ತ್ರಿವಳಿ ಹತ್ಯೆ: ಉತ್ತರ ಪ್ರದೇಶದ ಮಾಜಿ ಶಾಸಕನ ಕ್ಷಮಾದಾನ ಅರ್ಜಿ ಕುರಿತು ಕೂಡಲೇ ನಿರ್ಧರಿಸುವಂತೆ ಸುಪ್ರೀಂ ಸೂಚನೆ

ಬಿಎಸ್‌ಪಿ ಮಾಜಿ ಶಾಸಕ ಸಿಂಗ್‌ಗೆ ತ್ರಿವಳಿ ಕೊಲೆಗೆ ಶಿಕ್ಷೆ ವಿಧಿಸಲಾಗಿದೆ ಎಂಬ ಕಾರಣಕ್ಕೆ ಕ್ಷಮಾದಾನ ನಿರಾಕರಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಏಪ್ರಿಲ್ 29ರಂದು ರದ್ದುಗೊಳಿಸಿತ್ತು.
Supreme Court, Uday Bhan Singh
Supreme Court, Uday Bhan Singh Image source: Facebook
Published on

ತ್ರಿವಳಿ ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ಮಾಜಿ ಶಾಸಕ ಉದಯ್ ಭಾನ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಕುರಿತು ಕೂಡಲೇ ನಿರ್ಧಾರ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ [ಉದಯ್ ಭಾನ್ ಸಿಂಗ್ ಅಲಿಯಾಸ್‌ ಡಾಕ್ಟರ್‌ ಸಿಂಗ್‌ ಮತ್ತು ದೀಪಕ್‌ ಕುಮಾರ್‌ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ಸೂಚಿಸಿದಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೆ ಇದ್ದ ಕಾರಣಕ್ಕೆ ಸಿಂಗ್ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಓಕಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ರಜಾಕಾಲೀನ ಪೀಠ ಈ ಆದೇಶ ನೀಡಿದೆ.

ತಾನು 2024ರ ಏಪ್ರಿಲ್ 29ರಲ್ಲಿ ನೀಡಿದ್ದ ಆದೇಶವನ್ನು ಸರ್ಕಾರ ತಕ್ಷಣ ಪಾಲಿಸಬೇಕು. ಅಲ್ಲದೆ ಈ ಕುರಿತಂತೆ ಹೊರಡಿಸಲಾದ ಆದೇಶವನ್ನು ದಾಖಲೆಯಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.  

Also Read
ಲೋಕಸಭಾ ಚುನಾವಣೆ: ಮತದಾನ ಮಾಡಲು ಧಾರವಾಡಕ್ಕೆ ಪ್ರವೇಶಿಸಲು ಶಾಸಕ ವಿನಯ್‌ ಕುಲಕರ್ಣಿಗೆ ಹೈಕೋರ್ಟ್‌ ಅನುಮತಿ

ಬಿಎಸ್‌ಪಿ ಮಾಜಿ ಶಾಸಕ ಸಿಂಗ್‌ಗೆ ತ್ರಿವಳಿ ಕೊಲೆಗೆ ಶಿಕ್ಷೆ ವಿಧಿಸಲಾಗಿದೆ ಎಂಬ ಕಾರಣಕ್ಕೆ ಕ್ಷಮಾದಾನ ನಿರಾಕರಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ನ್ಯಾಯಮೂರ್ತಿ ಓಕಾ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ಪೀಠ ಏಪ್ರಿಲ್ 29ರಂದು ರದ್ದುಗೊಳಿಸಿತ್ತು.

ಇದೇ ರೀತಿಯ ಉಳಿದ ಮೂರು ಪ್ರಕರಣಗಳಲ್ಲಿ ತನಗೆ ಈಗಾಗಲೇ ಕ್ಷಮಾದಾನ ನೀಡಲಾಗಿದೆ. ಈ ಪ್ರಕರಣಗಳಲ್ಲೂ ಕ್ಷಮಾದಾನ ನೀಡಬೇಕು ಎಂಬ ಸಿಂಗ್‌ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಮನವಿ ಮರುಪರಿಶೀಲಿಸುವಂತೆ ಉ. ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಆದರೆ ಈ ನಿರ್ದೇಶನ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸಿಂಗ್‌ ಅವರು ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿದೆ ಎಂದು ತಿಳಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈಗಾಗಲೇ ತಾನು 20 ವರ್ಷ 7 ತಿಂಗಳ ಜೈಲುವಾಸ ಅನುಭವಿಸಿರುವುದಾಗಿ ಅವರು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ ಸರ್ಕಾರ ಕ್ಷಮಾದಾನ ಕುರಿತು ಕೂಡಲೇ ನಿರ್ಧರಿಸುವಂತೆ ಸೂಚಿಸಿತು.

Kannada Bar & Bench
kannada.barandbench.com