ರಾಜ್ಯದ ಖಾಯಂ ನಿವಾಸಿಗಳಾಗಿದ್ದರೂ ರಾಜ್ಯದಾಚೆ ಶಿಕ್ಷಣ ಪಡೆದಿರುವಂತಹ ವಿದ್ಯಾರ್ಥಿಗಳಿಗೂ ಸಹ ವೈದ್ಯಕೀಯ ಕೋರ್ಸ್‌ಗಳಲ್ಲಿ ಇರುವ ಶೇ.85ರ ಸ್ಥಳೀಯ ಮೀಸಲಾತಿ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದ ತೆಲಂಗಾಣ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ [ತೆಲಂಗಾಣ ಸರ್ಕಾರ ಮತ್ತಿತರರು ಹಾಗೂ ಕಲ್ಲೂರಿ ನಾಗ ನರಸಿಂಹ ಇನ್ನಿತರರ ನಡುವಣ ಪ್ರಕರಣ] .
ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಪ್ರತಿವಾದಿಗಳಿಗೆ ನೋಟಿಸ್ ನೀಡಿತು.
ಸೆಪ್ಟೆಂಬರ್ 5ರ ಹೈಕೋರ್ಟ್ ಆದೇಶಕ್ಕೆ ಒಳಪಟ್ಟ ಪ್ರತಿವಾದಿ-ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ತೆಲಂಗಾಣ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶ (ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಪ್ರವೇಶ) ನಿಯಮಾವಳಿ- 2017 ರ ನಿಯಮ 3 (ಎ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 5ರಂದು ತೆಲಂಗಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಜುಲೈ 19ರಂದು ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ, ಅರ್ಹತಾ ಪರೀಕ್ಷೆಗೆ ಮೊದಲು ಅಭ್ಯರ್ಥಿಗಳು ಸತತ ನಾಲ್ಕು ವರ್ಷಗಳ ಕಾಲ ತೆಲಂಗಾಣದಲ್ಲಿ ಅಧ್ಯಯನ ಮಾಡಿರಬೇಕು ಅಥವಾ ನೆಲೆಸಿರಬೇಕು ಎಂದು ಸರ್ಕಾರ ಕಡ್ಡಾಯಗೊಳಿಸಿತ್ತು.
ಆಂಧ್ರಪ್ರದೇಶ ಮತ್ತು ಇತರ ನೆರೆಯ ರಾಜ್ಯಗಳಲ್ಲಿ ತಮ್ಮ ಮಧ್ಯಂತರ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಆದರೆ ಸ್ಥಳೀಯ ಮೀಸಲಾತಿ ಸೌಲಭ್ಯ ದೊರೆಯದ ಅಭ್ಯರ್ಥಿಗಳು ಇದರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ ಶ್ರೀನಿವಾಸ್ ರಾವ್ ಅವರಿದ್ದ ವಿಭಾಗೀಯ ಪೀಠ ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿತ್ತು.
ಆದಾಗ್ಯೂ, ನ್ಯಾಯಾಲಯವು ತಿದ್ದುಪಡಿಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ನಿರಾಕರಿಸಿತ್ತು. ಒಂದೊಮ್ಮೆ ಹಾಗೆ ಮಾಡಿದರೆ, ಆಗ ಭಾರತದಾದ್ಯಂತ ಇರುವ (ತೆಲಂಗಾಣ ಮೂಲದ) ವಿದ್ಯಾರ್ಥಿಗಳಿಗೆ ತೆಲಂಗಾಣದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ನೀಡಿದಂತಾಗುತ್ತದೆ ಎಂದು ವಿವರಿಸಿತ್ತು.
ಅರ್ಜಿದಾರರು ತೆಲಂಗಾಣ ರಾಜ್ಯದವರಾಗಿದ್ದರೆ ಅಥವಾ ಅವರು ರಾಜ್ಯದ ಖಾಯಂ ನಿವಾಸಿಗಳಾಗಿದ್ದರೆ, ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶಿಸಲಾಗಿತ್ತು.
ತೆಲಂಗಾಣ ರಾಜ್ಯದ ಖಾಯಂ ನಿವಾಸಿ ಎಂದು ವಿದ್ಯಾರ್ಥಿಯನ್ನು ಹೇಗೆ ಪರಿಗಣಿಸಬಹುದು ಎಂಬುದರ ಕುರಿತು ಮಾರ್ಗಸೂಚಿ ಅಥವಾ ನಿಯಮಾವಳಿ ರೂಪಿಸುವ ಸ್ವಾತಂತ್ರ್ಯವನ್ನು ಹೈಕೋರ್ಟ್ ರಾಜ್ಯಕ್ಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು.