
ಶಿಕ್ಷಕಿಯೊಬ್ಬರ ಅಣತಿಯಂತೆ 2023ರಲ್ಲಿ ಸಹಪಾಠಿಗಳಿಂದ ಕಪಾಳಮೋಕ್ಷಕ್ಕೊಳಗಾದ ಮುಜಾಫರ್ ನಗರದ ಮುಸ್ಲಿಂ ವಿದ್ಯಾರ್ಥಿಯ ಶಾಲಾ ವೆಚ್ಚ ಭರಿಸವಂತೆ ಸುಪ್ರೀಂ ಕೋರ್ಟ್ ಬುಧವಾರ ಉತ್ತರ ಪ್ರದೇಶ (ಯುಪಿ) ಸರ್ಕಾರಕ್ಕೆ ನಿರ್ದೇಶನ ನೀಡಿದೆ [ತುಷಾರ್ ಗಾಂಧಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಶಾಲೆಯೇ ಶೈಕ್ಷಣಿಕ ವೆಚ್ಚ ಭರಿಸುವಂತೆ ಸರ್ಕಾರವು ಮನವೊಲಿಸಬಹುದಾದರೂ ವೆಚ್ಚ ಭರಿಸುವ ಪ್ರಾಥಮಿಕ ಜವಾಬ್ದಾರಿಯು ಸರ್ಕಾರದ್ದೇ ಅಗಿರಲಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.
"ಮಗುವಿನ ಶಾಲಾ ಶಿಕ್ಷಣ ಮುಗಿಯುವವರೆಗೆ ಆತನ ಬೋಧನಾ ಶುಲ್ಕ, ಸಮವಸ್ತ್ರ ಪುಸ್ತಕ ಹಾಗೂ ಸಾರಿಗೆ ವೆಚ್ಚ ಭರಿಸುವುದು ರಾಜ್ಯ ಸರ್ಕಾರದ ಬಾಧ್ಯತೆ " ಎಂದು ನ್ಯಾಯಾಲಯ ಆದೇಶಿಸಿತು.
ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಹೋಮ್‌ವರ್ಕ್ ಮಾಡದಿದ್ದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡುವಂತೆ ಅನ್ಯಧರ್ಮದ ವಿದ್ಯಾರ್ಥಿಗಳಿಗೆ ಪ್ರಚೋದಿಸಿದ ಆರೋಪ ಎದುರಿಸುತ್ತಿದ್ದ ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಮಗುವನ್ನು ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ವಿದ್ಯಾರ್ಥಿಯನ್ನು ಬೇರೆ ಶಾಲೆಗೆ ವರ್ಗಾಯಿಸಲಾಗಿತ್ತು.
ಪ್ರಕರಣದ ಬಗ್ಗೆ ಕಾಲಮಿತಿಯ ಮತ್ತು ಸ್ವತಂತ್ರ ತನಿಖೆ ನಡೆಸಬೇಕು. ಜೊತೆಗೆ ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ತಡೆಗೆ ಕ್ರಮ ತೆಗೆದುಕೊಳ್ಳಬೇಕೆಂದು ತುಷಾರ್ ಗಾಂಧಿ ಕೋರಿದ್ದರು.
ಅಕ್ಟೋಬರ್ 2023ರಲ್ಲಿ, ಉತ್ತರ ಪ್ರದೇಶ ಸರ್ಕಾರ ಶಾಲಾ ಶಿಕ್ಷಕಿಯ ಮೇಲೆ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ನಂತರ ತ್ರಿಪ್ತಾ ನ್ಯಾಯಾಲಯದ ಮುಂದೆ ಶರಣಾಗಿ ಜಾಮೀನು ಪಡೆದಿದ್ದರು.
ವಿದ್ಯಾರ್ಥಿಯ ಶಾಲಾ ವೆಚ್ಚ ಭರಿಸಲು ಸರ್ಕಾರ ಪ್ರಾಯೋಜಕರನ್ನು ಹುಡುಕಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಸೂಚಿಸಿತ್ತು.
ಇಂದು, ತುಷಾರ್ ಗಾಂಧಿ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಶದಾನ್ ಫರಾಸತ್, ಮಗುವಿನ ಬೋಧನಾ ಶುಲ್ಕ ಮತ್ತು ಶಾಲಾ ಸಮವಸ್ತ್ರದ ವೆಚ್ಚ ಭರಿಸುವಂತೆ ನೋಡಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ವಾದಿಸಿದರು.
"ಇದು ಸರ್ಕಾರಕ್ಕೆ ಮುಜುಗರದ ಸಂಗತಿ. ಶಾಲೆಗೆ ನೇರವಾಗಿ ಪಾವತಿಸುವುದು ಸರ್ಕಾರದ ಜವಾಬ್ದಾರಿ " ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸರ್ಕಾರ ಸೈಯದ್ ಮುರ್ತಜಾ ಸ್ಮಾರಕ ಟ್ರಸ್ಟ್ ವಿದ್ಯಾರ್ಥಿಗೆ ಹಣ ನೀಡಲು ಮುಂದಾಗಿದೆ ಎಂದಿತು. ಆದರೆ ಮಗುವಿನ ಶಿಕ್ಷಣ ಪೂರ್ಣಗೊಳ್ಳುವವರೆಗೆ ಆತನ ಶಿಕ್ಷಣದ ವೆಚ್ಚ ಭರಿಸುವುದು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 17ರಂದು ನಡೆಯಲಿದೆ.