರಿಕೆ ನೀಡಿತು. ಮುಂದಿನ ಆದೇಶದವರೆಗೆ ಈಗ ನಡೆಯುತ್ತಿರುವ, ಯೋಜಿತ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಅದು ತಾಕೀತು ಮಾಡಿತು.

ಅಲ್ಲದೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಸಂರಕ್ಷಣಾ ಕಾರ್ಯದರ್ಶಿಗೆ ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ನಿರ್ದೇಶಿಸಿತು. ಅತಿಕ್ರಮಣದ ಪ್ರಮಾಣ ಮತ್ತು ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಎಲ್ಲಾ ಸಂಬಂಧಿತ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿತು.

ಆಘಾತಕಾರಿ ಸಂಗತಿಯೆಂದರೆ ತಮ್ಮ ಕಣ್ಣೆದುರೇ ಅರಣ್ಯ ಭೂಮಿ ಕಬಳಿಕೆಯಾಗುತ್ತಿರುವಾಗಲೂ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕುಳಿತಿದ್ದಾರೆ.
ಸುಪ್ರೀಂ ಕೋರ್ಟ್‌

ಉತ್ತರಾಖಂಡದಲ್ಲಿ ಅಕ್ರಮ ಒತ್ತುವರಿ ಪ್ರಮುಖ ಆತಂಕದ ವಿಷಯವಾಗಿದ್ದು ನಗರ ಮತ್ತು ಪಟ್ಟಣ ಪ್ರದೇಶಗಳ ಸಮೀಪದಲ್ಲಿ ಅರಣ್ಯ ಭೂಮಿಯನ್ನು ಖಾಸಗಿ ಉದ್ದೇಶಗಳಿಗೆ ಅನಧಿಕೃತವಾಗಿ ಬಳಸಲಾಗುತ್ತಿದೆ. ಈ ಪರಿಸ್ಥಿತಿ ಪರಿಸರ ಸಂಬಂಧಿ ಅಪಾಯ ಮತ್ತು ರಕ್ಷಿತ ಭೂಮಿಯ ಅಕ್ರಮ ಹರಾಜಿನ ಬಗ್ಗೆ ಗಂಭೀರ ಕಳವಳಕ್ಕೆ ಆಸ್ಪದ ಕಲ್ಪಿಸಿದೆ.

ಚಳಿಗಾಲದ ರಜೆ ಅವಧಿ ಮುಗಿದ ಬಳಿಕ ಜನವರಿ 5ರಂದು ಸುಪ್ರೀಂ ಕೋರ್ಟ್‌ ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Kannada Bar & Bench
kannada.barandbench.com